ಚಿತ್ರದುರ್ಗ: ಶಾಂತಿಸಾಗರದ ನೀರು ಪಡೆದುಕೊಳ್ಳುತ್ತಿರುವ ಹೊಳಲ್ಕೆರೆ ಪಟ್ಟಣ ಪಂಚಾಯತ್ ಹಾಗೂ 29 ಗ್ರಾಮಗಳು ಬಾಕಿ 17.68 ಕೋಟಿ ರೂ. ಗಳನ್ನು ಮೂರು ತಿಂಗಳ ಒಳಗಾಗಿ ಮೂರು ಕಂತುಗಳಲ್ಲಿ ಚಿತ್ರದುರ್ಗ ನಗರಸಭೆಗೆ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಾಕೀತು ಮಾಡಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿಭಾಗದ ವತಿಯಿಂದ ಬುಧವಾರ ನಡೆದ ಶಾಂತಿಸಾಗರ ಕುಡಿಯುವ ನೀರು ಸರಬರಾಜು ಯೋಜನೆಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಶಾಂತಿಸಾಗರದಿಂದ ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಕಳೆದ 2008-09 ರಿಂದ ಜಾರಿಯಲ್ಲಿದೆ. ಹೊಳಲ್ಕೆರೆ ಪಟ್ಟಣ ಹಾಗೂ ಉಳಿದ 29 ಗ್ರಾಮಗಳಿಗೆ ಶಾಂತಿಸಾಗರ ಯೋಜನೆಯಡಿ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಪೈಕಿ 9 ಗ್ರಾಮಗಳಿಗೆ ಅನಧಿಕೃತವಾಗಿ ಸಂಪರ್ಕ ಕಲ್ಪಿಸಲಾಗಿದೆ. ವಿದ್ಯುತ್ ಬಿಲ್, ದುರಸ್ತಿ ವೆಚ್ಚ, ನಿರ್ವಹಣಾ ವೆಚ್ಚ ಎಲ್ಲವನ್ನೂ ಚಿತ್ರದುರ್ಗ ನಗರಸಭೆಯಿಂದ ಪಾವತಿ ಮಾಡಲಾಗುತ್ತಿತ್ತು. ಆದರೆ ಇದರಿಂದ ನಗರಸಭೆಗೆ ಹೆಚ್ಚಿನ ಹೊರೆಯಾಗುತ್ತಿತ್ತಲ್ಲದೆ, ಲೆಕ್ಕಪರಿಶೋಧನೆಯ ಆಕ್ಷೇಪಣೆ ವ್ಯಕ್ತವಾಗಿತ್ತು. ಹೀಗಾಗಿ ನೀರು ಪಡೆಯುತ್ತಿರುವ ಗ್ರಾಮಗಳು ನಿರ್ವಹಣಾ ವೆಚ್ಚದಲ್ಲಿ ಶೇ. 70 ರಷ್ಟು ವೆಚ್ಚವನ್ನು ಚಿತ್ರದುರ್ಗ ನಗರಸಭೆ, ಉಳಿದ ಶೇ. 30 ರಷ್ಟು ವೆಚ್ಚವನ್ನು ಇತರೆ ಗ್ರಾಮಗಳಿಗೆ ನೀಡಬೇಕು ಎಂದರು.
ಶಾಂತಿಸಾಗರದ ನೀರನ್ನು ವಿವಿಧ ಗ್ರಾಮಗಳಿಗೆ ನೀಡಲಾಗುವ ಪ್ರತಿಯೊಂದು ಪಾಯಿಂಟ್‌ಗೂ ಗರಿಷ್ಠ 4 ಗಂಟೆ ಅಥವಾ 70 ಸಾವಿರ ಲೀಟರ್ ಮಾತ್ರ ಸರಬರಾಜು ಮಾಡಬೇಕು. ಪ್ರತಿಯೊಂದು ಪಾಯಿಂಟ್‌ಗೂ ಫ್ಲೋ ಮೀಟರ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಲಭ್ಯವಿರುವ ನೀರಿನ ಮಿತ ಬಳಕೆಯಾಗಬೇಕು. ನೀರು ವ್ಯರ್ಥವಾಗದಂತೆ ಸದ್ಬಳಕೆಯಾಗಬೇಕು ಎಂದು ಸೂಚಿಸಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್ ಮಾತನಾಡಿ, ಅಮೃತ್ ಯೋಜನೆಯಡಿ 65.24 ಕೋಟಿ ರೂ. ಮೊತ್ತದಲ್ಲಿ ಶಾಂತಿಸಾಗರ ನೀರು ಸರಬರಾಜು ಯೋಜನೆಯ ಪುನಶ್ಚೇತನ ಕಾಮಗಾರಿ ಜಾರಿಯಲ್ಲಿದೆ. ಜಲ ಶುದ್ಧೀಕರಣ ಘಟಕದಿಂದ ಚಿತ್ರದುರ್ಗ ನಗರದವರೆಗೆ 25 ಕಿಮೀ ಉದ್ದದ 800 ಮಿಮೀ ವ್ಯಾಸದ ಪಿಎಸ್‌ಸಿ ಇಳಿಜಾರು ಕೊಳವೆ ಮಾರ್ಗದಲ್ಲಿ 11 ಕಡೆ ಲೀಕೇಜ್ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಪದೇ ಪದೇ ಲೀಕೇಜ್ ಸಮಸ್ಯೆ ನಿವಾರಣೆಗೆ ಏರ್‌ವಾಲ್ವ್ ಅಳವಡಿಸಬೇಕಿದ್ದು, ಗುತ್ತಿಗೆದಾರರು ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಕೈಗೊಳ್ಳದಿದ್ದಲ್ಲಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಸೂಚನೆ ನೀಡಿದರು. ನಗರಸಭೆ ಪೌರಾಯುಕ್ತ ಚಂದ್ರಪ್ಪ ಮಾತನಾಡಿ, ಶಾಂತಿಸಾಗರ ಕುಡಿಯುವ ನೀರು ಯೋಜನೆ 12 ವರ್ಷ ಹಳೆಯದಾಗಿದ್ದು, ಪಂಪ್, ಮೋಟಾರ್, ವಿದ್ಯುತ್ ಪರಿವರ್ತಕಗಳ ಬದಲಾವಣೆಯ ಅಗತ್ಯವಿದೆ. ಈ ಕುರಿತು ಪ್ರಸ್ತಾವನೆ ಸಲ್ಲಿಸಿದ್ದು, ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ ಎಂದರು.
ವಿವಿಧ ಗ್ರಾಪಂಗಳ ಪಿಡಿಒಗಳು ಮಾತನಾಡಿ, ಗ್ರಾಪಂಗಳಲ್ಲಿ ಆದಾಯ ಕುಂಠಿತಗೊಂಡಿದೆ. ಇದರಿಂದ ನೀರು ನಿರ್ವಹಣಾ ವೆಚ್ಚ ಪಾವತಿಗೆ ತೊಂದರೆಯಾಗಿದೆ. ಆದ್ದರಿಂದ ಹೆಚ್ಚಿನ ಕಂತುಗಳಲ್ಲಿ ನಿರ್ವಹಣಾ ವೆಚ್ಚ ಬಾಕಿ ಪಾವತಿಗೆ ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಗ್ರಾಪಂಗಳು ಆದಾಯ ಸಂಗ್ರಹಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕರ ಸಂಗ್ರಹಣೆಯ ಗುರಿ ಸಾಧನೆ ಮಾಡಬೇಕು. ಇದು ಪ್ರತಿ ಪಿಡಿಒಗಳ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಗ್ರಾಪಂ ಪಿಡಿಒಗಳು, ಹೊಳಲ್ಕೆರೆ, ಜಗಳೂರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.