Advertisement

ಕೋವಿಡ್ ಹರಡದಂತೆ ಜಾಗ್ರತೆ ವಹಿಸಿ

04:04 PM Jul 03, 2020 | Naveen |

ಚಿತ್ರದುರ್ಗ: ಕೋವಿಡ್‌-19 ಸಾಂಕ್ರಾಮಿಕ ರೋಗ ವ್ಯಾಪಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಮುದಾಯಕ್ಕೆ ಹರಡುವ ಸಾಧ್ಯತೆ ಇದೆ. ಈ ಬಗ್ಗೆ ಜನತೆ ಮುನ್ನೆಚ್ಚರಿಕೆ ವಹಿಸಿ ನಗರಗಳಿಗೆ ಹೋಗದೆ ಮನೆಯಲ್ಲೇ ಇರಬೇಕು ಎಂದು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್‌ ಹೇಳಿದರು.

Advertisement

ಚಿತ್ರದುರ್ಗ ತಾಲೂಕು ಹಿರೇಗುಂಟನೂರು ಜಿಪಂ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸಮಾಜಕಲ್ಯಾಣ ಇಲಾಖೆಯ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಮಂಜೂರಾದ ರೂ.1.5 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಳಲಿ ಗ್ರಾಮದಲ್ಲಿ ಬಹುತೇಕ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯವಿದೆ. ಈ ಗ್ರಾಮದ ಮೂಲ  ಭೂತ ಸೌಕರ್ಯಕ್ಕೆ ಒತ್ತು ನೀಡಿ, ಇನ್ನೂ 4 ವರ್ಷಗಳ ಅವಧಿಯಲ್ಲಿ ಸಂಸದ ಎ. ನಾರಾಯಣಸ್ವಾಮಿ ಮಾದರಿ ಗ್ರಾಮವನ್ನಾಗಿ ಮಾಡಲಿದ್ದಾರೆ ಎಂದು ಭರವಸೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಉಚಿತ ಗ್ಯಾಸ್‌, ಜನ್‌ಧನ್‌ ಖಾತೆಗೆ ಹಣ ವರ್ಗಾವಣೆ, ಅನ್ನಭಾಗ್ಯ ಯೋಜನೆ, ಅಟಲ್‌ ಪಿಂಚಣಿ ಯೋಜನೆ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದು ಜನಸಾಮಾನ್ಯರಿಗೆ ನೆರವಾಗಿದ್ದಾರೆ. ಕೋವಿಡ್‌-19 ಸಂಕಷ್ಟದ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ರೈತರಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇದಕ್ಕಾಗಿ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿ ಬಡವರು, ರೈತರಿಗೆ ನೆರವಾಗಿದೆ. ಇದರ ಜೊತೆಗೆ ನವೆಂಬರ್‌ ತನಕ ಉಚಿತ ಅಕ್ಕಿ, ಬೆಳೆ, ಗೋಧಿ ಸೇರಿದಂತೆ ಅಗತ್ಯ ಪಡಿತರ ವಿತರಣೆಗೆ ಕ್ರಮ ಕೈಗೊಂಡಿದ್ದಾರೆ. ಪ್ರಧಾನಿ ಮೋದಿಯವರು 2025ರೊಳಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಕೆಲಸ ಮಾಡುತ್ತಾರೆ ಎಂದರು.

ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ಕೋವಿಡ್‌-19 ಸಾಂಕ್ರಾಮಿಕ ರೋಗಕ್ಕೆ ಭಯ ಪಡದೆ ಎಚ್ಚರದಿಂದರಬೇಕು. ಸಮುದಾಯದ ಜಾಗೃತಿ ಜೊತೆಗೆ ಜಿಲ್ಲೆಯ ಅಭಿವೃದ್ಧಿಯೂ ನಡೆಯಬೇಕು. ಕೋವಿಡ್‌-19 ನಿಯಂತ್ರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತಮ ನಿರ್ಧಾರ ಕೈಗೊಂಡು ಕೋವಿಡ್‌-19 ನಿಯಂತ್ರಣದಲ್ಲಿ ಸಬಲರಾಗಿದ್ದೇವೆ. ಕೋವಿಡ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿ ಬಡವರಿಗೆ ನೆರವಾಗಿವೆ ಎಂದರು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕುಂಠಿತಗೊಂಡಿರುವ ಅಭಿವೃದ್ಧಿ ಯೋಜನೆಗಳಿಗೆ ತ್ವರಿತಗೊಳಿಸಿ ಕಾರ್ಯಗತ ಮಾಡುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಜಿಪಂ ಸದಸ್ಯೆ ಜಯಪ್ರತಿಭಾ, ತಾಪಂ ಸದಸ್ಯ ಸುರೇಶ್‌, ಮುಖಂಡರಾದ ಮುರುಳಿ, ನವೀನ್‌ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಮಳಲಿ ಗ್ರಾಮದಲ್ಲಿ ಹೈಮಾಸ್ಟ್‌ ದೀಪಕ್ಕೆ ಭೂಮಿಪೂಜೆ, ಎನ್‌.ಬಳ್ಳೆಕಟ್ಟೆ-ನೆಲ್ಲಿಕಟ್ಟೆ ಗ್ರಾಮದಲ್ಲಿ ಕುಡಿಯುವ ನೀರಿನ ಕಾಮಗಾರಿ ಉದ್ಘಾಟನೆ, ನೂತನ ಶಾಲಾ ಕೊಠಡಿ ಉದ್ಘಾಟನೆ, ಶುದ್ಧ ಕುಡಿಯುವ ನೀರಿನ ಘಟಕದ ಭೂಮಿಪೂಜೆ ನೆರವೇರಿಸಲಾಯಿತು.

Advertisement

ಬೆಟ್ಟದನಾಗೇನಹಳ್ಳಿ ಹಾಗೂ ತುರೆಬೈಲು, ವಿ. ಪಾಳ್ಯ, ಹಿರೇಗುಂಟನೂರು ಗ್ರಾಮಗಳಲ್ಲಿ ಹೈಮಾಸ್ಟ್‌ ದೀಪ ಅಳವಡಿಕೆಯ ಭೂಮಿಪೂಜೆ ಹಾಗೂ ಅಂಬೇಡ್ಕರ್‌ ಭವನ ಸೇರಿದಂತೆ ಒಟ್ಟು 1.5 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್‌, ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ, ಜಿಪಂ ಸದಸ್ಯೆ ಜಯಪ್ರತಿಭಾ ನವೀನ್‌ ಭೂಮಿಪೂಜೆ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next