ಚಿತ್ರದುರ್ಗ: ಜಿಲ್ಲಾ ಕಾಂಗ್ರೆಸ್‌ಗೆ ನೂತನ ಸಾರಥಿಯನ್ನು ಆಯ್ಕೆ ಮಾಡುವ ಹಿನ್ನೆಲೆಯಲ್ಲಿ ಕೆಪಿಸಿಸಿ ವೀಕ್ಷಕರು ಶನಿವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದರು.
ಈ ವೇಳೆ ನೂರಾರು ಕಾರ್ಯಕರ್ತರು, ಬೆಂಬಲಿಗರು ತಮ್ಮ ನಾಯಕರೇ ಅಧ್ಯಕ್ಷರಾಗಲಿ ಎಂದು ಭಾವಚಿತ್ರಗಳನ್ನು ಹಿಡಿದು ಘೋಷಣೆ ಕೂಗುತ್ತಿದ್ದರು. ವೀಕ್ಷಕರ ಆಗಮನ, ಹೊಸ ಅಧ್ಯಕ್ಷರ ಆಯ್ಕೆ ಸಂಬಂಧ ನಡೆದ ಸಭೆಯ ಕಾರಣಕ್ಕೆ ಒನಕೆ ಓಬವ್ವ ವೃತ್ತ ಹಾಗೂ ಕಾಂಗ್ರೆಸ್ ಕಚೇರಿ ಜನರಿಂದ ತುಂಬಿ ಹೋಗಿತ್ತು. ಮಾಜಿ ಶಾಸಕ ಎಸ್.ಕೆ. ಬಸವರಾಜನ್, ಬಿ.ಟಿ. ಜಗದೀಶ್, ಒ. ಶಂಕರ್, ಹಾಲಸ್ವಾಮಿ, ಶಿವು ಯಾದವ್, ಗೀತಾನಂದಿನಿ ಗೌಡ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮಂದಿ ಕೆಪಿಸಿಸಿ ವೀಕ್ಷಕ ವೇಣುಗೋಪಾಲ್ ಅವರಿಗೆ ಅರ್ಜಿಗಳನ್ನು ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಾಜಿ ಸಂಸದ ಬಿ.ಎನ್ ಚಂದ್ರಪ್ಪ, ಜಿಲ್ಲೆಯಲ್ಲಿ ಪಕ್ಷ ಸದೃಢವಾಗಿದೆ. ಯಾವುದೇ ಗುಂಪುಗಾರಿಕೆ ಇಲ್ಲ. ಸಣ್ಣಪುಟ್ಟ ವಿಚಾರದಲ್ಲಿ ಗೊಂದಲ ಇರಬಹುದು, ಆದರೆ ಒಗ್ಗಟ್ಟಿನ ಕೊರತೆ ಇಲ್ಲ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಇದ್ದೇವೆ ಎಂದರು.
ರಾಜ್ಯದಲ್ಲಿ ಈ ಹಿಂದೆ ಸಣ್ಣ ಪ್ರಮಾಣದಲ್ಲಿ ನೆರೆ ಬಂದಿದ್ದ ವೇಳೆ ಭೇಟಿ ನೀಡಿದ್ದ ಅಂದಿನ ಪ್ರಧಾನಿ ಡಾ| ಮನಮೋಹನ್ ಸಿಂಗ್, ಸುಮಾರು 1600 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದರು. ಆದರೆ ಈಗ ರಾಜ್ಯದಲ್ಲಿ ಬರ ಮತ್ತು ನೆರೆ ಇದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳಿವೆ. ನೆರೆ ಪ್ರದೇಶಕ್ಕೆ ಹಣಕಾಸು ಮತ್ತು ಗೃಹ ಮಂತ್ರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಇದುವರೆಗೆ ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ದೇಶ ಮತ್ತು ರಾಜ್ಯ ಹಾಗೂ ಜಿಲ್ಲೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಸರಿ ಇಲ್ಲ ಎಂದು ಅಧೀರರಾಗುವ ಅಗತ್ಯ ಇಲ್ಲ. ಬಿಜೆಪಿ ನೇತೃತ್ವದ ಸರ್ಕಾರಗಳು ಕಾಂಗ್ರೆಸ್ ಪಕ್ಷದ ನೇತಾರರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ತಮ್ಮ ನಿಯಂತ್ರಣಲ್ಲಿರುವ ವಿವಿಧ ಸಂಸ್ಥೆಗಳಿಂದ ನಮ್ಮ ನಾಯಕರಿಗೆ ತೊಂದರೆ ನೀಡುತ್ತಿದ್ದಾರೆ. ಪಿ. ಚಿದಂಬರಂ ಹಾಗೂ ಡಿ.ಕೆ. ಶಿವಕುಮಾರ್ ಪ್ರಕರಣಗಳು ಇದಕ್ಕೆ ಸಾಕ್ಷಿ ಎಂದು ಆರೋಪಿಸಿದರು. ರಾಜ್ಯದಲ್ಲಿ ವಾಮಮಾರ್ಗದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಹೆದರಿಸುವ ಕೆಲಸ ಮಾಡುತ್ತಿದೆ. ಇದನ್ನು ಎಲ್ಲರೂ ಖಂಡಿಸಬೇಕು ಎಂದರು.
ಈಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಂಬಂಧ ಸಭೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಪಕ್ಷ ಸಂಘಟಿಸುವ ಕೆಲಸ ಮಾಡಬೇಕಿದೆ. ಅಧಿಕಾರ ಒಂದೇ ಪಕ್ಷದಲ್ಲಿ ಇರುವುದಿಲ್ಲ. ಈಗ ನಮ್ಮಲ್ಲಿ ಅಧಿಕಾರ ಇಲ್ಲದಿರಬಹುದು, ಅದಕ್ಕೆ ಯಾವುದೇ ನಿರಾಸೆ ಬೇಡ. ಮುಂದಿನ ದಿನದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವೇ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಡಿ. ಸುಧಾಕರ್. ಉಮಾಪತಿ. ಇಳ್ಕಲ್ ವಿಜಯಕುಮಾರ್, ಮುಖಂಡರಾದ ಹನುಮಲಿ ಷಣ್ಮುಖಪ್ಪ, ಆರ್. ಮಂಜುನಾಥ್. ಜಿ.ಎಸ್. ಮಂಜುನಾಥ್, ಬಿ.ಟಿ. ಜಗದೀಶ್, ಶಂಕರ್, ಗೋ. ತಿಪ್ಪೇಶಿ, ಡಾ| ಯೋಗೇಶ್‌ಬಾಬು ಮತ್ತಿತರರು ಇದ್ದರು.