ಚಿತ್ರದುರ್ಗ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಹಾಲಿ ಅಧ್ಯಕ್ಷ ಕೆ.ಜಿ. ಜಗದೀಶ್ ಸತತ ನಾಲ್ಕನೇ ಬಾರಿ ಪುನರಾಯ್ಕೆಯಾಗಿದ್ದಾರೆ.
ಜಿಲ್ಲಾ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ಸರ್ಕಾರಿ ನೌಕರರ ಬೆಂಬಲಿಗರೊಂದಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದರು. ಇವರ ಅಧಿಕಾರಾವಧಿ 2019-2024 ರವರೆಗೆ ಇರಲಿದೆ. ರಾಜ್ಯ ಪರಿಷತ್ ಸ್ಥಾನಕ್ಕೆ ಕೆ.ಟಿ. ತಿಮ್ಮಾ ರೆಡ್ಡಿ, ಖಜಾಂಚಿ ಸ್ಥಾನಕ್ಕೆ ವೀರೇಶ್ ಆಯ್ಕೆಯಾಗುವ ಮೂಲಕ ಜಗದೀಶ್ ಬೆಂಬಲಿಗರೇ ಆಯ್ಕೆಯಾದಂತಾಗಿದೆ.
ವಿವಿಧ ಸರ್ಕಾರಿ ಇಲಾಖೆಗಳಿಂದ ಒಟ್ಟು 66 ಮತಗಳಿದ್ದವು. ಈ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ಜಿ. ಜಗದೀಶ್ ಅವರಿಗೆ 38 ಮತಗಳು ದೊರೆತರೆ, ಪ್ರತಿಸ್ಪರ್ಧಿ ಮಂಜುನಾಥ್ 28 ಮತಗಳನ್ನು ಪಡೆದು ಪರಾಭವಗೊಂಡರು. ಜಗದೀಶ್ 10 ಮತಗಳ ಅಂತರದಲ್ಲಿ ಜಯ ಗಳಿಸಿ ಸತತ ನಾಲ್ಕನೇ ಬಾರಿ ಅಧ್ಯಕ್ಷ ಗಾದಿಗೇರಿದರು.
ರಾಜ್ಯ ಪರಿಷತ್ ಸ್ಥಾನಕ್ಕೆ ಕೆ.ಟಿ. ತಿಮ್ಮಾ ರೆಡ್ಡಿ 43 ಮತಗಳನ್ನು ಆಯ್ಕೆಯಾದರೆ ಅವರ ಎದುರಾಳಿ ಬಿಸಿಎಂ ಇಲಾಖೆಯ ರಾಘವೇಂದ್ರ 23 ಮತಗಳನ್ನು ಪಡೆದು ಸೋಲು ಕಂಡರು. ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ವೀರೇಶ್ 38 ಮತಗಳನ್ನು ಪಡೆದು ಆಯ್ಕೆಯಾದರೆ, ಪ್ರತಿಸ್ಪರ್ಧಿ ಸುಭಾಷ್‌ಚಂದ್ರ 28 ಮತಗಳಿಗೆ ತೃಪ್ತಿಪಡಬೇಕಾಯಿತು. ನಿವೃತ್ತ ಉಪ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಕೆ.ಪಿ. ಚಂದ್ರಹಾಸ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
ಮತ ಎಣಿಕೆ ನಂತರ ಜಗದೀಶ್ ಬೆಂಬಲಿಗರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಡಿ.ಎಂ. ಸಿದ್ದೇಶ್ವರ್, ನಾಗರಾಜ್, ಸುಧಾ, ಶಕುಂತಲಾ ಬಾಯಿ, ಸಂತೋಷ್, ವೇದಮೂರ್ತಿ, ಇಂದ್ರಕುಮಾರ್, ಎಂ.ಎಂ. ತಿಪ್ಪೇಸ್ವಾಮಿ, ಚಂದ್ರಾ ನಾಯ್ಕ, ಮಹಮ್ಮದ್ ಖಾಜಾ ಹುಸೇನ್, ಪಿ.ವಿ. ಮುರಳೀಧರ, ನರಸಿಂಹಮೂರ್ತಿ, ತಿಪ್ಪೇಶ್, ಮೋಹನ ದಾಸ್, ಹುಲಿಕುಂಟಪ್ಪ, ಭಾಗೇಶ್ ಉಗ್ರಾಣ, ಗುರುಮೂರ್ತಿ, ಮಂಜುನಾಥ್, ಚಳ್ಳಕೆರೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಿ. ಜಗನ್ನಾಥ್, ಮೊಳಕಾಲ್ಮೂರು ತಾಲೂಕು ಅಧ್ಯಕ್ಷ ಚಿದಾನಂದ ಮತ್ತಿತರರು ಇದ್ದರು.