Advertisement

ಇನ್ಮುಂದೆ ಡ್ರೋಣ್‌ ಕಣ್ಗಾವಲು

05:30 PM Apr 25, 2020 | Naveen |

ಚಿತ್ರದುರ್ಗ: ಕೋವಿಡ್ ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರ ವಿಧಿಸಿರುವ ಲಾಕ್‌ಡೌನ್‌ ಅನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಡ್ರೋಣ್‌ ಕ್ಯಾಮೆರಾ ಬಳಕೆಗೆ ಚಾಲನೆ ನೀಡಿದೆ. ನಗರದ ಜಗದ್ಗುರು ಜಯದೇವ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿಕಾ ಡ್ರೋಣ್‌ ಕ್ಯಾಮರಾ ಬಳಕೆಗೆ ಚಾಲನೆ ನೀಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲಾಕ್‌ ಡೌನ್‌ ಎರಡನೇ ಹಂತ ತಲುಪಿರುವುದರಿಂದ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ಬಿಗಿ ಬಂದೋಬಸ್ತ್ಮಾಡಲಾಗಿದೆ. ಅನೇಕ ಸಲ ಎಲ್ಲಾ ಕಡೆ ಪೊಲೀಸರು ಹೋಗುವುದು ಕಷ್ಟ. ಇಕ್ಕಟ್ಟಾದ ಜಾಗ ಹಾಗೂ ಒಂದು ರಸ್ತೆಯಲ್ಲಿ ನಿಂತು ಮತ್ತೂಂದು ರಸ್ತೆಯಲ್ಲಿನ ಚಟುವಟಿಕೆ ಗಮನಿಸುವುದು ಕಷ್ಟವಾಗುತ್ತದೆ. ಹೀಗಾಗಿ ಎಲ್ಲವನ್ನೂ ಮೇಲಿನಿಂದ ಗಮನಿಸಿ ತಕ್ಷಣ ಅಲ್ಲಿಗೆ ಧಾವಿಸಿ ಗುಂಪು ಚದುರಿಸಲು ಹಾಗೂ ರಸ್ತೆಗೆ ಬಂದವರನ್ನು ಗುರುತಿಸುವ ಉದ್ದೇಶಕ್ಕೆ ಡ್ರೋಣ್‌ ಕ್ಯಾಮೆರಾ ಬಳಸುತ್ತಿದ್ದೇವೆ ಎಂದರು.

ಜಿಲ್ಲಾ ಪೊಲೀಸ್‌ ಇಲಾಖೆ ಬಳಸುತ್ತಿರುವ ಡ್ರೋಣ್‌ ಕ್ಯಾಮೆರಾ 150 ಮೀಟರ್‌ ಎತ್ತರದಲ್ಲಿ ಹಾರಾಡುತ್ತಾ 5 ಕಿಮೀ ವ್ಯಾಪ್ತಿಯಲ್ಲಿ ಕಣ್ಗಾವಲು ಇಡಲಿದೆ. ಮುಂದಿನ ವಾರ ಮತ್ತೂಂದು ಡ್ರೋಣ್‌ ಕ್ಯಾಮೆರಾ ಖರೀದಿಸಲಿದ್ದೇವೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಅನಗತ್ಯವಾಗಿ ಸುತ್ತಾಡುವವರು, ಗುಂಪು ಸೇರುವವರು, ಜೂಜು ಆಡುವವರು ಸೇರಿದಂತೆ ಎಲ್ಲಾ ರೀತಿಯ ಅಕ್ರಮ ಚಟುವಟಿಕೆ ಮಾಡುವವರ ಮೇಲೆ ಕಣ್ಣಿಟ್ಟು, ಫೂಟೋ, ವೀಡಿಯೋ ಸಮೇತ ಹಿಡಿಯಲು ಈ ಕ್ಯಾಮೆರಾ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಹಾನಿಂಗ ಬಿ. ನಂದಗಾವಿ, ಡಿವೈಎಸ್ಪಿಗಳಾದ ತಿಪ್ಪೇಸ್ವಾಮಿ, ಪಾಂಡುರಂಗಪ್ಪ, ಸಿಪಿಐಗಳಾದ ಪ್ರಕಾಶ್‌, ನಹೀಂ ಅಹಮ್ಮದ್‌, ಗಣೇಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next