ಚಿತ್ರದುರ್ಗ: ಕೋವಿಡ್ ನಿಯಂತ್ರಣದ ಜತೆಗೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು, ಕೃಷಿ ಚಟುವಟಿಕೆ ನಿರಂತರವಾಗಿ ನಡೆಯಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜೂನ್ 1ರ ನಂತರ ಲಾಕ್‌ಡೌನ್ ಸಡಿಲಿಕೆಯಾಗಲಿದ್ದು, ಹೋಟೆಲ್ ಸೇರಿದಂತೆ ಕೈಗಾರಿಕೆಗಳು ಆರಂಭವಾಗುವ ನಿರೀಕ್ಷೆ ಇದೆ. ಜಿಲ್ಲೆಯ ಜನರಿಗೆ ಆರೋಗ್ಯ ತಪಾಸಣೆಗೆ ತೊಂದರೆಯಾಗದಂತೆ ಎಲ್ಲ ಕ್ಲಿನಿಕ್, ನರ್ಸಿಂಗ್ ಹೋಂಗಳನ್ನು ಕಡ್ಡಾಯವಾಗಿ ತೆರೆಯಬೇಕು. ಕ್ಲಿನಿಕ್ ಹಾಗೂ ನರ್ಸಿಂಗ್ ಹೋಂ ತೆರೆಯದಿದ್ದರೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಸಂಬಂಧಪಟ್ಟವರಿಗೆ ನೋಟಿಸ್ ನೀಡಬೇಕು ಎಂದರು.
ಪಿಂಚಣಿ ಸರಿಯಾಗಿ ತಲುಪಿಸಿ: ವಿಕಲಚೇತನರು, ವೃದ್ಧಾಪ್ಯ, ವಿಧವಾ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ಆಯಾ ತಿಂಗಳ ಮಾಸಿಕ ಪಿಂಚಣಿಯನ್ನು ಸಮರ್ಪಕವಾಗಿ ತಲುಪಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಲಾಕ್‌ಡೌನ್ ಸಂದರ್ಭದಲ್ಲಿ ಮೂರು ತಿಂಗಳ ಪಿಂಚಣೆ ವಿತರಣೆಯಾಗಿಲ್ಲ ಎಂಬ ದೂರುಗಳು ಬಂದಿದೆ. ಹಾಗಾಗಿ ಒಂದು ವಾರದೊಳಗೆ ಸಮಗ್ರ ವರದಿ ನೀಡಬೇಕು ಎಂದು ತಾಕೀತು ಮಾಡಿದರು.
ಶಾಸಕ ಎಂ.ಚಂದ್ರಪ್ಪ ಪ್ರತಿಕ್ರಿಯಿಸಿ, ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ಮಾಸಿಕ ಪಿಂಚಣಿ ಸಮರ್ಪಕವಾಗಿ ವಿತರಣೆಯಾಗಿಲ್ಲ. ಕೆಲವು ಫಲಾನುಭವಿಗಳಿಗೆ ಅಂಚೆ ಕಚೇರಿಯಿಂದ ಎಂಒ ಮೂಲಕ ತಲುಪಿಸಲಾಗುತ್ತಿದೆ. ಇದರಿಂದ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಪಿಂಚಣಿ ಕೈಸೇರುತ್ತಿಲ್ಲ ಎಂದು ದೂರಿದರು. ಸಂಸದ ಎ. ನಾರಾಯಣಸ್ವಾಮಿ ಮಾತನಾಡಿ, ಸಾಮಾಜಿಕ ಭದ್ರತಾ ಯೋಜನೆಯ ಎಲ್ಲ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಯ ಮೂಲಕ ನೇರ ಹಣ ವರ್ಗಾವಣೆ ಆಗುವಂತೆ ಅ ಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ಕಡ್ಡಾಯವಾಗಿ ಆಧಾರ್ ಲಿಂಕ್ ಮಾಡಬೇಕು. ಆಧಾರ್ ಲಿಂಕ್ ಮಾಡಿದಾಗ ಮಾತ್ರ ಅನರ್ಹರು ಪಿಂಚಣೆ ಪಡೆಯುವುದು ನಿಂತು ಇದರಿಂದ ಸರ್ಕಾರಕ್ಕೆ ಹಣದ ಉಳಿತಾಯವಾಗುತ್ತದೆ. ಶೇ 100 ರಷ್ಟು ಆಧಾರ್ ಲಿಂಕ್ ಕಡ್ಡಾಯವಾಗಿ ಮಾಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಜಾತಿಯ ತಾರತಮ್ಯವಿಲ್ಲದೆ ಪ್ರತಿ ಹಳ್ಳಿಗಳಿಗೂ ಸ್ಮಶಾನ ಇರಬೇಕು ಎನ್ನುವುದು ಸರ್ಕಾರದ ಪಾಲಿಸಿಯಾಗಿದ್ದು, ಸಾರ್ವಜನಿಕ ಸ್ಮಶಾನ ಎಲ್ಲರಿಗೂ ಒಂದೇ ಸ್ಮಶಾನ ಇರಬೇಕು. ಈ ನಿಟ್ಟಿನಲ್ಲಿ ಎಲ್ಲ ತಹಶೀಲ್ದಾರರು ಕ್ರಮ ಕೈಗೊಳ್ಳಬೇಕು. ಗೋಮಾಳವಾದರೆ ಜಿಲ್ಲಾಧಿಕಾರಿ ಅನುಮೋದನೆ ನೀಡುವರು. ಖರಾಬು ಜಮೀನು ಆಗಿದ್ದಲ್ಲಿ ಸರ್ಕಾರಕ್ಕೆ ಕಳುಹಿಸಿಕೊಡಬೇಕು. ಸರ್ಕಾರಕ್ಕೆ ಬಂದ ನಂತರ ಜಿಲ್ಲೆಯ ಎಲ್ಲ ಕಡತಗಳನ್ನು ಒಂದೇ ದಿನ ಅನುಮೋದಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಶಾಸಕರಾದ ಟಿ.ರಘುಮೂರ್ತಿ, ಪೂರ್ಣಿಮಾ ಶ್ರೀನಿವಾಸ್, ಗೂಳಿಹಟ್ಟಿ ಡಿ.ಶೇಖರ್, ಜಿ.ಹೆಚ್.ತಿಪ್ಪಾರೆಡ್ಡಿ, ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಜಿಲ್ಲಾಕಾರಿ ಆರ್.ವಿನೋತ್ ಪ್ರಿಯಾ, ಜಿಪಂ ಸಿಇಒ ಹೊನ್ನಾಂಬ ಮತ್ತಿತರರಿದ್ದರು .
ಹಕ್ಕುಪತ್ರ ವಿತರಣೆಗೆ ಸೂಚನೆ
ಬಗರ್‌ಹುಕುಂ ಸಮಿತಿ ಅಸ್ತಿತ್ವದಲ್ಲಿದ್ದು, ಸಾಕಷ್ಟು ಭೂ ಮಂಜೂರಾತಿ ಅರ್ಜಿಗಳು ಬಾಕಿ ಇವೆ. ಸಮಿತಿಯಲ್ಲಿ ಚರ್ಚೆಯಾಗಿ ಈಗಾಗಲೇ ಪರಿಶೀಲಿಸಲಾಗಿದ್ದು, ಸಮಿತಿ ಅನುಮೋದನೆ ನೀಡಿರುವ ಅರ್ಜಿದಾರರಿಗೆ ಶೀಘ್ರವಾಗಿ ಹಕ್ಕುಪತ್ರ ಮಂಜೂರು ಮಾಡಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಶಾಸಕರಿಂದ ವಿತರಣೆ ಮಾಡಲು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ಗಳಿಗೆ ಸಚಿವ ಅಶೋಕ್ ಸೂಚಿಸಿದರು.