ಚಿತ್ರದುರ್ಗ: ರೈತರನ್ನು ವಿನಾಕಾರಣ ಕಚೇರಿಗೆ ಅಲೆದಾಡಿಸಲಾಗುತ್ತಿದೆ ಎಂದು ಆರೋಪಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ಶನಿವಾರ ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲ್ವೆ ಮಾರ್ಗದ ಯೋಜನೆಗಾಗಿ ಭೂಸ್ವಾಧೀನ ಕಾಯ್ದೆ ಕಲಂ 11(1) ಅಡಿಯಲ್ಲಿ ತಕರಾರು ಸಲ್ಲಿಸಿರುವ ರೈತರ ವಿಚಾರಣೆ ಮಾಡಲು ಮೇ 4 ರಂದು ಬೆಳಿಗ್ಗೆ 11 ಗಂಟೆಗೆ ಹಾಜರಾಗುವಂತೆ ರೈತರಿಗೆ ನೋಟಿಸ್ ನೀಡಲಾಗಿತ್ತು. ವಿಚಾರಣೆಗೆ ಆಗಮಿಸುವಂತೆ ಉಪವಿಭಾಗಾಧಿಕಾರಿಗಳು ಹಾಗೂ ಭೂಸ್ವಾಧೀನಾಧಿಕಾರಿಗಳು ತಿಳಿವಳಿಕೆ ಪತ್ರ ನೀಡಿದ್ದರು. ನೂರಾರು ರೈತರು ಆಗಮಿಸಿ ಅಧಿಕಾರಿಗಳಿಗಾಗಿ ಕಾಯುತ್ತಿದ್ದರೂ ಒಬ್ಬ ಅಧಿಕಾರಿಯೂ ಕಚೇರಿಯಲ್ಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ, ಸಿದ್ದಾಪುರ, ಕಾವಾಡಿಗರಹಟ್ಟಿ, ಕ್ಯಾದಿಗೆರೆ ಸೇರಿದಂತೆ ಮತ್ತಿತರ ಹಳ್ಳಿಗಳಿಂದ ನೂರಾರು ರೈತರು ನೋಟಿಸ್ ಪತ್ರಗಳನ್ನು ಹಿಡಿದು ವಿಚಾರಣೆಗಾಗಿ ಆಗಮಿಸಿದ್ದರೂ ಯಾವೊಬ್ಬ ಅಧಿಕಾರಿಯೂ ಇಲ್ಲ. ಕೆಲಸ ಕಾರ್ಯಗಳನ್ನು ಬದಿಗೊತ್ತಿ ಬಂದಿದ್ದೇವೆ. ಕೆಲವರು ಮೈಸೂರು ಮತ್ತಿತರ ಕಡೆಗಳಿಂದ ಆಗಮಿಸಿದ್ದಾರೆ. ನೋಟಿಸ್ ನೀಡಿರುವ ಉಪವಿಭಾಗಾಧಿಕಾರಿಗಳೇ ಇಲ್ಲದಿದ್ದರೆ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದರು.
ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಬೇಕಾಬಿಟ್ಟಿಯಾಗಿ ನೋಟಿಸ್ ನೀಡಲಾಗುತ್ತಿದೆ. ರೈತರೆಂದರೆ ಗುಲಾಮರು ಎಂದುಕೊಂಡಿರುವ ಅಕಾರಿಗಳು ತಮ್ಮ ವರ್ತನೆಯನ್ನು ತಿದ್ದಿಕೊಳ್ಳಬೇಕು. ಅಧಿಕಾರಿಗಳಿಗೆ ಮಾತ್ರ ಕೆಲಸ ಕಾರ್ಯಗಳಿವೆ ಎಂದು ತಿಳಿಯಬಾರದು, ಕುಟುಂಬದಲ್ಲಿ ಒಬ್ಬೊಬ್ಬರೇ ರೈತರಿರುತ್ತಾರೆ. ದನಕರುಗಳನ್ನು ಬಿಸಿಲಲ್ಲಿ ಕಟ್ಟಿ ಬಂದಿರುವುದು ಒಂದು ಕಡೆಯಾದರೆ, ಮೈಸೂರು ಮತ್ತಿತರ ಕಡೆಗಳಿಂದ ನೂರಾರು ಕಿಲೋ ಮೀಟರ್ ದೂರದಿಂದ ಆಗಮಿಸಿ ಅಧಿಕಾರಿಗಳಿಗಾಗಿ ಕಾಯುವುದು ಎಷ್ಟು ಸರಿ ಎಂದು ಕಿಡಿ ಕಾರಿದರು.
ನೋಟಿಸ್‌ನಲ್ಲಿ ತಿಳಿಸಿರುವ ದಿನಾಂಕದಂದು ತಿಳಿಸಿರುವ ಸಮಯಕ್ಕೆ ಸರಿಯಾಗಿ ದಾಖಲಾತಿಗಳೊಂದಿಗೆ ವಿಚಾರಣೆಗೆ ಹಾಜರಾಗಬೇಕು. ತಪ್ಪಿದಲ್ಲಿ ಲಭ್ಯವಿರುವ ದಾಖಲಾತಿಗಳ ಆಧಾರದ ಮೇರೆಗೆ ಕಾನೂನು ರೀತ್ಯ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ನೀಡಲಾಗಿದೆ. ಆದರೆ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪಹಣಿ, ಪೌತಿ ಖಾತೆ, ತಪ್ಪು ತಿದ್ದುಪಡಿಗಳು, ಹದ್ದುಬಸ್ತು, ದುರಸ್ತಿ ಸೇರಿದಂತೆ ಹಲವು ರೀತಿಯ ಸಮಸ್ಯೆಗಳನ್ನು ಹೋಗಲಾಡಿಸಲು ಎರಡು ಮೂರು ವರ್ಷಗಳಿಂದ ಸರ್ವೆ ಇಲಾಖೆಗೆ ಅರ್ಜಿಗಳನ್ನು ಸಲ್ಲಿಸಿ ಕಾಯುತ್ತಿದ್ದೇವೆ. ಮೊದಲು ಜಿಲ್ಲಾಡಳಿತ ಇಂತಹ ಸಮಸ್ಯೆಗಳನ್ನು ಹೋಗಲಾಡಿಸಬೇಕು. ನ್ಯಾಯಬದ್ಧವಾದ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಗೇಲ್ ಇಂಡಿಯಾ ಗ್ಯಾಸ್ ಕಂಪನಿ, ಕಳೆದ 35 ವರ್ಷಗಳಿಂದ ರೈಲ್ವೆ ಯೋಜನೆಗೆ ಭೂಮಿ ನೀಡಿದವರಿಗೆ ಪರಿಹಾರ ನೀಡಲು ವಿಳಂಬ ಮಾಡಿದಂತೆ ತುಮಕೂರು- ಚಿತ್ರದುರ್ಗ-ದಾವಣಗೆರೆ ಹೊಸ ರೈಲ್ವೆ ಮಾರ್ಗದ ಯೋಜನೆಗೆ ಮಾಡಿದರೆ ನಾವು ಸುಮ್ಮನಿರುವುದಿಲ್ಲ ಎಂದು ಗುಡುಗಿದರು.
ವೆಂಕಟೇಶ ರೆಡ್ಡಿ, ಹನಮಂತ ರೆಡ್ಡಿ, ಬಸವರಾಜ್ ಕ್ಯಾದಿಗೆರೆ, ಕಾವಾಡಿಗರ ಹಟ್ಟಿ, ಅಪ್ಸರಾ ಮೈಸೂರು, ಸಿದ್ದಾಪುರ ಶರಣಪ್ಪ, ಮಂಜುಳಮ್ಮ, ಗೋವಿಂದ ರೆಡ್ಡಿ, ಜಯಶೀಲ ರೆಡ್ಡಿ, ಕೃಷ್ಣ ರೆಡ್ಡಿ, ನಾಗರಾಜ್, ಚಿದಾನಂದ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.