Advertisement

ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಸಭೆ: ವಿನೋತ್‌ ಪ್ರಿಯಾ

11:49 AM Jul 25, 2019 | Naveen |

ಚಿತ್ರದುರ್ಗ: ಜಿಲ್ಲೆಯ ರೈತರ ಸಮಸ್ಯೆಗಳನ್ನು ಆಲಿಸಿ ಸಮಸ್ಯೆ ಬಗೆಹರಿಸಲು ಹಾಗೂ ಸೂಕ್ತ ಕ್ರಮ ಕೈಗೊಳ್ಳಲು ತಿಂಗಳಿಗೊಮ್ಮೆ ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಸಭೆಯನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌. ವಿನೋತ್‌ ಪ್ರಿಯಾ ಹೇಳಿದರು.

Advertisement

ನಗರದ ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕೃಷಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಇಲಾಖೆಯಿಂದ ರೈತರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ರೈತರು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ವಿಮಾ ಕಂಪನಿಗಳು 7 ವರ್ಷದ ಬೆಳೆಗಳ ಸರಾಸರಿ ನಷ್ಟಕ್ಕೆ ಅನುಗುಣವಾಗಿ ಬೆಳೆ ವಿಮೆ ನೀಡುವ ಪದ್ಧತಿಯನ್ನು ಅನುಸರಿಸುತ್ತವೆ. ಆಯಾ ಗ್ರಾಮದ ಪ್ರಮುಖ ಬೆಳೆ ನಷ್ಟವಾಗಿದ್ದರೆ ಮಾತ್ರ ಆ ಗ್ರಾಮದ ಎಲ್ಲಾ ರೈತರಿಗೂ ಬೆಳೆ ವಿಮೆ ದೊರೆಯುತ್ತದೆ. ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವುದನ್ನು ಮನಗಂಡ ಕೇಂದ್ರ ಸರ್ಕಾರ ಜಲಶಕ್ತಿ ಹಾಗೂ ರಾಜ್ಯಸರ್ಕಾರ ಜಲಾಮೃತ ಯೋಜನೆಗಳನ್ನು ಜಾರಿಗೊಳಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ಪ್ರಯತ್ನ ಮಾಡುತ್ತಿವೆ. ಜಿಲ್ಲಾ ಮಟ್ಟದಲ್ಲಿ ಬಗೆಹರಿಸಬಹುದಾದ ರೈತರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವುದಾಗಿ ಭರವಸೆ ನೀಡಿದರು.

ಉಪವಿಭಾಗಾಧಿಕಾರಿ ವಿಜಯ್‌ಕುಮಾರ್‌ ಮಾತನಾಡಿ, ರೈತರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಕೂಡಲೇ ಪರಿಹಾರ ನೀಡುವ ಸಲುವಾಗಿ ಇಂತಹ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆಯೋಜಿಸಲಾಗಿದೆ. ಜಿಲ್ಲೆ ಕಳೆದ 10 ವರ್ಷಗಳಲ್ಲಿ 8 ವರ್ಷ ಬರಗಾಲಕ್ಕೆ ತುತ್ತಾಗಿದೆ. ಅಂತರ್ಜಲ ಮಟ್ಟ ಕುಸಿತ, ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿರುವುದಕ್ಕೆ ಮಾರ್ಗೋಪಾಯವಾಗಿ ಕಡಿಮೆ ವೆಚ್ಚ, ಹೆಚ್ಚು ಆದಾಯ ಪಡೆಯಬಹುದಾದ ಬೆಳೆಗಳತ್ತ ರೈತರು ಗಮನ ನೀಡಬೇಕು. ಇದಕ್ಕೆ ಬೇಕಾದ ನೆರವು ನೀಡಲು ಕೃಷಿ ಇಲಾಖೆ ಸಿದ್ಧವಿದೆ. ರೈತರು ಇದಕ್ಕೆ ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪಿ. ಭೂತಯ್ಯ, ರೈತ ಮುಖಂಡ ಈಚಗಟ್ಟ ಸಿದ್ಧವೀರಪ್ಪ ಮಾತನಾಡಿ, ಬೆಳೆ ವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನವಾಗಿದೆ. ರೈತರ ಅನುಕೂಲಕ್ಕಾಗಿ ಅವಧಿ ವಿಸ್ತರಣೆ ಮಾಡಬೇಕು. ಜೊತೆಗೆ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡಬೇಕು. ಜಿಲ್ಲೆಯಲ್ಲಿನ ಕೆರೆಗಳ ಹೂಳೆತ್ತಿಸಿ ರೈತರ ಹೊಲಗಳಿಗೆ ಉಚಿತವಾಗಿ ಮಣ್ಣು ಹಾಕಿಸುವ ಕಾರ್ಯವಾಗಬೇಕು ಎಂದು ಒತ್ತಾಯಿಸಿದರು.

ಧರ್ಮಪುರ ಭಾಗದಲ್ಲಿ ಶೇಂಗಾ ಬೆಳೆಯಲಾಗುತ್ತಿದ್ದು, ಶೇ. 100 ರಷ್ಟು ಬೆಳೆ ಬಂದಿದೆ ಎಂದು ಸುಳ್ಳು ವರದಿ ನೀಡಲಾಗಿದೆ. ತಕ್ಷಣ ಪರಿಹಾರ ಬರುವಂತೆ ಮಾಡಬೇಕು. ಸಾಲ ಮನ್ನಾ ಆಗಿಲ್ಲದಿರುವುದನ್ನು ಗಮನಿಸಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸಾಲ ಮನ್ನಾ ಮೊತ್ತ ಜಮಾ ಆಗುವಂತೆ ಕ್ರಮ ಕೈಗೊಳ್ಳಬೇಕು. ಸೋಲಾರ್‌ನ ವ್ಯವಸ್ಥೆ ಇರುವ ಕಡೆ ಹೆಚ್ಚಿನ ನೀರು ಬಳಕೆಯಿಂದ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ. ಅಂತಹ ಕಡೆಗಳಲ್ಲಿ ಇತರೆ ರೈತರಿಗೆ ಸಮಸ್ಯೆಯಾಗುತ್ತಿದ್ದು, ಅದನ್ನು ನಿವಾರಿಸಬೇಕು ಎಂದರು.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ. ಅರುಣ್‌, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆನಂದ್‌, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ನಿಂಗೇಗೌಡ, ವಿಮಾ ಕಂಪನಿಯ ದಾವಣಗೆರೆ ವಿಭಾಗೀಯ ಯೋಜನಾಧಿಕಾರಿ ಟಿ. ನಾಗಲಿಂಗಾಚಾರಿ, ವಸಂತ್‌ಕುಮಾರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next