Advertisement

ಸ್ವಚ್ಛತಾ ಅಭಿಯಾನ ಯಶಸ್ವಿಗೊಳಿಸಿ

11:26 AM Jul 07, 2019 | Naveen |

ಚಿತ್ರದುರ್ಗ: ಸ್ವಚ್ಛತೆ ಇರುವ ಕಡೆ ಆರೋಗ್ಯ ಇರುತ್ತದೆ. ಉತ್ತಮ ಆರೋಗ್ಯ ಇದ್ದರೆ ಬಲಿಷ್ಠ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಅಭಿಪ್ರಾಯಪಟ್ಟರು.

Advertisement

ನಗರದ ಜೆಸಿಆರ್‌ ವೃತ್ತದ ಬಳಿ ಜಿಲ್ಲಾಡಳಿತ ಮತ್ತು ನಗರಸಭೆ ಸಹಯೋಗದಲ್ಲಿ ಸ್ವಚ್ಛ ಸರ್ವೇಕ್ಷಣದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಗರ, ಪಟ್ಟಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಲು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲು ಮೊದಲ ಹಾಗೂ ಮೂರನೇ ಶನಿವಾರ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಇಂದಿನಿಂದ ಜಿಲ್ಲೆಯ ಎಲ್ಲ ನಗರ, ಪಟ್ಟಣಗಳಲ್ಲಿ ಈ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ ಎಂದರು.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ದವರು ಕಸ ಸಂಗ್ರಹಿಸುವ ವಾಹನಗಳಲ್ಲೇ ಸಾರ್ವಜನಿಕರು ಕಸ ಹಾಕುವ ಮೂಲಕ ಸ್ವಚ್ಛತೆ ಕಾಪಾಡಬೇಕು. ಖಾಲಿ ಸ್ಥಳ, ನಿವೇಶನ ಸೇರಿದಂತೆ ಎಲ್ಲೆಂದರಲ್ಲಿ ಕಸ ಹಾಕಬಾರದು ಎಂದು ಮನವಿ ಮಾಡಿದರು.

ನಗರಸಭೆ ಸದಸ್ಯೆ ರೋಹಿಣಿ ಮಾತನಾಡಿ, ನಗರ, ಪಟ್ಟಣಗಳ ಸ್ವಚ್ಛತೆಗೆ ಜಿಲ್ಲಾಧಿಕಾರಿಗಳು ಹೆಚ್ಚಿನ ಒತ್ತು ನೀಡಿದ್ದು, ನಾಗರಿಕರು ಸಹಕರಿಸಬೇಕು. ಮನೆ ಸುತ್ತಮುತ್ತ, ಖಾಲಿ ಜಾಗಗಳಲ್ಲಿ ಕಸ ಹಾಕಬಾರದು. ಹಸಿ ಕಸ ಮತ್ತು ಒಣ ಕಸ ಹಾಗೂ ಪ್ಲಾಸ್ಟಿಕ್‌ ಪ್ರತ್ಯೇಕಿಸಿ ಕಸದ ವಾಹನಗಳಲ್ಲೇ ಹಾಕಬೇಕು. ಕೆಲವರು ರಾತ್ರಿ ವೇಳೆಯಲ್ಲಿ ಚರಂಡಿ, ರಸ್ತೆ ಬದಿಯಲ್ಲಿ ಕಸ ಹಾಕುತ್ತಾರೆ. ಇದು ನಿಲ್ಲಬೇಕು ಎಂದರು.

ಇನ್ನರ್‌ವ್ಹೀಲ್ ಕ್ಲಬ್‌ ಮಾಜಿ ಅಧ್ಯಕ್ಷ ರಾಜೇಶ್ವರಿ ಮಾತನಾಡಿ, ಜಿಲ್ಲಾಧಿಕಾರಿಗಳೊಂದಿಗೆ ಸ್ವಚ್ಛ ಭಾರತ್‌ ಕಾರ್ಯಕ್ರಮ ನಡೆಸಿದ್ದೇವೆ. ಸುಂದರ ಪರಿಸರ ನಿರ್ಮಿಸಲು ಪ್ರತಿಯೊಬ್ಬರೂ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು. ಸ್ವತಃ ಜಿಲ್ಲಾಧಿಕಾರಿಯವರೇ ಪೊರಕೆ ಹಿಡಿದು ಕಸ ಗುಡಿಸಿರುವುದು ಎಲ್ಲರಿಗೂ ಉತ್ತೇಜನ ನೀಡಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

Advertisement

‘ನಮ್ಮ ಚಿತ್ತ ಸ್ವಚ್ಛತೆಯತ್ತ’ ಎಂಬ ಘೋಷ ವಾಕ್ಯದೊಂದಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಜಿಲ್ಲಾಧಿಕಾರಿಗಳು ಚಿಂದಿ ಆಯುವವರಿಗೆ ಗುರುತಿನ ಚೀಟಿ ವಿತರಿಸಿದರು. ಜೆಸಿಆರ್‌ ಬಡಾವಣೆ, ಹಿಮ್ಮತ್‌ ನಗರ, ಜೆ.ಜೆ. ಹಟ್ಟಿ, ಖಾಲಿ ನಿವೇಶನ ಹಾಗೂ ಸರ್ವಿಸ್‌ ರಸ್ತೆಗಳ ಮೇಲೆ ಬಿದ್ದಿದ್ದ ಪ್ಲಾಸ್ಟಿಕ್‌ ಕವರ್‌, ಬಾಟಲ್ ಮತ್ತಿತರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ನಗರಸಭೆ ಕಸದ ವಾಹನಗಳಲ್ಲಿ ಹಾಕಲಾಯಿತು.

ನಗರಸಭೆ ಸದಸ್ಯೆ ಅನುರಾಧಾ ರವಿಕುಮಾರ್‌, ಪರಿಸರ ಇಂಜಿನಿಯರ್‌ ಜಾಫರ್‌, ವ್ಯವಸ್ಥಾಪಕ ಜಯಣ್ಣ, ಟಾರ್ಗೆಟ್ ಟೆನ್‌ ತೌಸಂಡ್‌ ಬಳಗ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next