ಚಿತ್ರದುರ್ಗ: ಒಂದೆಡೆ ಮಳೆ ಬಂದು ತುಂಬಿದ ಕೆರೆಯ ಏರಿ ಒಡೆದು ನೀರು ಪೋಲಾದರೆ, ಮತ್ತೊಂದೆಡೆ ತುಂಬಿರುವ ಕೆರೆ ಕಸದ ತೊಟ್ಟಿಯಾಗುತ್ತದೆ! ಜಲಮೂಲಗಳ ಬಗ್ಗೆ ಇರುವ ಅಸಡ್ಡೆಗೆ ಇವು ನಿದರ್ಶನ. ಜಲಮೂಲಗಳ ಸಂರಕ್ಷಣೆಯಲ್ಲಿ ಜಿಲ್ಲೆಯ ಜನಪ್ರತಿನಿ ಗಳು ಹಾಗೂ ಅಧಿಕಾರಿಗಳಿಗೆ ಎಷ್ಟು ಬದ್ಧತೆ ಇದೆ ಎನ್ನುವುದಕ್ಕೆ ಇತ್ತೀಚೆಗೆ ಭಾರೀ ಮಳೆಯಿಂದ ತುಂಬಿ ಕೆರೆಯ ಏರಿ ಹೊಡೆದು ಅಪಾರ ಪ್ರಮಾಣದ ನೀರು ಪೋಲಾದ ಹೊಸದುರ್ಗ ತಾಲೂಕು ನೀರಗುಂದ ಕೆರೆ ಹಾಗೂ ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಿರುವ ಮಲ್ಲಾಪುರ ಕೆರೆ ಉತ್ತಮ ನಿದರ್ಶನ.
ಮುಂದಿನ ಕನಿಷ್ಠ 5 ವರ್ಷಕ್ಕೆ ಬೇಕಾಗುವಷ್ಟು ನೀರು ನೀರಗುಂದ ಕೆರೆಯಿಂದ ಹರಿದು ಹೋಯಿತು. ಇನ್ನೂ ಈ ಕೆರೆ ತುಂಬಲು ಎಷ್ಟು ವರ್ಷ ಬೇಕೋ ದೇವರೇ ಬಲ್ಲ. ಇದು ಒಂದು ಕಥೆಯಾದರೆ, ಚಿತ್ರದುರ್ಗ ಮಲ್ಲಾಪುರ ಕೆರೆಯದ್ದು ಮತ್ತೂಂದು ವ್ಯಥೆ. ರಾಷ್ಟ್ರೀಯ ಹೆದ್ದಾರಿ 13 ರ ಮೂಲಕ ಚಿತ್ರದುರ್ಗಕ್ಕೆ ಬರುವ ಹೊರಗಿನವರು ಈ ಕೆರೆ ಬಳಿ ಬಂದ ತಕ್ಷಣ ಮೂಗು ಮುಚ್ಚಿಕೊಂಡು ಚಿತ್ರದುರ್ಗವನ್ನು ಪ್ರವೇಶಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಸ್ಸಿನಲ್ಲಿ ಹಾದು ಹೋಗುವವರ ಸ್ಥಿತಿಯೇ ಹೀಗಾದರೆ ಕೆರೆಯ ಸುತ್ತಮುತ್ತ ಇರುವ ಮಲ್ಲಾಪುರ, ಪಿಳ್ಳೆಕೇರನಹಳ್ಳಿ ಹಾಗೂ ಅಕ್ಕಪಕ್ಕದ ಶಾಲಾ-ಕಾಲೇಜುಗಳ ಮಕ್ಕಳ ಕಥೆ ಏನು ಎನ್ನುವುದನ್ನು ಯೋಚಿಸಬೇಕಾಗಿದೆ. ಹಾಗಂತ ಮಲ್ಲಾಪುರ ಕೆರೆ ಕಸದ ತೊಟ್ಟಿಯಾಗುತ್ತಿದೆ, ನೀರು ಕಲುಷಿತಗೊಂಡಿದೆ, ಕೆರೆಯ ನೀರು ಮಲಿನವಾಗುವುದರಿಂದ ಈ ಭಾಗದ ಅಂತರ್ಜಲವೂ ಕಲುಷಿತಗೊಳ್ಳುತ್ತದೆ ಎಂದು ಸುದ್ದಿಯಾಗುತ್ತಿರುವುದು ಇದೇ ಮೊದಲೇನಲ್ಲ. ಕೊನೆಯೂ ಆಗಲಾರದೇನೋ. ಸುದ್ದಿಯಾದಾಗೆಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳು ಕೆರೆ ಬಳಿ ಹೋಗುವುದು, ನೋಡುವುದು, ಸರ್ಕಾರದ ಯಾವುದೋ ಯೋಜನೆಯಲ್ಲಿ ಅಭಿವೃದ್ಧಿ ಮಾಡುತ್ತೇವೆ, ದತ್ತು ತೆಗೆದುಕೊಳ್ಳುತ್ತೇವೆ ಎಂದು ಕಟ್ಟಿದ ಕಥೆಗಳು ಮುಗಿದು ಹೋಗಿವೆ. ಕೆರೆ ಮಾತ್ರ ಹಾಗೆಯೇ ಇದೆ.
ನಗರಕ್ಕೆ ಹೊಂದಿಕೊಂಡಿರುವ ಅತ್ಯಂತ ಸುಂದರವಾದ ಈ ಕೆರೆಯಲ್ಲಿ ಯಾವಾಗಲೂ ನೀರಿರುತ್ತೆ. ನಗರದಿಂದ ಬರುವ ಚರಂಡಿ ನೀರನ್ನು ಇದಕ್ಕೆ ನೇರವಾಗಿ ಬಿಡುವುದನ್ನು ತಪ್ಪಿಸಬೇಕು. ಕಸ ಹಾಕುವುದನ್ನು ನಿಲ್ಲಿಸಬೇಕು. ಪ್ಲಾಸ್ಟಿಕ್ ಹಾಕದಂತೆ ನಿರ್ಬಂಧಿ ಸಬೇಕು. ಆದರೆ ಇದ್ಯಾವುದು ಆಗುತ್ತಿಲ್ಲ. ಇದರ ಪರಿಣಾಮ ಈ ಕೆರೆ ಅಕ್ಷರಶಃ ಕಸದ ತೊಟ್ಟಿಯಾಗಿ ನಾರುತ್ತಿದೆ. ಈ ಕೆರೆಯನ್ನು ಸುಂದರ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡುವುದು, ಬೋಟ್ ಬಿಡುವುದು, ಐಲ್ಯಾಂಡ್ ಮಾಡುವುದು ಸೇರಿದಂತೆ ಅನೇಕ ರೀತಿಯಲ್ಲಿ ಅಭಿವೃದ್ಧಿ ಮಾಡಬಹುದು ಎಂದು ಮೂರ್‍ನಾಲ್ಕು ವರ್ಷಗಳ ಹಿಂದೆ ಕೆರೆಗೆ ಭೇಟಿ ನೀಡಿದ್ದ ಅಧಿಕಾರಿಗಳು ಚರ್ಚೆ ನಡೆಸಿದ್ದರು. ಆದರೆ ಚರ್ಚೆ ಕಡತಗಳಲ್ಲೇ ಉಳಿದಿರುವುದು ವಿಪರ್ಯಾಸ.
ಸದ್ಯ ಕೆರೆಯಲ್ಲಿ ಕಣ್ಣು ಹಾಯಿಸಿದಷ್ಟು ಪ್ಲಾಸ್ಟಿಕ್ ಬಾಟಲಿ, ಕವರ್, ಡಬ್ಬಿ ಕಸದ ರಾಶಿಯೇ ಕಣ್ಣಿಗೆ ರಾಚುತ್ತದೆ. ನಗರದ ಒಳಚರಂಡಿಗಳಿಂದ ಹರಿಯುವ ಮಲ, ಮೂತ್ರ ಎಲ್ಲವೂ ಸೇರಿ ಇಡೀ ಕೆರೆ ಗಟಾರದಂತಾಗಿದೆ. ರಾತ್ರಿ ಹೊತ್ತು ಮದ್ಯದ ಬಾಟಲಿಗಳನ್ನು ಎಸೆಯುತ್ತಾರೆ. ಮಲ್ಲಾಪುರ ಕೆರೆಯ ಕಲುಷಿತ ನೀರು ಗೋನೂರು ಕೆರೆ, ದ್ಯಾಮವ್ವನಹಳ್ಳಿ ಕೆರೆ, ಕಲ್ಲಹಳ್ಳಿ, ಮಧುರೆಕೆರೆ, ರಾಣಿಕೆರೆ
ಮೂಲಕ ಹರಿದು ಹೋಗುತ್ತಿದೆ. ಈ ಕೆರೆಗಳನ್ನು ಅವಲಂಬಿಸಿರುವ ಕೊಳವೆಬಾವಿಗಳ ಅಂತರ್ಜಲ ಕೂಡ ಹಾಳಾಗುತ್ತಿದೆ.
ನೀರು ಕಲುಷಿತಗೊಳ್ಳುತ್ತಿರುವುದರಿಂದ ಜನರಿಗೆ ಮಾತ್ರ ತೊಂದರೆಯಾಗುತ್ತಿಲ್ಲ. ನೀರಿನಲ್ಲಿರುವ ಜಲಚರಗಳು ಸಂಕಷ್ಟಕ್ಕೆ ಸಿಲುಕಿವೆ. ಕಸದ ರಾಶಿಯಿಂದ ಲವಣಾಂಶಗಳು ಹೆಚ್ಚಾಗಿ ನೀರು ಗಟ್ಟಿಯಾಗಿ ಗಾಳಿಯಾಡದಿದ್ದರೆ ಮೀನುಗಳು ಸಾಯುವ ಸಾಧ್ಯತೆ ಇದೆ.
ಪಿಳ್ಳೇಕೆರೆನಹಳ್ಳಿ ಶಾಲೆಗೆ ಸೊಳ್ಳೆ ಕಾಟ: ಇಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಗೆ ಕೆರೆ ಹೊಂದಿಕೊಂಡಿದ್ದು, ಗಾಳಿ ಬಂದಾಗ ವಿಪರೀತ ವಾಸನೆ ಬರುತ್ತಿದೆ. ಶಿಕ್ಷಕರು, ಮಕ್ಕಳು ಅನಿವಾರ್ಯವಾಗಿ ಈ ವಾಸನೆ ಸಹಿಸಿಕೊಂಡೇ ಪಾಠ ಮಾಡುತ್ತಿದ್ದಾರೆ. ಜತೆಗೆ ವಿಪರೀತ ಸೊಳ್ಳೆಗಳ ಕಾಟವಿದ್ದು, ಶಾಲೆಯಲ್ಲಿ ಸೊಳ್ಳೆ ಬತ್ತಿ ಬಳಸಲಾಗುತ್ತಿದೆ. ಈ ಕಾರಣಕ್ಕೆ ಶಾಲೆಯ ಕಾಂಪೌಂಡ್ ಎತ್ತರಿಸಬೇಕು ಎಂದು ಒತ್ತಾಯವೂ ಕೇಳಿ ಬಂದಿದೆ.