ಸಿರಿಗೆರೆ(ಚಿತ್ರದುರ್ಗ): ಮನೆಯಲ್ಲಿನ ಅಡುಗೆ ಅನಿಲ ಸಿಲೆಂಡರ್ ಇದ್ದಕ್ಕಿದ್ದಂತೆ ಸ್ಪೋಟಗೊಂಡ ಪರಿಣಾಮವಾಗಿ ಶೀಟಿನ ಮನೆಯೊಂದು ಸಂಪೂರ್ಣ ಭಸ್ಮವಾಗಿರುವ ಘಟನೆ ಸಮೀಪದ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಗ್ರಾಮದ ಗೋವಿಂದಪ್ಪ ಮತ್ತು ಅಂಜಿನಮ್ಮ ಇವರಿಗೆ ಸೇರಿದ ಮನೆ ಸಂಪೂರ್ಣ ಕುಸಿದು ಹೋಗಿದೆ. ಎಂದಿನಂತೆ ಅಡುಗೆ ಸಿದ್ಧಗೊಳಿಸಿ ಊಟ ಮಾಡಿ ಕೂಲಿ ಕೆಲಸಕ್ಕೆಂದು ಬೆಳಿಗ್ಗೆಯೇ ಮನೆಯಿಂದ ತೆರಳಿದ್ದಾರೆ. ಮಧ್ಯಾಹ್ನ 3.3೦ ರ ಸುಮಾರಿನಲ್ಲಿ ಇದ್ದಕ್ಕಿದ್ದಂತೆ ಸಿಲಿಂಡರ್ ಸ್ಪೋಟಗೊಂಡು ಮನೆಗೆ ಬೆಂಕಿಯ ಜ್ವಾಲೆಗಳು ಆವರಿಸಿವೆ. ನೆರೆಯವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಯತ್ನ ಮಾಡಿದ್ದಾರೆ. ಮನೆಯಲ್ಲಿನ ಆಲ್ಮೈರಾ, ಟ್ರಂಕ್, ಬಟ್ಟೆಬರೆ, ಅಡುಗೆ ಪರಿಕರಗಳು ಸಂಗ್ರಹಿಸಿಟ್ಟುಕೊಂಡಿದ್ದ ದವಸ ಎಲ್ಲವೂ ಅಗ್ನಿಗೆ ಆಹುತಿಯಾಗಿವೆ.
ಕೂಲಿ ಕೆಲಸಕ್ಕೆ ಹೋಗುವಾಗ ಸಿಲಿಂಡರ್ ನಂದಿಸಿ ಹೋಗಿರುವುದಾಗಿ ಅಂಜಿನಮ್ಮ ಹೇಳುತ್ತಾರೆ. ಬೆಳಿಗ್ಗೆ ಸುಮಾರು 1೦ ಗಂಟೆಗೆ ಮನೆಯಿಂದ ಕೆಲಸಕ್ಕೆ ತೆರಳಿದ್ದೆವು. ಸಿಲಿಂಡರ್ 3.30 ರ ಸಮಯದಲ್ಲಿ ಸ್ಪೋಟಗೊಂಡಿದೆ. ಇದರಿಂದ ನಮ್ಮ ಕುಟುಂಬ ಬೀದಿಗೆ ಬಂದಿದೆ ಎಂದು ಅಂಜಿನಮ್ಮ ತಮ್ಮ ಅಳಲು ತೋಡಿಕೊಂಡರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸರಸ್ವತಿ ಸ್ವಾಮಿ, ಕಾರ್ಯದರ್ಶಿ ಸತೀಶ್ ಬಾಬು, ಪಿಡಿಓ ಜಯಶೀಲಾ, ಗ್ರಾಪಂ ಸದಸ್ಯರಾದ ಸುರೇಶ್, ವಸಂತಕುಮಾರ್, ಅಶೋಕ್ ಕುಮಾರ್, ಧನಂಜಯ, ತ್ರಿವೇಣಿ, ದೇವರಾಜ್, ಚಿದಾನಂದ ಮುಂತಾದವರು ಸ್ಥಳಕ್ಕೆ ಭೇಟಿ ಕೊಟ್ಟಿದ್ದರು.
ಸಂತ್ರಸ್ತರಿಗೆ ಗ್ರಾಮ ಪಂಚಾಯ್ತಿ ವತಿಯಿಂದ 10 ಸಾವಿರ ರೂ.ಗಳ ನೆರವು ನೀಡಲಾಯಿತು.
ಚಿತ್ರದುರ್ಗದ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿದರು.