Advertisement

ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ರವಾನೆ

11:44 AM Aug 11, 2019 | Naveen |

ಚಿತ್ರದುರ್ಗ: ಉತ್ತರ ಕರ್ನಾಟಕದ ನೆರೆ ಪೀಡಿತರಿಗೆ ಪರಿಹಾರ ರೂಪವಾಗಿ ಚಿತ್ರದುರ್ಗ ಜೈನ ಸಂಘದಿಂದ ಶನಿವಾರ ಸುಮಾರು 7.50 ಲಕ್ಷ ರೂ. ಮೌಲ್ಯದ ಆಹಾರ ಮತ್ತು ಇತರೆ ಸಾಮಗ್ರಿಗಳನ್ನು ಕಳುಹಿಸಲಾಯಿತು.

Advertisement

ಸಾಮಗ್ರಿಗಳನ್ನು ಹೊತ್ತು ಹೊರಟಿದ್ದ ವಾಹನಕ್ಕೆ ಚಾಲನೆ ನೀಡಿದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಚಿತ್ರದುರ್ಗದ ಜೈನ ಸಮುದಾಯ ಮಾಡುತ್ತಿದೆ ಎಂದರು.

ಒಂದು ಸಾವಿರ ಬ್ಲಾಂಕಟ್, 300 ಜರ್ಕಿನ್‌, 500 ಲುಂಗಿ, ಟೀಶರ್ಟ್‌, ನೀರು, ಬಿಸ್ಕೇಟ್, ಹಣ್ಣು ಸೇರಿದಂತೆ ಸುಮಾರು ಏಳುವರೆ ಲಕ್ಷದ ಸಾಮಗ್ರಿಗಳನ್ನು ಮೊದಲ ಹಂತವಾಗಿ ಕಳುಹಿಸಿಕೊಡಲಾಗಿದೆ. ಜಿಲ್ಲಾಡಳಿತದಿಂದ ವಾಹನದ ವ್ಯವಸ್ಥೆ ಮಾಡಿದರೆ ಮೇವು ಕಳುಹಿಸುವುದಾಗಿ ಜೈನ ಸಮಾಜ ತಿಳಿಸಿದೆ. ಈ ಬಗ್ಗೆ ಶಾಸಕರು ಹಾಗೂ ಅಧಿಕಾರಿಗಳು ಮಾತನಾಡಿ, ಜಿಲ್ಲಾ ಮಟ್ಟದಿಂದಲೇ ಪರಿಹಾರ ವಿತರಣೆ ಬಗ್ಗೆ ಚಿಂತನೆ ನಡೆಸಲಿದ್ದೇವೆ ಎಂದರು.

ಕೊಡಗಿನಲ್ಲಿ ವಿಪತ್ತು ಸಂಭವಿಸಿದಾಗ ಸರ್ಕಾರ ಪರಿಹಾರ ಕಾರ್ಯಗಳನ್ನು ಕೈಗೊಂಡಿತ್ತು. ಈ ವೇಳೆ ಇಡೀ ರಾಜ್ಯದಿಂದ ಸಾಕಷ್ಟು ಧವಸ, ಧಾನ್ಯ ಮತ್ತಿತರೆ ಪರಿಹಾರ ಸಾಮಗ್ರಿ ಬಂದಿತ್ತು. ಆದರೆ, ಅದನ್ನು ಸಮರ್ಪಕವಾಗಿ ವಿತರಣೆ ಮಾಡದೇ ಕೊಳೆಯುತ್ತಿದೆ ಎಂದು ಅಧಿವೇಶನದಲ್ಲಿ ಆ ಭಾಗದ ಶಾಸಕರು ಹೇಳಿದ್ದಾರೆ. ಆದರೆ, ಜೈನ ಸಮುದಾಯದವರು ಸ್ಥಳಕ್ಕೆ ಖುದ್ದು ಹೋಗಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಆರೆಸ್ಸೆಸ್‌ ಮತ್ತಿತರೆ ಪರಿವಾರದ ಸಂಘಟನೆಗಳ ಮಾರ್ಗದರ್ಶನದಲ್ಲಿ ನೀವೇ ವಿತರಣೆ ಮಾಡಿ ಬನ್ನಿ ಎಂದು ಸಲಹೆ ನೀಡಿದರು.

ಈಗಾಗಲೇ ಬೆಳಗಾವಿ ಮತ್ತಿತರೆ ಭಾಗದಲ್ಲಿ ಆರೆಸ್ಸೆಸ್‌ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲಿಗೆ ಯಾವುದು ಅಗತ್ಯ ಇದೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ಅವರ ಮೂಲಕ ಹೋಗುವಂತೆ ಶಾಸಕರು ಮಾರ್ಗದರ್ಶನ ನೀಡಿದರು.

Advertisement

ಸಂಸದ ಎ. ನಾರಾಯಣಸ್ವಾಮಿ ಮಾತನಾಡಿ, ಪ್ರವಾಹ ಪೀಡಿತರಿಗೆ ಸ್ವಯಂಪ್ರೇರಣೆಯಿಂದ ನೆರವು ನೀಡುತ್ತಿರುವ ಜೈನ ಸಮಾಜಕ್ಕೆ ಅಭಿನಂದನೆಗಳು. ಇದು ಇತರೆ ಸಮಾಜ ಹಾಗೂ ಸಂಘ- ಸಂಸ್ಥೆಗಳಿಗೆ ಪ್ರೇರಣೆ ಕೊಡುವ ಕೆಲಸ. ಇಂಥದೊಂದು ಪ್ರವಾಹ ಬಂದು ಜನ ಬೀದಿಗೆ ಬರುತ್ತಾರೆ ಎಂದು ಕನಸು, ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ಈಗ ಬಂದಿರುವ ಪರಿಸ್ಥಿತಿಗೆ ನೆರವು ನೀಡುವುದಷ್ಟೇ ನಮ್ಮ ಕೈಲಾಗುವ ಕೆಲಸ. ಚಿತ್ರದುರ್ಗ ಜಿಲ್ಲಾಡಳಿತ ಹಾಗೂ ಸಂಘ-ಸಂಸ್ಥೆಗಳಿಂದ ಸ್ವಾತಂತ್ರ್ಯ ದಿನಾಚರಣೆ ನಂತರ ದೊಡ್ಡ ಮಟ್ಟದಲ್ಲಿ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಚಿಂತನೆ ನಡೆಯುತ್ತಿದೆ ಎಂದರು.

ಜಿಲ್ಲೆಯ ಎಲ್ಲ ಶಾಸಕರು, ಸಂಘ-ಸಂಸ್ಥೆಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ನೆರೆ ಪರಿಹಾರ ಸಂಗ್ರಹಿಸಿ ಕೊಡುವ ಬಗ್ಗೆ ಸಮಾಲೋಚನೆ ನಡೆಸಲಿದ್ದೇವೆ. ಆಗ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು. ಬಿಜೆಪಿ ಮುಖಂಡ ಟಿ. ಬದ್ರೀನಾಥ್‌, ಜೈನ ಸಮಾಜದ ಮುಖಂಡರಾದ ದೇವಿಚಂದ್‌ ಜೀವನ್‌, ಪೃಥ್ವಿರಾಜ್‌, ರಿಕಬ್‌ ಜೈನ, ಜೀತಮಲ್ ಜೀ ಇದ್ದರು. ವಿಕ್ರಾಂತ್‌ ಜೈನ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next