ಚಿತ್ರದುರ್ಗ: ಜಿಲ್ಲಾ ಪಂಚಾಯತ್ ಸಭಾಂಗಣ ಬುಧವಾರ ರಾಜಕಾರಣಿಗಳಿಂದ ತುಂಬಿ ಹೋಗಿತ್ತು. ಫಳ ಫಳ ಹೊಳೆಯುವ ಕೋಟು, ಗರಿ ಗರಿಯಾಗಿ ಇಸ್ತ್ರಿ ಮಾಡಿದ ಖಾ ದಿ ಬಟ್ಟೆಗಳು, ಮಿರ ಮಿರ ಮಿನುಗುವ ಸೀರೆಗಳು, ಹಸಿರು ಶಾಲು, ಪಂಚೆ, ಪೈಜಾಮಾಗಳ ದರ್ಬಾರ್ ಜೋರಾಗಿತ್ತು…
ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಪ್ರೌಢಶಾಲಾ ಮಕ್ಕಳ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯ ಝಲಕ್ ಇದು. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಶಾಲೆಗಳಿಂದ ಭಾಗವಹಿಸಿದ್ದ 60 ಮಕ್ಕಳು 60 ರೀತಿಯಲ್ಲಿ ತಯಾರಾಗಿ ಬಂದಿದ್ದರು. ಇದರಲ್ಲಿ ಶಾಸಕರು, ಸಂಪುಟ ದರ್ಜೆ ಸಚಿವರು, ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ಸಭಾಪತಿ ಸೇರಿದಂತೆ ಒಂದು ಸರ್ಕಾರದಲ್ಲಿ ಇರಬೇಕಾದ ಎಲ್ಲರೂ ಇದ್ದರು.
ಇಬ್ಬರು ಪುಟಾಣಿ ಮಾರ್ಷಲ್‌ಗಳ ಜತೆ ಸಭಾಪತಿ ಸಭಾಂಗಣಕ್ಕೆ ಆಗಮಿಸುತ್ತಲೇ ಇಡೀ ಸಭಾಂಗಣ ಎದ್ದು ನಿಂತು ಗೌರವ ಸೂಚಿಸಿತು. ನಂತರ ನಿಯಾಮಾನುಸಾರ ಸಭೆ ಆರಂಭಿಸಿದ ಸಭಾಧ್ಯಕ್ಷರು, ಅಗಲಿದ ಗಣ್ಯರಾದ ತುಮಕೂರು ಸಿದ್ಧಗಂಗಾ ಮಠದ ಡಾ| ಶಿವಕುಮಾರ ಸ್ವಾಮೀಜಿ, ಸಾಹಿತಿ ಡಾ| ಗಿರೀಶ್ ಕಾರ್ನಾಡ್, ಕೇಂದ್ರ ಮಂತ್ರಿಗಳಾಗಿದ್ದ ಅನಂತಕುಮಾರ್, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರ ಗುಣಗಾನ ಮಾಡಲಾಯಿತು.
ನಂತರ ಶೂನ್ಯ ವೇಳೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ರಾಜ್ಯದ ವಿವಿಧ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಪ್ರಶ್ನೋತ್ತರದ ಆರಂಭದಲ್ಲಿಯೇ ಮೊಳಕಾಲ್ಮೂರು ತಾಲೂಕು ಗಡಿ ಗ್ರಾಮವೊಂದರ ಶಾಲೆಯ ದುಸ್ಥಿತಿ ಕುರಿತು ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕರು, ಶಿಕ್ಷಣ ಇಲಾಖೆ ಹಾಗೂ ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಮೀನುಗಾರರ ಹಡಗುಗಳಿಗೆ ಇಂಧನ ಪೂರೈಕೆ ಆಗದಿರುವುದಕ್ಕೆ ಕಾರಣ ನೀಡಿ ಎಂದು ಆಡಳಿತ ಪಕ್ಷದ ಸದಸ್ಯರೇ ಸಚಿವರನ್ನು ಪ್ರಶ್ನಿಸಿದಾಗ ವಿರೋಧ ಪಕ್ಷದವರು ಮೇಜು ಕುಟ್ಟಿ ಸ್ವಾಗತಿಸಿದರು.
ರೈತರ ಆತ್ಮಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯ, ಸಾಲ ಮನ್ನಾ, ತ್ಯಾಜ್ಯದ ಸಮಸ್ಯೆ, ವಿದ್ಯುತ್ ಅವಘಡ, ಬಳ್ಳಾರಿ ಮೈನಿಂಗ್, ಮದ್ಯಪಾನ ನಿಯಂತ್ರಣ ಸೇರಿದಂತೆ ಹಲವು ವಿಷಯಗಳು ಪ್ರಸ್ತಾಪವಾದವು. ಮಧ್ಯಾಹ್ನ ಉಪಾಹಾರದ ನಂತರ ಮೋಟಾರು ವಾಹನ ಕಾಯ್ದೆ – 2019, ಆರೋಗ್ಯ ಇಲಾಖೆಯ ನಗು ಮಗು ಆ್ಯಂಬುಲೆನ್ಸ್, ಪೌಷ್ಟಿಕ ಆಹಾರ, ಔಷಧದಲ್ಲಿ ಶೆ. 12 ರಷ್ಟು ರಿಯಾಯತಿ, ಆಯುಷ್ ಕಾರ್ಡ್, ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಆರೋಗ್ಯ ಸೇವೆಗಳ ಕುರಿತ ಮಸೂದೆ ಮಂಡನೆಯಾದವು.
ಇದೇ ವೇಳೆ ಹೈದರಾಬಾದ್‌ನಲ್ಲಿ ಪಶು ವೈದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಧ್ವನಿಸಿತು. ಭ್ರೂಣ ಹತ್ಯೆ, ಬಾಲ್ಯವಿವಾಹಕ್ಕೆ ಕಠಿಣ ಶಿಕ್ಷೆ ವಿಧಿಸುವ ಬಗ್ಗೆ ಚರ್ಚಿಸಲಾಯಿತು. ಮಸೂದೆಗಳ ಬಗ್ಗೆ ವಿರೋಧ ಪಕ್ಷದವರು ವಿರೋಧ ಮಾಡಿ ಗಲಾಟೆ ಮಾಡಿದಾಗ ಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಆಡಳಿತ ಪಕ್ಷದ ಟಿ.ಪಿ. ಮಾನಸ ಮುಖ್ಯಮಂತ್ರಿಯಾಗಿದ್ದರು. ಜೆ.ಎಸ್. ಕುಂದನ್ ಹಾಗೂ ಜಿ.ಎಸ್. ಚಂದನ್ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದರು. ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಭೂಮಿಕಾ ಸಭಾಧ್ಯಕ್ಷರಾಗಿದ್ದರು.
ವಿಷಯ ಪರಿವೀಕ್ಷರಾದ ಸವಿತಾ, ಶಿವಣ್ಣ, ಗೋವಿಂದಪ್ಪ, ಕುಬೇರಪ್ಪ, ತೀರ್ಪುಗಾರರಾಗಿ ಸರ್ಕಾರಿ ಕಲಾ ಕಾಲೇಜು ರಾಜ್ಯಶಾಸ್ತ್ರ ಉಪನ್ಯಾಸಕ ತಿಪ್ಪೇಸ್ವಾಮಿ, ಐಮಂಗಳ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ರಮೇಶ್ ಭಾಗವಹಿಸಿದ್ದರು.