Advertisement
ಇದುವರೆಗೆ ಹಿರಿಯೂರು ಕ್ಷೇತ್ರದ ಮಾಜಿ ಶಾಸಕ ಡಿ. ಸುಧಾಕರ್ ಚಳ್ಳಕೆರೆ ಕ್ಷೇತ್ರದಿಂದ ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗುತ್ತಿದ್ದರು. ಮಾತ್ರವಲ್ಲ, ಅಧ್ಯಕ್ಷಗಾದಿಯನ್ನೂ ಏರುತ್ತಿದ್ದರು. ಈ ಬಾರಿಯೂ ಚಳ್ಳಕೆರೆ ಕ್ಷೇತ್ರದಿಂದ ಅವರೊಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.
Related Articles
Advertisement
ಸಿಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಶಾಸಕ ಟಿ. ರಘುಮೂರ್ತಿಸಹ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಲಾಗಿದ್ದು, ಬಹುತೇಕ ಕಾಂಗ್ರೆಸ್ ಮುಖಂಡರು ರಘುಮೂರ್ತಿ ತೀರ್ಮಾನಕ್ಕೆ ಪ್ರತ್ಯಕ್ಷ- ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನಿತ್ಯ ರಾಜಕೀಯದ ಆಟಗಳು ಹೋಟೆಲ್, ವಸತಿಗೃಹಗಳು, ಮನೆಗಳಲ್ಲಿ ಬಿರುಸುಗೊಳ್ಳುತ್ತಿವೆ. ರಘುಮೂರ್ತಿಯವರು ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಸುಧಾಕರ್, ತಾವು ಕೂಡ ಪ್ರತಿತಂತ್ರ ಹೆಣೆಯಲು ಆರಂಭಿಸಿದ್ದಾರೆ ಎನ್ನಲಾಗಿದೆ.
ಮಾಜಿ ಶಾಸಕ ಡಿ. ಸುಧಾಕರ್ ಅವರ ರಾಜಕೀಯ ಏಳ್ಗೆಗೆ ಸಿಡಿಸಿಸಿ ಬ್ಯಾಂಕ್ ಮೆಟ್ಟಿಲಾಗಿ ಕೆಲಸ ಮಾಡಿತು ಎಂದರೆ ಅತಿಶಯೋಕ್ತಿಯಲ್ಲ. ರಘುಮೂರ್ತಿ ಪ್ರವೇಶದಿಂದಾಗಿ ಸಿಡಿಸಿಸಿ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ‘ಶತ್ರುವಿನ ಶತ್ರು ಮಿತ್ರ’ ಎಂಬಂತೆ ಹಳೆಯ ವಿರೋಧಿಗಳೆಲ್ಲ ಸ್ನೇಹಿತರಾಗುತ್ತಿದ್ದಾರೆ. ನಿರ್ದೇಶಕ ಸ್ಥಾನದ ಚುನಾವಣೆಯಲ್ಲೇ ರಘುಮೂರ್ತಿ ಅವರನ್ನು ಸೋಲಿಸಿದರೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಯೇ ಇರುವುದಿಲ್ಲ ಎನ್ನುವ ಲೆಕ್ಕಾಚಾರವೂ ಜೋರಾಗಿ ನಡೆದಿದೆ. ಒಂದೇ ಪಕ್ಷದವರು ಕಣಕ್ಕಿಳಿದಿರುವುದರಿಂದ ಫಲಿತಾಂಶ ಏನಾದೀತು ಎಂಬ ಕುತೂಹಲ ಮೂಡಿದೆ.
ಅಂತೂ ಸಿಕ್ಕಿತು ಮತದಾನ ಹಕ್ಕುಸಿಡಿಸಿಸಿ ಬ್ಯಾಂಕ್‌ನಲ್ಲಿ ಸದ್ಯ 156 ಅರ್ಹ ಮತದಾರರಿದ್ದು, ಅನರ್ಹತೆ ಪಟ್ಟಿಯಲ್ಲಿ 260 ಮಂದಿ ಇದ್ದಾರೆ. ಇವರೆಲ್ಲ ನ್ಯಾಯಾಲಯದ ಮೊರೆ ಹೋಗಿ ಮತದಾನ ಮಾಡಲು ನ್ಯಾಯಾಲಯದಿಂದ ಅವಕಾಶವನ್ನೂ ಪಡೆದುಕೊಂಡಿದ್ದಾರೆ. ಇದೇ ರೀತಿ ಶಿವಮೊಗ್ಗದಲ್ಲೂ ಅನರ್ಹರು ನ್ಯಾಯಾಲಯಕ್ಕೆ ಹೋಗಿದ್ದು, ನ್ಯಾಯಾಲಯ ಮತದಾನಕ್ಕೆ ಮಾತ್ರ ಅವಕಾಶ ನೀಡಿ ಸ್ಪರ್ಧಿಸಲು ನಿರಾಕರಿಸಿದ್ದನ್ನಿಲ್ಲಿ ಸ್ಮರಿಸಬಹುದಾಗಿದೆ. ಸಿಡಿಸಿಸಿ ಬ್ಯಾಂಕ್ ಬೈಲಾ ಪ್ರಕಾರ ಐದು ಸಾಮಾನ್ಯ ಸಭೆಗಳ ಪೈಕಿ (ಜನರಲ್ ಬಾಡಿ) ಕನಿಷ್ಠ ಮೂರು ಸಾಮಾನ್ಯ ಸಭೆಗಳಿಗೆ ಹಾಜರಾದವರಿಗೆ ಮಾತ್ರ ಮತದಾನದ ಹಕ್ಕು ಸಿಗಲಿದೆ. ಇಲ್ಲದಿದ್ದರೆ ಅಂಥವರನ್ನು ಅನರ್ಹ ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ. ಇಂಥವರು 260 ಸದಸ್ಯರಿದ್ದಾರೆ. •ಹರಿಯಬ್ಬೆ ಹೆಂಜಾರಪ್ಪ