ಚಿತ್ರದುರ್ಗ: ಜಂಗಮರು ತಮ್ಮ ವೈಯಕ್ತಿಕ ಬದುಕಿಗಿಂತ ಸಾಮಾಜಿಕ ಬದುಕಿಗೆ ಅರ್ಪಿಸಿಕೊಂಡು ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸುತ್ತಾರೆ. ಹಾಗಾಗಿ ಜಂಗಮರು ಜ್ಞಾನ ಸಂಸ್ಕೃತಿಯ ಹರಿಕಾರರು ಎಂದು ತುಮಕೂರಿನ ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆ ಶಾಲಾ ಆವರಣದಲ್ಲಿ ಜಿಲ್ಲಾ ಹಾಗೂ ತಾಲೂಕು ಬೇಡ ಜಂಗಮ ಸಮಾಜದ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಶಿಷ್ಯವೇತನ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಜಂಗಮರು ಜ್ಞಾನಕ್ಕೆ ಆದ್ಯತೆ ನೀಡಿರುವುದರಿಂದ ಗುರು ಎಂದು ಕರೆಯುತ್ತಾರೆ. ಜಂಗಮರಿಗೆ ಗುರು ಸ್ಥಾನ ನೀಡಿ ಎಲ್ಲ ಸಮಾಜಗಳು ಗೌರವಿಸಿಕೊಂಡು ಬಂದಿದೆ. ಜಂಗಮ ಸಮಾಜಕ್ಕೆ ತನ್ನದೇ ಆದ ಗೌರವ, ಘನತೆಗಳಿದ್ದು, ಅದನ್ನು ಉಳಿಸಿಕೊಂಡು ಹೋಗುವ ಹೊಣೆ ಎಲ್ಲರ ಮೇಲಿದೆ. ಸಾಮಾನ್ಯವಾಗಿ ಜಂಗಮರನ್ನು ಎಲ್ಲರೂ ಗೌರವಿಸುತ್ತಾರೆ. ಏನೂ ಇಲ್ಲದವರನ್ನೂ ಗೌರವಿಸುವುದು ನಮ್ಮ ದೇಶದ ಸಂಸ್ಕೃತಿ ಹಾಗೂ ವಿಶೇಷತೆ. ಹಾಗಾಗಿ ದೇಶದದಲ್ಲಿ ತ್ಯಾಗಿಗಳಿಗೆ, ಸಾಧು-ಸಂತರಿಗೆ, ಸತ್ಪುರುಷರಿಗೆ, ವಿರಕ್ತರಿಗೆ, ಜಂಗಮರಿಗೆ ಇಂದಿಗೂ ಗೌರವವಿದೆ ಎಂದರು.
ಪ್ರತಿಯೊಬ್ಬ ಜಂಗಮರೂ ಸಮಾಜದ ಸಂಸ್ಕೃತಿ ಹಾಗೂ ಜ್ಞಾನದ ಚೌಕಿದಾರ್ ಆಗಿದ್ದಾರೆ. ಜಗದ ಸಂಸ್ಕೃತಿ ಕಾಯುವುದು ಜಂಗಮನ ಕರ್ತವ್ಯ. ಧರ್ಮ, ಕರ್ಮ, ಸಂಸ್ಕೃತಿ ಸರಿಯಾಗಿ ಇದೆಯೋ, ಇಲ್ಲವೋ ಎಂಬುದನ್ನು ಪರೀಕ್ಷಿಸಿ ಸರಿಯಾದ ಮಾರ್ಗದಲ್ಲಿ ನಡೆಯದಿದ್ದರೆ ಜಂಗಮನ ಕೈಯಲ್ಲಿರುವ ಬೆತ್ತದಿಂದ ಶಿಕ್ಷೆ ಕೊಡುತ್ತೇನೆ ಎಂಬ ಎದೆಗಾರಿಕೆ ಜಂಗಮ ಸಂಸ್ಕೃತಿಯಲ್ಲಿ ಇದೆ. ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರೂ ಬದ್ಧತೆಯಿಂದ ವ್ಯಾಸಂಗ ಮಾಡಬೇಕು. ವಿದ್ಯೆಯಿಂದ ವಿಶ್ವಾಸ ಮೂಡುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಉತ್ತಮವಾಗಿ ಓದಬೇಕು ಎಂದು ಕರೆ ನೀಡಿದರು.
ಸಮಾಜಸೇವೆ ಮಾಡುತ್ತಿರುವ ಮಠಗಳಲ್ಲಿ ಎರಡು ಪ್ರಕಾರದ ಮಠಗಳಿವೆ. ಒಂದು ಹೈವೋಲ್ಟೇಜ್ ಮಠದ ಪ್ರಕಾರವಾದರೆ, ಮತ್ತೂಂದು ಲೋ ವೋಲೆrೕಜ್ ಮಠಗಳಾಗಿವೆ. ಇದರ ಜತೆಗೆ ಹೈ ಪ್ರೊಪೈಲ್ ಸ್ವಾಮಿಗಳು ಹಾಗೂ ಲೋ ಪ್ರೊಪೈಲ್ ಸ್ವಾಮಿಗಳು ಎಂದು ಎರಡು ಪ್ರಕಾರದ ಸ್ವಾಮೀಜಿಗಳಿದ್ದಾರೆ.
ಹೈವೋಲ್ಟೇಜ್ ಮಠಗಳಲ್ಲಿ ಲೋ ಪ್ರೊಪೈಲ್ ಸ್ವಾಮೀಜಿಗಳಿದ್ದರೆ, ಲೋ ವೋಲೆrೕಜ್ ಮಠಗಳಲ್ಲಿ ಹೈಪ್ರೊಪೈಲ್ ಸ್ವಾಮೀಜಿಗಳು ಇರುವುದು ದುರಂತ ಎಂದು ಬೇಸರ ವ್ಯಕ್ತ ಪಡಿಸಿದರು.
ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎಂ. ವೀರೇಶ್ ಮಾತನಾಡಿ, ಬ್ರಾಹ್ಮಣರ ನಂತರ ವಿಶೇಷ ಸ್ಥಾನಮಾನ ಲಭಿಸಿರುವುದು ಜಂಗಮ ಸಮುದಾಯಕ್ಕೆ ಮಾತ್ರ. ಇತರೆ ಸಮುದಾಯದವರ ಏಳಿಗೆಗೆ ಶ್ರಮಿಸುವ ಜಂಗಮ ಸಮುದಾಯ ಹಣದ ಅಭಾವದಿಂದ ಬಡತನದಲ್ಲಿದೆ. ಇಂತಹ ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಲು ಶಿಕ್ಷಣವೊಂದೇ ಮಾರ್ಗ ಎಂದು ಪ್ರತಿಪಾದಿಸಿದರು.
ಬೇಡ ಜಂಗಮ ಸಮುದಾಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಅವರನ್ನೆಲ್ಲ ಗುರುತಿಸಿ ಪ್ರೋತ್ಸಾಹಿಸಬೇಕು. ಶೈಕ್ಷಣಿಕ ಪ್ರಗತಿ ಸಾಧಿಸಿ ಸಂಸ್ಕಾರಯುತ ಜೀವನ ನಡೆಸಲು ವಿದ್ಯಾರ್ಥಿಗಳು, ಪೋಷಕರು ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದರು.
ತಾಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷ ಕಲ್ಲೇಶಯ್ಯ, ಕಾರ್ಯಾಧ್ಯಕ್ಷ ಎಂ.ಟಿ. ಮಲ್ಲಿಕಾರ್ಜುನಸ್ವಾಮಿ, ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಸಂಸ್ಥಾಪಕ ಬಿ. ವಿಜಯಕುಮಾರ್, ನಿವೃತ್ತ ಪ್ರಾಧ್ಯಾಪಕ ಡಾ| ಎಂ.ಕೆ. ಪ್ರಭುದೇವ್, ಷಡಕ್ಷರಯ್ಯ ಇದ್ದರು.