ಹರಿಯಬ್ಬೆ ಹೆಂಜಾರಪ್ಪ
ಚಿತ್ರದುರ್ಗ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗುತ್ತಿದ್ದಂತೆ ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ನಿಶ್ಚಿತವಾಗಿದ್ದು, ಜಿಲ್ಲೆಯ ಹಲವು ಶಾಸಕರು ಸಚಿವ ಸ್ಥಾನದ ರೇಸ್‌ನಲ್ಲಿದ್ದಾರೆ.
ಜಿಲ್ಲೆಯ ಅತ್ಯಂತ ಹಿರಿಯ ರಾಜಕಾರಣಿ, ಚಿತ್ರದುರ್ಗ ಕ್ಷೇತ್ರದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ತಾವು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಪಕ್ಷದ ವರಿಷ್ಠರು ತಮಗೆ ಸಚಿವ ಸ್ಥಾನ ನೀಡಿಯೇ ನೀಡುತ್ತಾರೆ ಎಂದು ಬಹಿರಂಗವಾಗಿಯೇ ವಿಶ್ವಾಸ ವ್ಯಕ್ತಪಡಿಸಿದ್ದು ಗುಟ್ಟಾಗಿ ಉಳಿದಿಲ್ಲ.
ಜಿಲ್ಲೆಯಲ್ಲಿರುವ ಎರಡು ಲಕ್ಷಕ್ಕೂ ಅಧಿಕ ವಾಲ್ಮೀಕಿ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ವಾಲ್ಮೀಕಿ ಸಮುದಾಯಗಳ ಮತ ಸೆಳೆಯಲು ಬಿಜೆಪಿ ನಾಯಕರು ಬಿ. ಶ್ರೀರಾಮುಲು ಮುಂದಿನ ಉಪಮುಖ್ಯಮಂತ್ರಿ ಎಂದು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೇ ಬಿಂಬಿಸಿದ್ದರು. ಇದರಿಂದ ವಾಲ್ಮೀಕಿ ಸಮುದಾಯದ ಮತಗಳು ಬಿಜೆಪಿಯತ್ತ ವಾಲಿದ್ದವು. ಅಲ್ಲದೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಕಮಲ ಅರಳಿತ್ತು. ಅಲ್ಲದೆ ಬಿಜೆಪಿ ರಾಜ್ಯ ಉಪಾಧ್ಯಕ್ಷರೂ ಆಗಿರುವ ಶ್ರೀರಾಮುಲು ಇಡೀ ರಾಜ್ಯ ಸುತ್ತಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದರು. ಹಾಗಾಗಿ ಬಿಜೆಪಿ ವರಿಷ್ಠರು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಮಾತು ಉಳಿಸಿಕೊಳ್ಳಬಹುದು ಎಂಬ ಮಾತೂ ಕೇಳಿಬರುತ್ತಿದೆ.
ಇನ್ನು ಬಿಜೆಪಿಯ ನೂತನ ಸರ್ಕಾರದಲ್ಲಿ ಸಚಿವರಾಗಲು ಜಿಲ್ಲೆಯಲ್ಲಿ ಪೈಪೋಟಿಯಂತೂ ಇದ್ದು ಯಾರಿಗೆ ಅದೃಷ್ಟ ಒಲಿಯಬಹುದು ಎಂಬುದೇ ಕುತೂಹಲವಾಗಿದೆ.