ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ದಿ| ಡಿ. ದೇವರಾಜ ಅರಸು ಧ್ವನಿ ಇಲ್ಲದವರ ಧ್ವನಿಯಾಗಿದ್ದರು. ಅವರ ಸಮಾಜಮುಖೀ ಕೆಲಸಗಳು, ಪ್ರಗತಿಪರ ಯೋಜನೆಗಳು ಅವಿಸ್ಮರಣೀಯ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಗರದ ಗಾಯತ್ರಿ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ಡಿ. ದೇವರಾಜ ಅರಸು ಅವರ 104ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅರಸು ಅವರು, ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿನಿಲಯಗಳ ಪರಿಕಲ್ಪನೆಯನ್ನು ರಾಜ್ಯಕ್ಕೆ ಕೊಟ್ಟಿದ್ದಾರೆ. ಸಮಾಜಕ್ಕೆ ಅವರ ಕೊಡುಗೆಗಳು ಅಪಾರ. ಇಂತಹ ಆದರ್ಶ ವ್ಯಕ್ತಿಗಳು ನಮಗೆ ಸ್ಫೂರ್ತಿಯಾಗಬೇಕು. ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಅಂತಹ ಪುಣ್ಯಾತ್ಮನ ಜಯಂತಿಗೆ ಹಿಂದುಳಿದ ವರ್ಗದವರೇ ಬಾರದಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಮಾತನಾಡಿ, ಅನೇಕ ವೃತ್ತಿಪರ ಕೋರ್ಸ್‌ಗಳಿದ್ದರೂ ಜಿಲ್ಲೆಯ ವಿದ್ಯಾರ್ಥಿಗಳು ಕೇವಲ ಬಿ.ಇಡಿಯಂತಹ ಕೋರ್ಸ್‌ಗಳಿಗೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ. ಬೇರೆ ಕೋರ್ಸ್‌ಗಳ ಕಡೆಗೂ ವಿದ್ಯಾರ್ಥಿಗಳು ಗಮನಹರಿಸಬೇಕು. ವಿದೇಶಿ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ, ಅರಿವು ಶೈಕ್ಷಣಿಕ ಸಾಲದಂತಹ ಹಲವಾರು ಯೋಜನೆಗಳಿದ್ದು, ವಿದ್ಯಾರ್ಥಿಗಳು ಇವುಗಳನ್ನು ಬಳಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಲೇಖಕ ಹಾಗೂ ಉಪನ್ಯಾಸಕ ಸಿ.ಎಸ್. ಗಂಗಾಧರ ವಿಶೇಷ ಉಪನ್ಯಾಸ ನೀಡಿ, ಅಂಬೇಡ್ಕರ್ ದಲಿತರಿಗೆ ಧ್ವನಿಯಾದರೆ, ಅರಸು ದುರ್ಬಲ ವರ್ಗದವರ ಏಳ್ಗೆಗಾಗಿ ಧ್ವನಿಯಾದವರು. ಹಲವು ರಾಜಕಾರಣಿಗಳು ಆಯಾ ಜಾತಿಯ ನಾಯಕರಾಗಿ ಅವರ ವರ್ಗಕ್ಕೆ ಮಾತ್ರ ದುಡಿಯುವುದನ್ನು ಕಾಣುತ್ತೇವೆ. ಆದರೆ ಅರಸು ಯಾವುದೇ ಜಾತಿಯ ನಾಯಕರಾಗದೆ ಎಲ್ಲ ವರ್ಗದವರ ಏಳಿಗೆಗಾಗಿ ಶ್ರಮಿಸಿದರು ಎಂದು ಸ್ಮರಿಸಿದರು.
ಯಜಮಾನಿಕೆ ಸಂಸ್ಕೃತಿಯ ವಿರೋಧಿಯಾಗಿದ್ದ ಅರಸು, ಮೇಲ್ವರ್ಗದ ಒತ್ತಡಕ್ಕೆ ಮಣಿಯದೆ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದರು. ಕೇಂದ್ರ ಸರ್ಕಾರದ 20 ಅಂಶಗಳ ಯೋಜನೆ ಹಾಗೂ ಗಾಂಧಿಧೀಜಿಯವರ ‘ಉಳುವವನೇ ಭೂಮಿ ಒಡೆಯ’ ಪರಿಕಲ್ಪನೆಯನ್ನು ಜಾರಿಗೊಳಿಸಿದರು. ಕೂಲಿಗಾಗಿ ಉಳುಮೆ ಮಾಡುತ್ತಿದ್ದ ಭೂ ರಹಿತರಿಗೆ ಭೂಮಿಯನ್ನು ನೀಡಿದರು. ಅಲ್ಲದೆ ದಲಿತರಿಗೂ ಭೂಮಿಯ ಹಕ್ಕನ್ನು ಕೊಟ್ಟರು ಎಂದರು.
ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಪಂ ಸದಸ್ಯ ಡಿ.ಕೆ. ಶಿವಮೂರ್ತಿ ಮಾತನಾಡಿದರು. ತಾಪಂ ಅಧ್ಯಕ್ಷ ಲಿಂಗರಾಜು, ತಹಶೀಲ್ದಾರ್ ಕಾಂತರಾಜ್, ಡಿಡಿಪಿಐ ರೇವಣಸಿದ್ದಪ್ಪ, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್, ಆಹಾರ ಇಲಾಖೆ ಉಪನಿರ್ದೇಶಕ ಮಧುಸೂದನ್, ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಘುನಾಥ್ ಉಪಸ್ಥಿತರಿದ್ದರು.