Advertisement

ನೇರ ರೈಲು ಮಾರ್ಗ ಯೋಜನೆ ತ್ವರಿತಕ್ಕೆ ಸಿಎಂ ಬಳಿ ನಿಯೋಗ

04:56 PM Nov 18, 2019 | Team Udayavani |

ಚಿತ್ರದುರ್ಗ: ಉಪ ಚುನಾವಣೆ ಮುಗಿದ ನಂತರ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಭದ್ರಾ ಮೇಲ್ದಂಡೆ ಹಾಗೂ ನೇರ ರೈಲು ಮಾರ್ಗ ಯೋಜನೆಗಳನ್ನು ತ್ವರಿತವಾಗಿ ಮುಗಿಸುವಂತೆ ಒತ್ತಾಯಿಸಲಾಗುವುದು ಎಂದು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಪಿ. ಕೋದಂಡರಾಮಯ್ಯ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆ ಮಂಜೂರಾಗಿ 16 ವರ್ಷ ಕಳೆದಿದೆ. ಆದರೆ, ಈವರೆಗೆ ಜಿಲ್ಲೆಯ ಜಮೀನಿಗೆ ಒಂದು ಹನಿ ನೀರು ಹರಿದಿಲ್ಲ. ನೇರ ರೈಲು ಮಾರ್ಗ ಮಂಜೂರಾಗಿ 9 ವರ್ಷ ಕಳೆದಿದೆ. ಒಂದು ಕಿ.ಮೀ ಕೂಡಾ ಕಾಮಗಾರಿ ಆರಂಭವಾಗಿಲ್ಲ. ಈ ಯೋಜನೆಗಳ ಅನುಷ್ಠಾನದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭದ್ರಾ ಮೇಲ್ದಂಡೆ ಯೋಜನೆಯಡಿ ವಿವಿ ಸಾಗರಕ್ಕೆ 2 ಟಿಎಂಸಿ ನೀರು ಹರಿಸಿದಾಕ್ಷಣ ಸಮಸ್ಯೆ ಬಗೆಹರಿಯುವುದಿಲ್ಲ. ಕಾಲುವೆ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಬೇಕು. ಯೋಜನೆ ಆರಂಭದಲ್ಲಿ 42 ಟಿಎಂಸಿ ನೀರು ಕೇಳಲಾಗಿತ್ತು. ಆದರೆ 30 ಟಿಎಂಸಿ ಮೀಸಲಿಟ್ಟು ಕೆಲಸ ಪ್ರಾರಂಭಿಸಿದರು.

ಇದರಲ್ಲಿ ಜಿಲ್ಲೆಗೆ 18 ಟಿಎಂಸಿ, ತುಮಕೂರು ಜಿಲ್ಲೆಗೆ 12 ಟಿಎಂಸಿ ನಿಗದಿಯಾಗಿದೆ. ತುಂಗಾದಿಂದ 17 ಟಿಎಂಸಿ ನೀರು ಲಿಫ್ಟ್‌ ಮಾಡಬೇಕು. 5.25 ಲಕ್ಷ ಎಕರೆಗೆ ನೀರಾವರಿಗೆ ನೀರುಣಿಸಬೇಕು ಎಂದು ತಿಳಿಸಿದರು.

ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನೇರ ರೈಲು ಮಾರ್ಗಕ್ಕೆ ಒಪ್ಪಿಗೆ ಸೂಚಿಸಿದ್ದರು. ಈಗ ಮತ್ತೆ ಅವರೇ ಮುಖ್ಯಮಂತ್ರಿ ಆಗಿದ್ದಾರೆ. ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇದೆ. ಈ ಹಿನ್ನೆಲೆಯಲ್ಲಿ ನೇರ ರೈಲು ಮಾರ್ಗ ಯೋಜನೆ ಈಡೇರಲಿದೆ ಎಂಬ ವಿಶ್ವಾಸ ಮೂಡಿದೆ. ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಕೂಡ ರಾಜ್ಯ ಸರ್ಕಾರ ಭೂ ಸ್ವಾಧೀನ ಮಾಡಿಕೊಟ್ಟರೆ ಯೋಜನೆ ಅನುಷ್ಠಾನ ಮಾಡುವುದಾಗಿ ಹೇಳಿದ್ದಾರೆ. ಈ ಎಲ್ಲಾ ಕಾರಣಗಳಿಂದ ಯೋಜನೆ ಬಗ್ಗೆ ಭರವಸೆ ಮುಡಿದೆ. ಚುನಾವಣೆ ಮಗಿದ ನಂತರ ನಿಯೋಗ ತೆರಳಿ ಆಗ್ರಹ ಮಾಡಲಾಗುವುದು ಎಂದು ತಿಳಿಸಿದರು.

Advertisement

ದಾವಣಗೆರೆ, ಚಿತ್ರದುರ್ಗ, ತುಮಕೂರು ನೇರ ರೈಲು ಮಾರ್ಗ ಕುರಿತು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅವರೊಂದಿಗೆ ಚರ್ಚಿಸಲಾಗಿತ್ತು. ಈ ಯೋಜನೆಯಿಂದ ಕೇಂದ್ರಕ್ಕೆ ಹೆಚ್ಚು ಲಾಭವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಅದು ನನಗೂ ಸರಿಯೆನಿಸಿತ್ತು. ಸಮ್ಮಿಶ್ರ ಸರಕಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಎರಡು ಪತ್ರ ಬರೆದಿದ್ದೆ, ಅಲ್ಲದೇ ಅಂದಿನ ಕಂದಾಯ ಸಚಿವರಾಗಿದ್ದ ಆರ್‌.ವಿ.ದೇಶಪಾಂಡೆ ಅವರು ನಮ್ಮ ಪತ್ರಕ್ಕೆ ಸ್ಪಂದಿಸಿ ಯೋಜನೆಯ ಭೂಸ್ವಾಧೀನಕ್ಕೆ ಬೇಕಾದ ಸುಮಾರು 2500 ಎಕರೆ ಜಾಗ ಬೇಕಾಗಿದ್ದು, ಮೂರು ಜಿಲ್ಲೆಗಳಲ್ಲಿ ಭೂಸ್ವಾಧೀನ ಅಧಿಕಾರಿಗಳನ್ನು ನೇಮಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಆದರೆ ಸರಕಾರ ಉಳಿಯಲಿಲ್ಲ ಎಂದರು.

ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳಾದ ಮುರುಘ ರಾಜೇಂದ್ರ ಒಡೆಯರ್‌, ಕುರುಬರಹಳ್ಳಿ ಶಿವಣ್ಣ, ಟಿ.ನುಲೇನೂರು ಎಂ. ಶಂಕರಪ್ಪ, ಕೆ.ಸಿ.ಹೊರಕೇರಪ್ಪ, ಎಂ.ಡಿ. ರವಿ, ಡಾ.ಬಿ. ಯೋಗೇಶ್‌ಬಾಬು, ಸಿ.ಶಿವು ಯಾದವ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next