Advertisement

ವಿಶ್ವೇಶ್ವರಯ್ಯರ ಶಿಸ್ತು-ಸಮಯಪ್ರಜ್ಞೆ ಮಾದರಿ

02:51 PM Sep 16, 2019 | Naveen |

ಚಿತ್ರದುರ್ಗ: ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಸಾಮಾಜಿಕ ಕ್ರಾಂತಿ ಮಾಡಿದಂತೆ ವಿಶ್ವೇಶ್ವರಯ್ಯನವರು ತಾಂತ್ರಿಕ ಕ್ರಾಂತಿ ಮಾಡಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್‌ ಸತೀಶ್‌ಬಾಬು ಬಣ್ಣಿಸಿದರು.

Advertisement

ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಜಿಲ್ಲಾ ಪ್ರಾಕ್ಟಿಸಿಂಗ್‌ ಆರ್ಕಿಟೆಕ್ಟ್ ಮತ್ತು ಇಂಜಿನಿಯರ್ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಇಂಜಿನಿಯರ್ ಡೇ ಹಾಗೂ ಸಂಘದ ಮೊದಲನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಮೇಲು-ಕೀಳುಗಳನ್ನು ತೊಡೆದು ಹಾಕಿ ಸಮ ಸಮಾಜ ಮಾಡಲು ಕ್ರಾಂತಿಯನ್ನೇ ಮಾಡಿದರು. ತಾಂತ್ರಿಕ ಕ್ಷೇತ್ರವನ್ನು ಗಮನಿಸಿದಾಗ ಸರ್‌.ಎಂ. ವಿಶ್ವೇಶ್ವರಯ್ಯನವರು ಕೂಡ ಹೀಗೆಯೇ ಕ್ರಾಂತಿ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. ನೂರು ವರ್ಷಗಳ ಹಿಂದೆಯೇ ವಿಶ್ವೇಶ್ವರಯ್ಯನವರು ತಮ್ಮ ಕಾರ್ಯಗಳಿಂದಲೇ ಸಾಧನೆ ಮಾಡಿದರು. ಬ್ಯಾಂಕಿಂಗ್‌, ನೀರಾವರಿ, ವಿದ್ಯುತ್‌, ಆಣೆಕಟ್ಟುಗಳ ನಿರ್ಮಾಣದಿಂದ ಹೊಸ ಸಂಚಲವನ್ನೇ ಸೃಷ್ಟಿಸಿದ್ದಾರೆ. ಅವರೊಬ್ಬ ಅತ್ಯುತ್ತಮ ಆಡಳಿತಗಾರರೂ ಆಗಿದ್ದರು ಎಂದು ಸ್ಮರಿಸಿದರು.

ವಿಶ್ವೇಶ್ವರಯ್ಯನವರ ಸಮಯಪ್ರಜ್ಞೆ ಹಾಗೂ ಶಿಸ್ತನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬ್ರಿಟಿಷ್‌ ಸರ್ಕಾರ ಅವರಿಗೆ ‘ಸರ್‌’ ಎಂಬ ಬಿರುದು ನೀಡಿ ಗೌರವಿಸಿತ್ತು. ಅವರ ಯೋಚನಾ ಶಕ್ತಿಯಿಂದ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಇಂದು ಲಕ್ಷಾಂತರ ಎಕರೆ ಭೂಮಿಗೆ ನೀರು ಸಿಗುತ್ತಿದೆ. ಅವರ ಪ್ರಾಮಾಣಿಕತೆ, ಕ್ರಿಯಾಶೀಲತೆ ಮಾದರಿ ಎಂದರು. ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಬಿ.ಸಿ. ಶಾಂತಪ್ಪ ಮಾತನಾಡಿ, ಇಂಜಿನಿಯರ್‌ಗಳು ಸಮಾಜದ ಮುಖ್ಯ ಅಡಿಪಾಯವಾಗಿದ್ದಾರೆ. ಸಮಾಜ ಕಟ್ಟುವ ಶಿಲ್ಪಿಗಳಾಗಿದ್ದಾರೆ. ಈ ಮನ್ನಣೆ ಶಾಶ್ವತವಾಗಿ ಉಳಿಯಲು ಹಾಗೂ ನಮ್ಮ ಕೆಲಸದಲ್ಲಿ ಗುಣಮಟ್ಟ ಹಾಗೂ ವಿಶ್ವಾಸಾರ್ಹತೆ ಉಳಿಯಬೇಕಾದರೆ ಎಲ್ಲ ಇಂಜಿನಿಯರ್‌ಗಳೂ ವಿಶ್ವೇಶ್ವರಯ್ಯ ಅವರ ಬದುಕಿನಿಂದ ಸ್ಫೂರ್ತಿ ಪಡೆದುಕೊಳ್ಳಬೇಕು ಎಂದರು. ಇಂಜಿನಿಯರ್ ಡೇ ಅಂಗವಾಗಿ ಲೋಕೋಪಯೋಗಿ ಇಲಾಖೆ ಕಚೇರಿ ಮುಂಭಾಗದಲ್ಲಿರುವ ಸ‌ರ್‌.ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಇಂಜಿನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಹಾಗೂ ಸ್ಪರ್ಧೆ ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಹಿರಿಯ ಇಂಜಿನಿಯರ್‌ಗಳು ಮತ್ತು ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು. ಹಿರಿಯೂರು ನಗರಸಭೆ ಪೌರಾಯುಕ್ತ ಎಚ್. ಮಹಾಂತೇಶ್‌, ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರೊ| ಬಿ.ಎಂ. ಜಗದೀಶ್‌, ಜಿಲ್ಲಾ ಪ್ರಾಕ್ಟಿಸಿಂಗ್‌ ಆರ್ಕಿಟೆಕ್ಟ್ ಮತ್ತು ಇಂಜಿನಿಯರ್ ಸಂಘದ ಅಧ್ಯಕ್ಷ ಪಿ.ಎಲ್. ಸುರೇಶ್‌ರಾಜು, ಅರುಣ್‌ಕುಮಾರ್‌, ಇಂಜಿನಿಯರ್‌ ಎಂ.ಕೆ. ರವೀಂದ್ರ, ರೋಟರಿ ಕ್ಲಬ್‌ ಫೋರ್ಟ್‌ ಅಧ್ಯಕ್ಷ ನಾಗೇಂದ್ರಬಾಬು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next