ಚಿತ್ರದುರ್ಗ: ಬದುಕು ಮತ್ತು ಸಂಸ್ಕೃತಿ ಬೇರೆ ಬೇರೆ ಅಲ್ಲ. ಇವೆರಡರ ಅನುಸಂಧಾನ ನಮ್ಮ ಕೈಯಲ್ಲೇ ಇದೆ ಎಂದು ಚಿಂತಕ ಪೂರ್ಣಪ್ರಜ್ಞ ಬೇಳೂರು ಹೇಳಿದರು.
ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್ನೆಸ್ಸೆಸ್, ಎನ್‌ಸಿಸಿ, ಯುವ ರೆಡ್‌ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ನಮ್ಮ ಬದುಕನ್ನು ಪಂಚಭೂತಗಳು ರೂಸುತ್ತವೆ. ಬದುಕು ಬದಲಾದಂತೆ ಸಂಸ್ಕೃತಿಯೂ ಬದಲಾಗುತ್ತದೆ. ಹಿಂದೆ ಬೀಸುವ ಕಲ್ಲು, ಮಣ್ಣಿನ ಮನೆ, ಒನಕೆಯ ಬಳಕೆಯ ಸಂಸ್ಕೃತಿ ಇತ್ತು. ಆದರೆ ಈಗ ಯಂತ್ರ ಸಂಸ್ಕೃತಿಗೆ ಒಗ್ಗಿಕೊಂಡಿದ್ದೇವೆ ಎಂದರು.
4 ರಿಂದ 12ನೇ ಶತಮಾನದಲ್ಲಿ ಸಾಕಷ್ಟು ಬದಲಾವಣೆ ನಡೆದವು. ಈ ಅವಧಿಯ ಬದಲಾವಣೆಗೆ ಕ್ರಾಂತಿ ಎನ್ನುತ್ತಾರೆ. ಸುನಾಮಿ ಎಂದರೂ ತಪ್ಪಾಗಲಾರದು. ಎಲ್ಲವೂ ಧ್ವಂಸವಾದವು. ಒಂದು ಸುನಾಮಿಗೆ ಮಣ್ಣಿನ ಮನೆ ಬಿದ್ದು ಹೋದರೆ ಮತ್ತೆ ಅಂತಹ ಮನೆಯನ್ನು ಕಟ್ಟುವುದಿಲ್ಲ. ಬದಲಾಗಿ ಕಟ್ಟಡ ಸಂಸ್ಕೃತಿಗೆ ಮಾರು ಹೋಗಿ ಸಿಮೆಂಟ್, ಮರಳು ಬಳಸಿ ಗಟ್ಟಿಯಾದ ಮನೆ ಕಟ್ಟುತ್ತೇವೆ. ಆದರೆ, ಮತ್ತೆ ಬರುವ ಸುನಾಮಿ ಈ ಮನೆಯನ್ನೂ ಬೀಳಿಸುವ ಶಕ್ತಿ ಹೊಂದಿರುತ್ತದೆ ಎನ್ನುವುದು ನಮ್ಮ ಅರಿವಿಗೆ ಬರುವುದೇ ಇಲ್ಲ ಎಂದು ವಿಷಾದಿಸಿದರು.
ಶೂನ್ಯ ಜಗತ್ತಿಗೆ ಭಾರತದ ಕೊಡುಗೆ. ಇದನ್ನು ಆವಿಷ್ಕಾರ ಮಾಡಿದ ಆರ್ಯಭಟ ಕನ್ನಡಿಗ. ಅವರ ಆರ್ಯಭಟೀಯ 121 ಕನ್ನಡ ಶ್ಲೋಕಗಳನ್ನು ಹೊಂದಿದೆ. ಈ ವಿಚಾರ ಅನೇಕರಿಗೆ ಗೊತ್ತಿಲ್ಲ. ಹಿರಿಯ ಕಾದಂಬರಿಕಾರ ತರಾಸು ಚಿತ್ರದುರ್ಗದವರೇ ಆಗಿದ್ದರೂ ಇಲ್ಲಿನ ವಿದ್ಯಾರ್ಥಿಗಳು ಅವರ ಕೃತಿಗಳನ್ನು ಓದಿಲ್ಲ. ಇದು ನಮ್ಮ ಸಮಾಜದಲ್ಲಿರುವ ವಿಸ್ಮೃತಿ. ಸಂಸ್ಕೃತಿಯ ಜತೆ ವಿಸ್ಮೃತಿಯೂ ಸೇರಿರುತ್ತದೆ. ಹಳೆಯದೆಲ್ಲವನ್ನೂ ಮರೆಯುವುದೇ ವಿಸ್ಮೃತಿ ಎಂದು ಹೇಳಿದರು.
ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ| ಎಂ.ವಿ. ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳು ಮುಜುಗರದಿಂದ ತಮ್ಮಲ್ಲಿರುವ ಪ್ರತಿಭೆಗಳನ್ನು ಮುಚ್ಚಿಡಬೇಡಿ. ಕಾಲೇಜಿನಿಂದ ಸಾಕಷ್ಟು ಅವಕಾಶ ಕಲ್ಪಿಸಿದ್ದು ಎಲ್ಲದರಲ್ಲೂ ಸಕ್ರಿಯವಾಗಿ ಭಾಗವಹಿಸಿ. ಈ ಮೂಲಕ ಪಠ್ಯಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿದಾಗ ವಿದ್ಯಾರ್ಥಿ ಜೀವನ ಪರಿಪೂರ್ಣವಾಗುತ್ತದೆ ಎಂದರು.
ಪ್ರಾಚಾರ್ಯ ಪ್ರೊ| ಎಂ. ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಐಕ್ಯುಎಸಿ ಸಂಚಾಲಕ ಪ್ರೊ| ಕೆ.ಕೆ. ಕಾಮಾನಿ, ಎನ್‌ಸಿಸಿ ಅಧಿಕಾರಿ ಪ್ರೊ| ದಿನೇಶ್‌ಕುಮಾರ್, ಕ್ರೀಡಾ ಸಮಿತಿಯ ಡಾ| ಡಿ. ನಾಗರಾಜ್, ಎನ್ನೆಸ್ಸೆಸ್‌ನ ಪ್ರೊ| ಎನ್. ಶಶಿಧರ್, ಪ್ರೊ| ನಟೇಶ್, ಪ್ರೊ| ಧನಂಜಯಕುಮಾರ್, ರೆಡ್‌ಕ್ರಾಸ್‌ನ ಪ್ರೊ| ರಮೇಶ್ ಅಯ್ಯನಹಳ್ಳಿ, ಸ್ಕೌಟ್ಸ್ ಮತ್ತು ಗೈಡ್ಸ್‌ನ ಪ್ರೊ| ವಿ.ಜಿ. ನಾಗವೇಣಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ| ಎನ್.ಬಿ. ಗಟ್ಟಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.