Advertisement

ಬೆಸ್ಕಾಂ ಗ್ರಾಹಕರಿಂದ ದೂರುಗಳ ಸುರಿಮಳೆ

11:57 AM Jun 16, 2019 | Naveen |

ಚಿತ್ರದುರ್ಗ: ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ವತಿಯಿಂದ ನಗರ ಉಪವಿಭಾಗದ ಬೆವಿಕಂ ಕಚೇರಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಗ್ರಾಹಕರ ಸಂವಾದ ಸಭೆಯಲ್ಲಿ ಗ್ರಾಹಕರು ದೂರುಗಳ ಸುರಿಮಳೆಗೈದರು.

Advertisement

ನೂತನ ಮನೆ ನಿರ್ಮಾಣಕ್ಕಾಗಿ ಪಡೆಯುವ ತಾತ್ಕಾಲಿಕ ವಿದ್ಯುತ್‌ ಸಂಪರ್ಕದ (ಟಿಪಿ) ಮಾನದಂಡಗಳು ಅವೈಜ್ಞಾನಿಕವಾಗಿದ್ದು ಸಂಪೂರ್ಣ ಸರಳೀಕರಣಗೊಳಿಸುವಂತೆ ಮನವಿ ಮಾಡಿದರು.

ಟಿಪಿ ವಿದ್ಯುತ್‌ ಸಂಪರ್ಕಕ್ಕೆ ಅತಿ ಹೆಚ್ಚಿನ ದರ ನಿಗದಿ ಮಾಡಲಾಗಿದೆ. ಗೃಹೋಪಯೋಗಿ, ವಾಣಿಜ್ಯಕ್ಕೆ ಪ್ರತ್ಯೇಕ ದರ ನಿಗದಿ ಮಾಡಬೇಕು. ಪ್ರತಿ ದಿನ ಬಳಕೆ ಮಾಡಿದಷ್ಟು ಯೂನಿಟ್‌ಗೆ ಮಾತ್ರ ಬಿಲ್ ಪಡೆಯಬೇಕು. ಒಂದು ವೇಳೆ ತಾತ್ಕಾಲಿಕ ವಿದ್ಯುತ್‌ ಸಂಪರ್ಕದಲ್ಲಿ ತಾಂತ್ರಿಕ ದೋಷ, ಅಥವಾ ಕಾರ್ಮಿಕರು ರಜೆ ಮಾಡುವ ಸಂದರ್ಭದಲ್ಲಿ ಅಥವಾ ಕಡಿಮೆ ಯೂನಿಟ್ ಬಳಸದೇ ಇದ್ದಾಗಆ ದಿನ ಯೂನಿಟ್‌ಗೆ ಮಾತ್ರ ದರ ನಿಗದಿ ಮಾಡಬೇಕು. ಉಳಿಕೆ ಯೂನಿಟ್ ಅನ್ನು ಮುಂದಿನ ದಿನಗಳಿಗೆ ಹೊಂದಾಣಿಕೆ ಮಾಡುವಂತ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಸಲಹೆ ನೀಡಿದರು.

ತಾತ್ಕಾಲಿಕ ವಿದ್ಯುತ್‌ ಸಂಪರ್ಕವನ್ನು 28 ದಿನಗಳಿಗೊಮ್ಮೆ ರಿನಿವಲ್ ಮಾಡಿಸುವಂತಹ ವ್ಯವಸ್ಥೆ ಬದಲಾಗಬೇಕು. ಬಿಲ್ ಪಾವತಿ ನಂತರ ನೂರಾರು ಸಂಖ್ಯೆಗಳನ್ನು ಟೈಪ್‌ ಮಾಡಿ ರೀಜಾರ್ಚ್‌ ಮಾಡಿಕೊಳ್ಳುವಂತಹ ವ್ಯವಸ್ಥೆ ಇದ್ದು ಇದನ್ನು ಸರಳಗೊಳಿಸಬೇಕು. ಪ್ರೀಪೇಡ್‌ ವ್ಯವಸ್ಥೆಯಲ್ಲಿ ಟಿಪಿ ಸಂಪರ್ಕ ಪಡೆಯುತ್ತಿರುವುದರಿಂದ ಕರೆನ್ಸಿ ಖಾಲಿಯಾದ ನಂತರ ಗ್ರಾಹಕರಿಗೆ ಎಸ್‌ಎಂಎಸ್‌ ಬರುವ ವ್ಯವಸ್ಥೆ ಆಗಬೇಕು. ಮತ್ತೆ ಗ್ರಾಹಕರು ಹಣ ತುಂಬಿದ ತಕ್ಷಣ ತಾನಾಗಿಯೇ ರೀಚಾರ್ಜ್‌ ಆಗುವ ವ್ಯವಸ್ಥೆ ಜಾರಿಗೆ ಸರಳೀಕರಣಗೊಳಿಸಬೇಕು ಎಂದು ಕೋರಿದರು.

ವಿದ್ಯುತ್‌ ಕಳವು ಪ್ರಕರಣಗಳಿಗೆ ಕೇವಲ ದಂಡ ಹಾಕಿದರೆ ಸಾಕು, ಅದರ ಬದಲು ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವ ವ್ಯವಸ್ಥೆ ಕೊನೆಯಾಗಬೇಕು. ವಿದ್ಯುತ್‌ ಸಮಸ್ಯೆ ಕಾಡಿದ ತಕ್ಷಣ ಅಥವಾ ಲೈನ್‌ನಲ್ಲಿ ತೊಂದರೆ ಉಂಟಾಗದ ಕೂಡಲೇ ಗ್ರಾಹಕರು ದೂರು ನೀಡಿದರೆ ಕೂಡಲೇ ಸ್ಪಂದಿಸಿ ತುರ್ತು ದುರಸ್ತಿ ಕೆಲಸ ಮಾಡಲು ಸಿಬ್ಬಂದಿಗಳಿಗೆ ಸೂಚನೆ ನೀಡಬೇಕು. ಕೆಳ ಹಂತದಲ್ಲಾಗುವ ಸಣ್ಣಪುಟ್ಟ ಕೆಲಸ ಕಾರ್ಯಗಳಿಗೆ ಮುಖ್ಯ ಇಂಜಿನಿಯರ್‌ ತನಕ ದೂರುಗಳು ಹೋಗುತ್ತಿದ್ದು, ಇದನ್ನು ಸರಿಪಡಿಸಿಕೊಳ್ಳಬೇಕು ಎಂದರು. 10-12 ಚದರದಷ್ಟು ಮನೆ ನಿರ್ಮಾಣ ಮಾಡಿಕೊಳ್ಳುವಂತಹ ಸಾಮಾನ್ಯ ವರ್ಗದವರಿಗೆ ಟಿಪಿ ಮೊತ್ತದಲ್ಲಿ ರಿಯಾಯತಿ ನೀಡಬೇಕು. ವಾಣಿಜ್ಯ ಮಳಿಗೆಗಳಿಗೆ ಅಥವಾ ಬಹು ಮಹಡಿ ಕಟ್ಟಡಗಳ ಮನೆಗಳ ನಿರ್ಮಾಣಕ್ಕೆ ಹಾಲಿ ಇರುವ ದರಗಳನ್ನು ನಿಗದಿ ಮಾಡಿ ನೆಲ ಮತ್ತು ಮೊದಲ ಮಹಡಿ ಮನೆಗಳ ನಿರ್ಮಾಣ ಕಾರ್ಯಕ್ಕೆ ರಿಯಾಯತಿ ಘೋಷಣೆ ಮಾಡಬೇಕೆಂದರು.

Advertisement

ಬಿತ್ತನೆ ಮತ್ತು ಮುಂಗಾರು ಹಂಗಾಮು ಆರಂಭವಾಗುತ್ತಿದ್ದು ವಿದ್ಯುತ್‌ ಅವಘಡಗಳು ಹೆಚ್ಚುತ್ತಿವೆ. ಇದಕ್ಕೆ ಅವಕಾಶ ಕಲ್ಪಿಸದಂತೆ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಅಕ್ರಮ-ಸಕ್ರಮದಲ್ಲಿ ಹಣ ಕಟ್ಟಿ ನೋಂದಣಿ ಮಾಡಿರುವ ರೈತರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಎಂ.ಎಸ್‌. ಪ್ರಭಾಕರ್‌, ಸಹಾಯಕ ಇಂಜಿನಿಯರ್‌ ಗಳಾದ ಅನಿಲ್ಕುಮಾರ್‌, ಸುನೀಲ್ಕುಮಾರ್‌, ಸೌಮ್ಯ ಮತ್ತಿತರರು ಇದ್ದರು.

ಗ್ರಾಹಕ ಸ್ನೇಹಿಯಾಗಿ ಕೆಲಸ ಮಾಡಿ
ಬೆಸ್ಕಾಂ ಕಂಪನಿ ಗ್ರಾಹಕರಿಂದಲೇ ನಡೆಯುತ್ತಿದೆ. ಹಾಗಾಗಿ ಗ್ರಾಹಕರನ್ನು ಸೌಜನ್ಯದಿಂದ ನಡೆಸಿಕೊಳ್ಳಬೇಕು. ಬೆಸ್ಕಾಂ ಸಿಬ್ಬಂದಿಗಳು ಬೇಕಾಬಿಟ್ಟಿಯಾಗಿ ವರ್ತಿಸುವುದು, ಗ್ರಾಹಕರೊಂದಿಗೆ ಅನುಚಿತವಾಗಿ ನಡೆದುಕೊಳ್ಳುವುದು, ದುರಸ್ತಿ ಮಾಡಿದ ತಕ್ಷಣ ಕೆಲವರು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಬೇಕೆಂದು ಗ್ರಾಹಕರು ಅಧಿಕಾರಿಗಳಲ್ಲಿ ಮನವಿ ಮಾಡಿದರು. ಎಲೆಕ್ಟ್ರಾನಿಕ್‌ ಮೀಟರ್‌ ಅಳವಡಿಕೆ ಮಾಡಿರುವುದರಿಂದ ವಿದ್ಯುತ್‌ ಬಿಲ್ನಲ್ಲಿ ಸಾಕಷ್ಟು ಲೋಪ ದೋಷಗಳಾಗುತ್ತಿವೆ. ಅತಿ ಹೆಚ್ಚಿನ ಬಿಲ್ ಬರುವುದು, ವಿದ್ಯುತ್‌ ಬಳಕೆ ಮಾಡದಿದ್ದರೂ ಮೀಟರ್‌ ಓಡಿ ಹೆಚ್ಚಿನ ಬಿಲ್ ಬರುತ್ತಿದೆ.ಇಂತಹ ಲೋಪ ದೋಷಗಳನ್ನು ಕಂಪನಿ ನಿವಾರಿಸಿ ಗ್ರಾಹಕ ಸ್ನೇಹಿಯಾಗಿ ಕೆಲಸ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next