ಚಿತ್ರದುರ್ಗ: ಚಿತ್ರದುರ್ಗ ತಾಲೂಕನ್ನು 2018-19ನೇ ಸಾಲಿಗೆ ಬರಪೀಡಿತ ಎಂದು ಸರ್ಕಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಸರಿಯಾದ ಮಾಹಿತಿ ನೀಡಿ ಸೌಲಭ್ಯ ಸಿಗುವಂತೆ ಮಾಡಿ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.
ನಗರದಲ್ಲಿ ಶುಕ್ರವಾರ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ತಾಲೂಕಿನ ಕೆಲ ಭಾಗದಲ್ಲಿ ಉತ್ತಮ ಮಳೆಯಾದರೆ, ಇನ್ನೂ ಕೆಲವೆಡೆ ಮಳೆ ಬೇಕಾಗಿತ್ತು. ಫಸಲ್ ಬಿಮಾ ಯೋಜನೆಯಲ್ಲಿ ಕೆಲ ರೈತರಿಗೆ ತಾರತಮ್ಯವಾಗಿದೆ. ಕೆಲ ಗ್ರಾಮಗಳಲ್ಲಿ ಎಕರೆಗೆ 8500 ರೂ. ಬಂದಿದ್ದರೆ ಕೆಲ ರೈತರಿಗೆ ಎಕರೆಗೆ ಕೇವಲ 1500 ರೂ. ಮಾತ್ರ ಬಂದಿದೆ.
ಇದನ್ನು ಸರಿಪಡಿಸಿ ಎಲ್ಲ ರೈತರಿಗೂ ನ್ಯಾಯ ಕೊಡಿಸಿ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಭಾರತಿ ಅವರಿಗೆ ಸೂಚಿಸಿದರು. ಫಸಲ್ ಬಿಮಾ ಯೋಜನೆ ಬಂದಾಗ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಆದರೆ, ಈಗ ರೈತರು ಖುಷಿಯಾಗಿದ್ದಾರೆ. ಬೆಳೆ ಬಂದರೂ ಸಿಗದಷ್ಟು ಪರಿಹಾರ ಬೆಳೆ ನಷ್ಟದಲ್ಲಿ ಸಿಕ್ಕಿದೆ ಎನ್ನುತ್ತಿದ್ದಾರೆ ಎಂದು ಶಾಸಕರು ತಿಳಿಸಿದರು.
ಪಶು ಸಂಗೋಪನಾ ಇಲಾಖೆಯಿಂದ ಹಸು ನೀಡುವ ಯೋಜನೆಗೆ ಸಾಕಷ್ಟು ರೈತರು ದಿನವೂ ಅಲೆಯುತ್ತಿದ್ದಾರೆ. ಆದರೆ, ತಾಲೂಕಿಗೆ ಒಂದು ಹಸು ಮಾತ್ರ ಬಂದಿದೆ. ಅರ್ಜಿಗಳು ಮಾತ್ರ 850 ಬಂದಿವೆ. ಈ ರೀತಿಯ ಯೋಜನೆ ತಂದರೆ ಯಾರಿಗೆ ಲಾಭ. ಈ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳಿಗೆ ಪತ್ರ ಬರೆದು ತಿಳಿಸಿ ಎಂದು ಪಶು ಇಲಾಖೆಯ ಅಧಿಕಾರಿ ಪ್ರಸನ್ನ ಅವರಿಗೆ ಹೇಳಿದರು.
ಫಲಾನುಭವಿಗಳಿಗೆ ಹಸು ನೀಡುವಾಗ ಆರೋಗ್ಯವಾಗಿರುವ ಹಾಲು ಕರೆಯುವ ಹಸು ನೀಡಿ, ಬಡಕಲು ಹಸು ನೀಡಬೇಡಿ ಎಂದು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಪ್ರಸನ್ನ ಈ ಸಲ ಮಧ್ಯವರ್ತಿಗಳಿಗೆ ಅವಕಾಶ ಇಲ್ಲದಂತೆ ನೇರವಾಗಿ ರೈತರೇ ಖರೀದಿಸಿ ನಮಗೆ ತೋರಿಸಿದರೆ ಅವರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದರು.
ಸರ್ಕಾರದ ವಿವಿಧ ಯೋಜನೆಗಳಡಿ ಮನೆ ನಿರ್ಮಾಣಕ್ಕೆ ಅವಕಾಶವಿದೆ. ಜಾಗದ ಅಗತ್ಯವಿದ್ದು, ಇಂಗಳದಾಳ, ಸೀಬಾರ, ಜಿ.ಆರ್. ಹಳ್ಳಿ ಬಳಿ ಸರ್ಕಾರಿ ಜಾಗ ಇದೆ. ಸರ್ವೇ ನಡೆಸಿ ಮಾಹಿತಿ ನೀಡಿ ಎಂದು ತಹಶೀಲ್ದಾರ್ ವೆಂಕಟೇಶಯ್ಯ ಅವರಿಗೆ ಸೂಚಿಸಿದರು. ತಹಶೀಲ್ದಾರ್ ವೆಂಕಟೇಶಯ್ಯ, ತಾಲೂಕು ಪಂಚಾಯಿತಿ ಇಒ ಕೃಷ್ಣಾನಾಯ್ಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.