ಚಿತ್ರದುರ್ಗ: ಬಲಿಪಾಡ್ಯಮಿ ಅಂಗವಾಗಿ ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯಿಂದ ಲಕ್ಷ್ಮೀಪೂಜೆ ನೆರೆವೇರಿಸಲಾಯಿತು. ಗ್ರಾಮೀಣ ಭಾಗದಲ್ಲಿ ನಡೆದ ದನಗಳನ್ನು ಕಿಚ್ಚು ಹಾಯಿಸುವ ಕಾರ್ಯಕ್ರಮ ಮೈನವಿರೇಳಿಸಿತು.
ದೀಪಾವಳಿ ಅಂದಾಕ್ಷಣ ಮೊದಲು ನೆನಪಾಗುವುದು ಹಣತೆಗಳು, ಪಟಾಕಿ ಹಾಗೂ ಲಕ್ಷ್ಮೀ ಪೂಜೆ. ಬಹುತೇಕ ಮನೆಗಳ ಅಂಗಳದಲ್ಲಿ, ತುಳಸಿ ಕಟ್ಟೆಗಳ ಬಳಿ ಹಣತೆಗಳು ಕಳೆದ ಮೂರು ದಿನದಿಂದ ಬೆಳಗುತ್ತಿವೆ. ಪುಟಾಣಿ ಮಕ್ಕಳಂತೂ ರಾಕೆಟ್, ಭೂಚಕ್ರ ಸೇರಿದಂತೆ ವಿವಿಧ ಬಗೆಯ ಪಟಾಕಿ ಸಿಡಿಸುತ್ತಾ, ದೀಪಗಳನ್ನು ಬೆಳಗಿಸುತ್ತಾ ಸಂಭ್ರಮಿಸಿದರು.
ಬಲಿಪಾಡ್ಯಮಿ ಅಂಗವಾಗಿ ಬೆಳಿಗ್ಗೆಯಿಂದಲೇ ಹಬ್ಬದ ವಾತಾವರಣ ಇತ್ತು. ಮಹಿಳೆಯರು ಮನೆಯ ಎದುರು ರಂಗೋಲಿ ಬಿಡಿಸಿ ಪೂಜೆಗಾಗಿ ಮಂಟಪ ನಿರ್ಮಿಸಿ, ಲಕ್ಷ್ಮೀಪೂಜೆಗಾಗಿ ಸಿದ್ಧತೆ ಮಾಡಿಕೊಂಡಿದ್ದರು. ಬಾಳೆಕಂದು, ಮಾವಿನ ತೋರಣಗಳಿಂದ ಮನೆಗಳನ್ನು ಸಿಂಗರಿಸಲಾಗಿತ್ತು.
ಲಕ್ಷ್ಮೀಪೂಜೆ -ಹಿರಿಯರ ಪೂಜೆ: ಹಿಂದೂ ಸಂಪ್ರದಾಯದಲ್ಲಿ ಹಿರಿಯರ ಪೂಜೆ ಮಾಡುವ ಪದ್ಧತಿ ಇದೆ. ಕೆಲವರು ಯುಗಾದಿ ಸಂದರ್ಭದಲ್ಲಿ ಪೂಜಿಸಿದರೆ, ಮತ್ತೆ ಕೆಲವರು ದೀಪಾವಳಿಯಲ್ಲಿ ಮಾಡುತ್ತಾರೆ. ಕುಲದೇವರ ಪೂಜೆ, ಹಿರಿಯರ ಪೂಜೆಗಾಗಿ ನೈವೇದ್ಯ ಸಮರ್ಪಿಸಲು ಮನೆಗಳಲ್ಲಿ ತರಹೇವಾರಿ ಖಾದ್ಯಗಳನ್ನು ಮಡಿಯಿಂದ ತಯಾರಿಲಾಗಿತ್ತು. ಹಿರಿಯರು, ಯುವಕರು ಸಗಣಿಯಲ್ಲಿ ಗಣಪತಿ, ಗೊಲ್ಲಮ್ಮ ದೇವಿಯನ್ನು ನಿರ್ಮಿಸಿ ಕಂಚಿಕಡ್ಡಿ, ಬ್ರಹ್ಮದಂಡೆ ಗಿಡ, ತಂಗಟೆ ಹೂಗಳೊಂದಿಗೆ ಮನೆಯಲ್ಲಿರುವ ಬಾಗಿಲುಗಳ ಎರಡೂ ಬದಿಗಳಲ್ಲಿಟ್ಟು ಪೂಜೆ ಸಲ್ಲಿಸಿದರು.
ಕಿಚ್ಚು ಹಾಯಿಸುವ ಸಂಭ್ರಮ: ಗ್ರಾಮೀಣ ಪ್ರದೇಶದ ಹಲವು ಹಳ್ಳಿಗಳಲ್ಲಿ ಮನೆಯಲ್ಲಿರುವ ಎತ್ತು, ಹೋರಿ ಹಾಗೂ ಹಸುಗಳಿಗೆ ವಿಶೇಷ ಅಲಂಕಾರ ಮಾಡಿ ಕಿಚ್ಚು ಹಾಯಿಸುವ ಸಂಭ್ರಮ ಮನೆ ಮಾಡಿತ್ತು. ಊರ ಜಾನುವಾರುಗಳನ್ನೆಲ್ಲ ಒಂದೆಡೆ ಸೇರಿಸಿ ದೊಡ್ಡ ಮಟ್ಟದಲ್ಲಿ ಬೆಂಕಿ ಹಾಕಿ ಕಿಚ್ಚು ಹಾಯಿಸುವುದನ್ನು ನೋಡಲು ಕಣ್ಣು ಸಾಲದು ಎಂಬಂತಿರುತ್ತದೆ.
ದೀಪಾವಳಿಯಲ್ಲಿ ಬಹುತೇಕ ಹಳ್ಳಿಗಳಲ್ಲಿ ಕಿಚ್ಚು ಹಾಯಿಸಿ ದನಗಳಿಗೆ ಯಾವ ತೊಂದರೆಯೂ ಆಗದಂತೆ ಪೂಜಿಸುವ ಸಂಪ್ರದಾಯವಿದೆ. ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದ್ದರೂ ಬಹುತೇಕರು ಅದಕ್ಕೆ ಕಿವಿಗೊಡಲಿಲ್ಲ.