Advertisement

ಮಕ್ಕಳ ಮೇಲೆ ಪೋಷಕರು ಒತ್ತಡ ಹೇರದಿರಿ: ನಂದಗಾವಿ

03:13 PM Jul 14, 2019 | Naveen |

ಚಿತ್ರದುರ್ಗ: ಸಾಧಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸುವುದು ಅಪರೂಪ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಲಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಬಿ. ನಂದಗಾವಿ ಹೇಳಿದರು.

Advertisement

ನಗರದ ಎಸ್‌ಆರ್‌ಎಸ್‌ ಪಿಯು ಕಾಲೇಜು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪೋಷಕರು ಮಕ್ಕಳಿಗೆ ಬರೀ ಇಂಜಿನಿಯರ್‌, ಮೆಡಿಕಲ್ ಆಯ್ಕೆಗಳನ್ನು ಮಾತ್ರ ನೀಡದೆ, ಮಕ್ಕಳು ಇಷ್ಟ ಪಡುವೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದರು.

ಬೆಂಗಳೂರಿನ ಇನ್ಫೊಧೀಸಿಸ್‌ ಸಂಸ್ಥೆಯ ಉಪಾಧ್ಯಕ್ಷೆ ಅರುಣಾ ಸಿ. ನ್ಯೂಟನ್‌ ಮಾತನಾಡಿ, ಭಾರತದಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ತೀವ್ರ ಸ್ಪರ್ಧೆ ಉಂಟಾಗಿದೆ. ಮಕ್ಕಳು ಸ್ಪರ್ಧೆ ಎದುರಿಸಿ ಸಾಧನೆ ಮಾಡಬೇಕು. ಅದಕ್ಕಾಗಿ ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಬೇಕು. ವಿಶ್ವದಲ್ಲಿ ಬೇರೆ ದೇಶಗಳಿಂತಲೂ ಹೆಚ್ಚು ಯುವ ಜನತೆಯನ್ನು ಭಾರತ ಹೊಂದಿದೆ. ಅವರಿಂದ ದೇಶದ ಪ್ರಗತಿ ಹೆಚ್ಚಾಗಬೇಕಿದೆ. ಆಗ ಮಾತ್ರ ಹೆಚ್ಚಾದ ಜನಸಂಖ್ಯೆ ದೇಶಕ್ಕೆ ಮಾರಕವಾಗದೆ ಪೂರಕವಾಗಬಲ್ಲದು ಎಂದು ಅಭಿಪ್ರಾಯಪಟ್ಟರು.

ಇನ್ಫೋಸಿಸ್‌ ಇಂಜಿನಿಯರ್‌ ಬಿ. ಮಹೇಶ್‌ಕುಮಾರ್‌ ಮಾತನಾಡಿ, ಹಣಕ್ಕಿಂತ ಗೌರವಕ್ಕೆ ಹೆಚ್ಚು ಮಹತ್ವ ನೀಡಿದ್ದರಿಂದ ನಾರಾಯಣಮೂರ್ತಿ ಅವರಿಗೆ ಇಷ್ಟು ಸಾಧನೆ ಮಾಡಲು ಸಾಧ್ಯವಾಯಿತು. ಎಸ್‌ಆರ್‌ ಎಸ್‌ ಕಾಲೇಜು ನೈತಿಕ ಮೌಲ್ಯ ಪಾಲಿಸುತ್ತಿದ್ದು, ಇಂತಹ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳ ಸಾಧನೆಯಿಂದ ಪೋಷಕರು ಖುಷಿ ಪಡಬೇಕು ಎಂದರು.

ಕಾಲೇಜು ಪ್ರಾಂಶುಪಾಲ ಈ. ಗಂಗಾಧರ ಮಾತನಾಡಿ, ಪದವಿಪೂರ್ವ ಶಿಕ್ಷಣ ಎನ್ನುವುದು ಎರಡು ವರ್ಷಗಳ ಅಧ್ಯಯನ ಎನ್ನುವುದಕ್ಕಿಂತ ಹದಿನೇಳು ತಿಂಗಳ ಅವಯ ಅಭ್ಯಾಸ. ಕಡಿಮೆ ಸಮಯದಲ್ಲಿ ನಿಮ್ಮ ಸ್ಪರ್ಧಾತ್ಮಕ ಜೀವನವನ್ನ ಹೇಗೆ ನೆಲೆಗೊಳಿಸಿಕೊಳ್ಳುವಿರಿ ಎಂಬ ಪ್ರಶ್ನೆ ನಿಮ್ಮ ಮುಂದಿದೆ. ಹಾಗಾಗಿ ಈ ಪ್ರಶ್ನೆಗೆ ನೀವೇ ಉತ್ತರ ಕಂಡುಕೊಳ್ಳಬೇಕಾಗಿದೆ ಎಂದು ತಿಳಿಸಿದರು.

Advertisement

ಸಂಸ್ಥೆಯ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಧಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ಪ್ರತಿ ವರ್ಷ ಆಯೋಜಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇದರಿಂದ ಸ್ಫೂರ್ತಿ ದೊರೆಯಲೆಂಬ ಮಹದಾಸೆ. ಇನ್ಫೊಧೀಸಿಸ್‌ನಂತಹ ದೊಡ್ಡ ಸಂಸ್ಥೆಗಳಿಂದ ಅತಿಥಿಗಳನ್ನು ಆಹ್ವಾನಿಸಿ ಅವರಿಂದ ಸ್ಫೂರ್ತಿದಾಯಕ ಮಾತುಗಳನ್ನಾಡಿಸಿದಾಗ ನಮ್ಮ ವಿದ್ಯಾರ್ಥಿಗಳು ಸಹ ಅವರ ಮಟ್ಟಕ್ಕೆ ಬೆಳೆಯಬಹುದು ಎಂಬುದು ನನ್ನ ಆಸೆ ಎಂದರು.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಆಳ್ವಾಸ್‌ ಪಿಯು ಕಾಲೇಜಿನ ವಿದ್ಯಾರ್ಥಿನಿ ಓಲ್ವಿಟಾ ಡಿಸೋಜಾ, ರಾಜ್ಯಕ್ಕೆ ಆರು ಮತ್ತು ಹತ್ತನೇ ರ್‍ಯಾಂಕ್‌ ಪಡೆದ ಕಾಲೇಜಿನ ವಿದ್ಯಾರ್ಥಿಗಳಾದ ತುಳಸಿ ಟಿ., ನೀತಾಪ್ರಸಾದ್‌, ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ ರ್‍ಯಾಂಕ್‌ ಪಡೆದ ಪ್ರಗ್ಯಾ ಮಿತ್ರ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಚಿತ್ರದುರ್ಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ರಮ್ಯಾ ಎಚ್.ಎನ್‌., ಅವಿನಾಶ್‌ಕುಮಾರ್‌ ವಿ.,

ಸಿದ್ಧಾರ್ಥ ನಾಯಕ್‌, ಜೆಇಇ ನಾಟಾ ಪರೀಕ್ಷೆಯಲ್ಲಿ ಆಲ್ ಇಂಡಿಯಾ 18ನೇ ರ್‍ಯಾಂಕ್‌ ಗಳಿಸಿದ ಗಗನ್‌ದೀಪ್‌ ಎನ್‌.ಈ. ಹಾಗೂ ವಿವಿಧ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ಒಟ್ಟು 25 ಸಾಧಕರನ್ನು ಸನ್ಮಾನಿಸಲಾಯಿತು.

ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ, ಉಪಾಧ್ಯಕ್ಷ ಬಿ.ಎಲ್. ಅಮೋಘ್, ಆಡಳಿತಾಧಿಕಾರಿ ಡಾ| ಟಿ.ಎಸ್‌. ರವಿ, ಸಂಚಾಲಕ ಎಂ.ವಿ. ನಟರಾಜ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next