ಚಿತ್ರದುರ್ಗ: ಸಮಾಜದಲ್ಲಿ ಸಾಧನೆ ಮಾಡಿದವರು ಮಾತ್ರ ಎಲ್ಲರ ಮನಸ್ಸಿನಲ್ಲಿ ಉಳಿಯುತ್ತಾರೆ. ಜಾತಿ, ಧರ್ಮಗಳಿಗಿಂತ ಪ್ರೀತಿ, ದಯೆ, ಸ್ನೇಹ ಮುಖ್ಯ ಎನ್ನುವುದನ್ನು ಕಾಲೇಜು ವಿದ್ಯಾರ್ಥಿಗಳು ಅರಿತು ಅದನ್ನು ಸಮಾಜಕ್ಕೆ ತಿಳಿಸಬೇಕು ಎಂದು ಸಾಹಿತಿ ಹಾಗೂ ಕಾದಂಬರಿಕಾರ ಡಾ| ಬಿ.ಎಲ್. ವೇಣು ಕರೆ ನೀಡಿದರು.
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್‌ಸಿಸಿ, ಎನ್ನೆಸ್ಸೆಸ್, ಯುವ ರೆಡ್‌ಕ್ರಾಸ್, ರೋವರ್ ರೇಂಜರ್ ಮತ್ತಿತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜು ಒಂದು ಪ್ರಪಂಚ. ಈ ದಿನಗಳು ಮುಂದೆ ಸಿಗಲಾರವು. ಈಗಿನ ನಿಷ್ಕಳಂಕ ಮನಸ್ಥಿತಿ ಮುಂದೆ ಸಿಗುವುದು ಕಷ್ಟ. ಇಲ್ಲಿ ಸರಿ, ತಪ್ಪುಗಳನ್ನು ವಿಮರ್ಶೆ ಮಾಡಿಕೊಂಡು ಏನು ಮಾಡಬೇಕು, ಮಾಡಬಾರದು ಎನ್ನುವುದನ್ನು ತಿಳಿಸಿ ಹೇಳಲು ಗುರುಗಳಿರುತ್ತಾರೆ. ಇದನ್ನೇ ನಿಜಜೀವನದಲ್ಲೂ ಅಳವಡಿಸಿಕೊಂಡು ಇಲ್ಲಿ ಪಾಸಾದಂತೆ ಅಲ್ಲಿಯೂ ಪಾಸಾಗಬೇಕು ಎಂದರು.
ಕಾಲೇಜು ಹಂತಕ್ಕೆ ಬರುವ ವಿದ್ಯಾರ್ಥಿಗಳು ಪಿಯುಸಿ ನಂತರ ಐದಾರು ವರ್ಷ ಕಷ್ಟ ಪಟ್ಟು ಓದಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಅವಕಾಶ ಸಿಗುತ್ತದೆ. ಹಿಂದೆ ವಿಜ್ಞಾನ ವಿದ್ಯಾರ್ಥಿಗಳು ಮಾತ್ರ ಬುದ್ಧಿವಂತರು, ಕಲಾ ವಿದ್ಯಾರ್ಥಿಗಳು ದಡ್ಡರು ಎನ್ನುವ ಮನೋಭಾವ ಇತ್ತು. ಆದರೆ ನನ್ನ ದೃಷ್ಟಿಯಲ್ಲಿ ಕಲಾ ವಿದ್ಯಾರ್ಥಿಗಳೇ ಹೆಚ್ಚು ಬುದ್ಧಿವಂತರು. ಕಲಾ ವಿಭಾಗದಲ್ಲಿ ಸಾಕಷ್ಟು ಅವಕಾಶಗಳಿವೆ. ನಿಮ್ಮ ವ್ಯಕ್ತಿತ್ವಕ್ಕೆ ಸರಿಹೊಂದುವಂತಹ ಕೋರ್ಸ್ ಆಯ್ಕೆ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಸರ್ಕಾರಿ ಕಲಾ ಕಾಲೇಜು ಪ್ರಾಚಾರ್ಯ ಪ್ರೊ| ಟಿ.ಎಲ್. ಸುಧಾಕರ್ ಮಾತನಾಡಿ, ನಮ್ಮ ಕಾಲೇಜು ರಾಜ್ಯದಲ್ಲೇ ಅತ್ಯುತ್ತಮ ಶ್ರೇಣಿ ಪಡೆದಿದೆ. ಹಿಂದೆ ಮೂಲ ಸೌಕರ್ಯ ವಂಚಿತವಾಗಿದ್ದ ಕಾಲೇಜಿಗೆ ಸಚಿವರಾಗಿದ್ದ ಎಚ್. ಆಂಜನೇಯ ಅವರು 10 ಕೋಟಿ ರೂ. ಅನುದಾನ ಒದಗಿಸಿ ಭವ್ಯವಾದ ಕಟ್ಟಡ ನಿರ್ಮಾಣಕ್ಕೆ ಕಾರಣರಾಗಿದ್ದಾರೆ ಎಂದರು.
ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ| ಕೆ.ಸಿ. ಶರಣಪ್ಪ ಮಾತನಾಡಿದರು. ವಾಣಿಜ್ಯಶಾಸ್ತ್ರ ಸಹ ಪ್ರಾಧ್ಯಾಪಕ ಪ್ರೊ| ಕೆ. ರಾಮರಾವ್, ಐಕ್ಯೂಎಸಿ ಸಂಚಾಲಕ ಪ್ರೊ| ಜಿ.ಡಿ. ಸುರೇಶ್, ಕ್ರೀಡಾ ಸಮಿತಿ ಸಂಚಾಲಕ ಎಂ.ಜೆ. ಸಾದಿಕ್, ಅಧ್ಯಾಪಕರ ಸಂಘದ ಕಾರ್ಯದರ್ಶಿ ಪ್ರೊ| ಎಲ್. ನಾಗರಾಜಪ್ಪ, ರೋವರ್ಲೀ ಡರ್ ಪ್ರೊ| ರಂಗಸ್ವಾಮಿ, ಎನ್‌ಸಿಸಿ ಅಧಿಕಾರಿ ಡಾ| ಎಸ್.ಆರ್. ಲೇಪಾಕ್ಷ, ರೇಂಜರ್ ಲೀಡರ್ ಡಾ| ಸಿ.ಬಿ. ಪ್ರೇಮಪಲ್ಲವಿ, ರೆಡ್‌ಕ್ರಾಸ್ ಸಂಚಾಲಕ ಡಾ| ಎಚ್. ಬಸವರಾಜ್, ಎನ್ ಎಸ್‌ಎಸ್ ಅ ಧಿಕಾರಿ ಡಾ| ಶ್ಯಾಮರಾಜ, ಡಾ|
ಗಂಗಾಧರ ಮತ್ತಿತರರು ಉಪಸ್ಥಿತರಿದ್ದರು.