Advertisement

ಜಿಲ್ಲಾಡಳಿತ ಭವನಕ್ಕೆ 150ರ ಸಂಭ್ರಮ

12:58 PM Oct 16, 2019 | Naveen |

ಚಿತ್ರದುರ್ಗ: ಐತಿಹಾಸಿಕ ನಗರಿ ಚಿತ್ರದುರ್ಗದಲ್ಲಿರುವ ಜಿಲ್ಲೆಯ ಆಡಳಿತ ಕಚೇರಿ ಜಿಲ್ಲಾಡಳಿತ ಭವನಕ್ಕೆ ಬರೋಬ್ಬರಿ 150 ವಸಂತಗಳ ಸಂಭ್ರಮ. 1869ರಲ್ಲಿ ನಿರ್ಮಾಣವಾದ ಕಟ್ಟಡ ಇಂದಿಗೂ ಗಟ್ಟಿಮುಟ್ಟಾಗಿದ್ದು, ಹೊಸದಾಗಿ ನಿರ್ಮಿಸಿದ ಕಟ್ಟಡಗಳನ್ನು ನಾಚಿಸುವಂತಿದೆ.

Advertisement

ಮೈಸೂರು ಅರಸರ ಆಡಳಿತ ವ್ಯಾಪ್ತಿಯಲ್ಲಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ಶತಮಾನ ಕಂಡ ಹಲವು ಕಟ್ಟಡಗಳಿವೆ. ಅವುಗಳಲ್ಲಿ ಜಿಲ್ಲಾಡಳಿತ ಭವನ ಕೂಡ ಒಂದು. ಈ ಕಟ್ಟಡಕ್ಕೆ 150 ವರ್ಷವಾಗಿದೆ ಎಂದು ಹೇಳಲಾಗದಷ್ಟು ಗಟ್ಟಿಯಾಗಿದೆ ಕಟ್ಟಡ.

ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರ್‌ (1799-1868) ಅ ಧಿಕಾರಾವಧಿಯಲ್ಲಿ ಸುಗಮ ಆಡಳಿತದ ಉದ್ದೇಶದಿಂದ ಮೈಸೂರು ರಾಜ್ಯವನ್ನು 6 ಫೌಜ್‌ದಾರ್‌ಗಳು, 101 ತಾಲೂಕುಗಳಾಗಿ ವಿಂಗಡಿಸಲಾಗಿತ್ತು. ಹಿಂದೆ “ಚಿತಲ್‌ಡ್ರುಗ್‌’ ಎಂದು ಕರೆಯುತ್ತಿದ್ದ ಚಿತ್ರದುರ್ಗ ಕೂಡ ಪ್ರಮುಖ ಕೇಂದ್ರವಾಗಿತ್ತು. ಇದರ ವ್ಯಾಪ್ತಿಗೆ 13 ತಾಲೂಕುಗಳು ಸೇರಿದ್ದವು. 1862 ರಲ್ಲಿ ಬ್ರಿಟಿಷ್‌ ಸರ್ಕಾರ ಲಿವಿನ್‌ ಬೆಂಥೆಮ್‌ ಬೋರಿಂಗ್‌ ಅವರನ್ನು ಮೈಸೂರು ಕಮಿಷನರ್‌ ಆಗಿ ನೇಮಕ ಮಾಡಿತು. ಈ ವೇಳೆ ಮೈಸೂರು ರಾಜ್ಯವನ್ನು 8 ಜಿಲ್ಲೆಗಳಾಗಿ ವಿಂಗಡಣೆ ಮಾಡಲಾಗಿತ್ತು, ಇದರಲ್ಲಿ ಚಿತ್ರದುರ್ಗವೂ ಒಂದಾಗಿತ್ತು.

ನಂತರ ಇಡೀ ರಾಜ್ಯಕ್ಕೆ ಒಬ್ಬರೇ ಚೀಫ್‌ ಕಮಿಷನರ್‌ ಮತ್ತು ಪ್ರತಿ ಜಿಲ್ಲೆಗೆ ಡೆಪ್ಯೂಟಿ ಕಮಿಷನರ್‌ಗಳನ್ನು ನೇಮಿಸಲಾಯಿತು. ಇಂದಿಗೂ ಜಿಲ್ಲಾಧಿಕಾರಿಗಳನ್ನು ಡೆಪ್ಯೂಟಿ ಕಮಿಷನರ್‌ ಎಂದೇ ಕರೆಯಲಾಗುವುದನ್ನು ಗಮನಿಸಬಹುದು. 1869 ರಲ್ಲಿ “ಚಿತಲ್‌ಡ್ರುಗ್‌’ ಅಂದರೆ ಈಗಿನ ಚಿತ್ರದುರ್ಗದಲ್ಲಿ ಆಗ ಡೆಪ್ಯೂಟಿ ಕಮಿಷನರ್‌ ಕಚೇರಿ ಕಟ್ಟಡವನ್ನು ನಿರ್ಮಿಸಲಾಯಿತು.

ಕಟ್ಟಡದ ನೆಲಮಹಡಿಯ ಪ್ರವೇಶದ್ವಾರದ ಎದುರಿನ ಗೋಡೆಯ ಮೇಲೆ ಕಟ್ಟಡ ಕಟ್ಟುವಾಗ ಅಳವಡಿಸಿದ್ದ “1869′ ಎಂಬ ಫಲಕವನ್ನು ಈಗಲೂ ಕಾಣಬಹುದಾಗಿದೆ. ಹೀಗಾಗಿ ಕಟ್ಟಡಕ್ಕೆ 2019ಕ್ಕೆ 150 ವರ್ಷಗಳು ಸಂದಿವೆ.

Advertisement

ಜಿಲ್ಲಾಡಳಿತ ಭವನದಲ್ಲಿ ಏನೇನಿವೆ?: ಹಲವು ಆಡಳಿತದ ಮಜಲುಗಳನ್ನು ಕಂಡಿರುವ ಈ ಕಟ್ಟಡದಲ್ಲಿ ಸದ್ಯ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡದ ನೆಲಮಹಡಿಯಲ್ಲಿ ಉಪವಿಭಾಗಾ ಕಾರಿಗಳ ಕಚೇರಿ, ಭೂದಾಖಲೆಗಳ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಅಂಚೆ ಕಚೇರಿ ಸೇರಿದಂತೆ ವಿವಿಧ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ.

ಮೊದಲನೆ ಮಹಡಿಯಲ್ಲಿ ಅಪರ ಜಿಲ್ಲಾಧಿಕಾರಿ ಕಚೇರಿ, ಚುನಾವಣಾ ವಿಭಾಗ, ಕಂದಾಯ ಇಲಾಖೆ ಸಿಬ್ಬಂದಿ ವಿಭಾಗ, ಸಣ್ಣ ಉಳಿತಾಯ ಇಲಾಖೆ, ಮುಜರಾಯಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಎನ್‌ಐಸಿ ಸೇರಿದಂತೆ ವಿವಿಧ ಕಚೇರಿಗಳಿವೆ.

ಈ ಕಟ್ಟಡಕ್ಕೆ ಹೊಂದಿಕೊಂಡಂತೆ ವಿಸ್ತರಿಸಲಾದ ಕಟ್ಟಡದ ಮೇಲ್ಮಹಡಿಯಲ್ಲಿ ಜಿಲ್ಲಾಧಿಕಾರಿಗಳ ಕೊಠಡಿ ಹಾಗೂ ನೆಲಮಹಡಿಯಲ್ಲಿ ಸಭಾಂಗಣ ಇದೆ. ಕಟ್ಟಡದಲ್ಲಿನ ಕೊಠಡಿಗಳು ಸಾಕಷ್ಟು ವಿಶಾಲವಾಗಿದ್ದು, ಮೇಲ್ಛಾವಣಿ ಭದ್ರವಾಗಿದೆ. ಕಿಟಕಿ, ಬಾಗಿಲುಗಳು ಕೂಡಾ ಸುಸ್ಥಿತಿಯಲ್ಲಿದ್ದು ಬಳಕೆಯಲ್ಲಿವೆ. ಲೋಕೋಪಯೋಗಿ ಇಲಾಖೆಯ ಮೂಲಗಳ ಪ್ರಕಾರ ಈ ಕಟ್ಟಡ ನಿರ್ಮಾಣಕ್ಕೆ ಆಗಿನ ಕಾಲದಲ್ಲಿ ಭರಿಸಿದ ವೆಚ್ಚ ಕೇವಲ 1.42 ಲಕ್ಷ ರೂ. ಮಾತ್ರ. ಕಟ್ಟಡದಲ್ಲಿ ಹಲವು ವಿಶಾಲ ಹಾಗೂ ಎತ್ತರದ ಕೊಠಡಿಗಳಿದ್ದು, ಗಾಳಿ ಮತ್ತು ಬೆಳಕಿನ ಕೊರತೆಯಾಗದಂತೆ ನಿರ್ಮಿಸಿರುವ ಕಿಟಕಿಗಳು, ಕೊಠಡಿಯಿಂದ ಕೊಠಡಿಗೆ ತೆರಳಲು ಉತ್ತಮ ಸಂಪರ್ಕ ವ್ಯವಸ್ಥೆ, ಬೃಹತ್‌ ಕಂಬಗಳು, ನಾಜೂಕಾಗಿ ವ್ಯವಸ್ಥಿತವಾಗಿ ಹಾಕಲಾಗಿರುವ ಗಟ್ಟಿಮುಟ್ಟಾದ ಮೇಲ್ಛಾವಣಿ ಕಟ್ಟಡದ ವಾಸ್ತುಶಿಲ್ಪಿಯ ಜಾಣ್ಮೆಗೆ ಸಾಕ್ಷಿಯಾಗಿವೆ.

ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು, ಸುಗಮ ಆಡಳಿತ ಇನ್ನಿತರ ಸದುದ್ದೇಶದಿಂದ ಕಟ್ಟಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಆದರೂ ಕಟ್ಟಡದ ಮೂಲ ಸ್ವರೂಪವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಸದ್ಯ 150 ವರ್ಷಗಳ ಸಂಭ್ರಮ ಆಚರಿಸುತ್ತಿರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next