Advertisement

ದೇಶದ ಪ್ರಗತಿಗೆ ಬದ್ಧತೆಯಿಂದ ಕೆಲಸ ಮಾಡಿ

01:22 PM Dec 23, 2019 | Naveen |

ಚಿತ್ರದುರ್ಗ: ದೇಶದ ಅಭಿವೃದ್ಧಿಗಾಗಿ ರಾಜಕಾರಣಿಗಳಿಗಿಂತ ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು. ಅಧಿಕಾರಿಗಳು ಮನಸ್ಸು ಮಾಡಿದರೆ ದೇಶದ ಚಿತ್ರಣವನ್ನೇ ಬದಲಾಯಿಸಬಹುದು ಎಂದು ಸಂಸದ ಎ. ನಾರಾಯಣಸ್ವಾಮಿ ಹೇಳಿದರು.

Advertisement

ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಸರ್ಕಾರಿ ನೌಕರರ ಸಂಘದ ರಾಜ್ಯ ಮತ್ತು ಜಿಲ್ಲಾ ಶಾಖೆಗಳಿಂದ ಆಯೋಜಿಸಿದ್ದ ಸರ್ಕಾರಿ ನೌಕರರ ಪ್ರತಿಭಾವಂತ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಸಂಘದ ಚುನಾಯಿತ ಪ್ರತಿನಿಧಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ಸರ್ಕಾರಿ ನೌಕರರು ತಮ್ಮ ಕೆಲಸ ಮಾಡಿಸಿಕೊಳ್ಳುವ ಉದ್ದೇಶದಿಂದ ರಾಜಕಾರಣಿಗಳಿಗೆ ಲಂಚ, ಪರ್ಸಂಟೇಜ್‌ ಕೊಡುವುದನ್ನು ನಿಲ್ಲಿಸಿದರೆ ದೇಶ ಉದ್ಧಾರವಾಗುತ್ತದೆ ಎಂದರು.

ಬಡತನ ಮತ್ತು ಹಸಿವು ನಮ್ಮನ್ನು ಪ್ರಜ್ಞಾವಂತರನ್ನಾಗಿಸುತ್ತದೆ. ಹೀಗೆ ಕಷ್ಟಪಟ್ಟವರು ಉತ್ತಮ ಸ್ಥಾನಮಾನ ಪಡೆದು ಮುಂದೆ ಬರುತ್ತಾರೆ ಎನ್ನುವುದಕ್ಕೆ ನೀವೆಲ್ಲರೂ ಉದಾಹರಣೆ. ಇದುವರೆಗೆ ಆಯಾ ಜಾತಿ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರ ನಡೆಯುತ್ತಿದ್ದವು. ಆದರೆ ಸರ್ಕಾರಿ ನೌಕರರು ಜಾತಿ, ಧರ್ಮ ಪರಿಮೀರಿ ಪ್ರತಿಭಾವಂತ ಮಕ್ಕಳನ್ನು ಗೌರವಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಮಾತನಾಡಿ, ಮುಂಬರುವ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಲಿದ್ದಾರೆ. ಅವುಗಳನ್ನು ಜನರಿಗೆ ತಲುಪಿಸುವ ಮೂಲಕ ಸರ್ಕಾರದ ಯಶಸ್ವಿ ಆಡಳಿತಕ್ಕೆ ಅಧಿಕಾರಿಗಳು ಸಾಥ್‌ ನೀಡಬೇಕು ಎಂದರು.

ರಾಜ್ಯ ಹಾಗೂ ಜಿಲ್ಲೆಯಲ್ಲಿ ಸರ್ಕಾರಿ ನೌಕರರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಎಲ್ಲವನ್ನೂ ನಿಮ್ಮ ಸಂಘದ ಮೂಲಕ ಮುಖ್ಯಮಂತ್ರಿಗಳ ಮುಂದಿಟ್ಟು ಅವರ ಮನವೊಲಿಸಿ ಈಡೇರಿಸಿಕೊಳ್ಳಿ. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ನೌಕರರ ಸಮಸ್ಯೆಗಳನ್ನು ಸರ್ಕಾರಕ್ಕೆ ಮುಟ್ಟಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಎಲ್ಲವೂ ಅನುಷ್ಠಾನಕ್ಕೆ ಬರದಿದ್ದರೂ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.

Advertisement

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಮಾತನಾಡಿ, ಸಂಘದ ಮೂಲಕ ನೌಕರರ ಪರವಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಇದನ್ನು ಬಳಸಿಕೊಂಡು ಸಂಘವನ್ನು ಸದೃಢವಾಗಿ ಕಟ್ಟುತ್ತೇನೆ. ಇದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದರು.

ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ ಮಾಡಲು 99 ವರ್ಷ ಬೇಕಾಯಿತು. ಇದೇ ಮೊದಲ ಸಲ ನಾಲ್ಕೈದು ಜಿಲ್ಲೆಗಳ ಸರ್ಕಾರಿ ನೌಕರರನ್ನು ಒಂದು ಕಡೆ ಸೇರಿಸಿ ಅವರ ಮಕ್ಕಳಿಗೆ ಪುರಸ್ಕರಿಸುವ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ. ಮುಂದಿನ ವರ್ಷ ಆಯಾ ಜಿಲ್ಲೆಗಳಲ್ಲೇ ಈ ಕಾರ್ಯಕ್ರಮ ಮಾಡಲಾಗುವುದು ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಶಿವರುದ್ರಯ್ಯ, ಪ್ರಧಾನ ಕಾರ್ಯದರ್ಶಿ ಜಗದೀಶ್‌ ಗೌಡಪ್ಪ ಪಾಟೀಲ್‌, ಖಜಾಂಚಿ ಶ್ರೀನಿವಾಸ್‌, ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಮೋಹನ್‌ ಕುಮಾರ್‌, ದಾವಣಗೆರೆ ಘಟಕದ ಅಧ್ಯಕ್ಷ ಪಾಲಾಕ್ಷಿ, ಬಳ್ಳಾರಿ ಘಟಕದ ಅಧ್ಯಕ್ಷ ಶಿವಾಜಿ ರಾವ್‌, ರಾಜ್ಯ ಪರಿಷತ್‌ ಸದಸ್ಯ ತಿಮ್ಮಾ ರೆಡ್ಡಿ, ಚಿತ್ರದುರ್ಗ ಘಟಕದ ಗೌರವಾಧ್ಯಕ್ಷ ಸಿದ್ದೇಶ್ವರ, ಪ್ರಧಾನ ಕಾರ್ಯದರ್ಶಿ ಮಂಜುನಾಥ್‌, ಖಜಾಂಚಿ ವೀರೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next