ಚಿತ್ರದುರ್ಗ: ಖಾಸಗಿ ಶಾಲೆಗಳ ಅಬ್ಬರದಲ್ಲಿ ಸರ್ಕಾರಿ ಶಾಲೆಗಳು ಮೂಲೆಗುಂಪಾಗುತ್ತಿವೆ ಎಂಬ ಆಕ್ಷೇಪಣೆಯ ನಡುವೆಯೂ ಜಿಲ್ಲೆಯಲ್ಲಿ ಸರ್ಕಾರಿ ಪ್ರೌಢಶಾಲೆಯೊಂದು 50 ವಸಂತಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಚಿತ್ರದುರ್ಗ ತಾಲೂಕಿನ ಚಿಕ್ಕಗೊಂಡನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ಕಳೆದ ಜುಲೈ 15ಕ್ಕೆ ಬರೋಬ್ಬರಿ 50 ವರ್ಷ. 1969ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಹಾಗೂ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಎಸ್. ನಿಜಲಿಂಗಪ್ಪ ಅವರು ಶಾಲೆಗೆ ಅಡಿಗಲ್ಲು ಹಾಕಿದ್ದಾರೆ ಎನ್ನುತ್ತಾರೆ ಗ್ರಾಮದ ಹಿರಿಯರು.
1969ಕ್ಕಿಂತ ಮೊದಲು ಚಿಕ್ಕಗೊಂಡನಹಳ್ಳಿಯಲ್ಲಿ 7ನೇ ತರಗತಿ ಓದಿದವರು ಶಾಲೆ ಬಿಟ್ಟು ಮನೆಯಲ್ಲಿರಬೇಕಾಗಿತ್ತು ಅಥವಾ ವ್ಯವಸಾಯ ಮತ್ತಿತರೆ ಕೆಲಸ ಮಾಡಬೇಕಾಗಿತ್ತು. ಇದನ್ನು ಮನಗಂಡ ಗ್ರಾಮದ ಹಿರಿಯರಾದ ಆರ್.ಎಸ್. ಕೊಟ್ರಪ್ಪ ನೇತೃತ್ವದಲ್ಲಿ ಪ್ರೌಢಶಾಲೆ ಆರಂಭವಾಯಿತು. ನಂತರ ಈ ಊರಿನ ಮಕ್ಕಳ ಬದುಕಿನ ದಿಕ್ಕೇ ಬದಲಾಯಿತು. ಚಿಕ್ಕಗೊಂಡನಹಳ್ಳಿ ಪ್ರೌಢಶಾಲೆಯಲ್ಲಿ ಕಲಿತವರು ವೈದ್ಯ, ಶಿಕ್ಷಣ ಇಲಾಖೆ ಡಿಡಿಪಿಐ, ಬಿಇಒ, ಬಸವ ಕೇಂದ್ರದ ಅಧ್ಯಕ್ಷರು, ರಾಜಕಾರಣಿಗಳು, ಬ್ಯಾಂಕ್, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿದ್ದಾರೆ ಎನ್ನುತ್ತಾರೆ ಇಲ್ಲಿನ ಹಳೆ ವಿದ್ಯಾರ್ಥಿ ನಿವೃತ್ತ ಪ್ರಾಧ್ಯಾಪಕ ಪ್ರೊ| ಯರ್ರಿಸ್ವಾಮಿ.
ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ: ಶಾಲೆ ಪ್ರಾರಂಭವಾದ 50 ವರ್ಷಗಳಲ್ಲಿ ಬರೋಬ್ಬರಿ 4800 ವಿದ್ಯಾರ್ಥಿಗಳು 8ನೇ ತರಗತಿಗೆ ದಾಖಲಾಗಿದ್ದರೆ, ಇಲ್ಲಿಂದ 10ನೇ ತರಗತಿ ತೇರ್ಗಡೆ ಆಗಿ ಹೋದವರ ಸಂಖ್ಯೆ 4500 ಇದೆ. 35 ವರ್ಷಗಳ ಹಿಂದೆ ಪದವಿಪೂರ್ವ ಕಾಲೇಜು ಕೂಡಾ ತೆರೆದಿದ್ದು, ಎಂಟು ವರ್ಷದ ಹಿಂದೆ ವಿಜ್ಞಾನ ವಿಭಾಗವನ್ನೂ ಆರಂಭಿಸಲಾಗಿದೆ. ಪ್ರೌಢಶಾಲೆಯಲ್ಲಿ ಸುಮಾರು 285, ಕಾಲೇಜಿನಲ್ಲಿ 150 ಮಕ್ಕಳು ಸೇರಿ ಸುಮಾರು 450 ಮಕ್ಕಳು 15 ಎಕರೆ ವಿಸ್ತೀರ್ಣದ ಕ್ಯಾಂಪಸ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾರೆ.
ಪ್ರೌಢಶಾಲೆ ಹಾಗೂ ಕಾಲೇಜಿನ ಬಗ್ಗೆ ಗ್ರಾಮಸ್ಥರಿಗೆ ಹೆಮ್ಮೆ ಇದೆ. ಆದರೆ ಹೆದ್ದಾರಿ ಪಕ್ಕದಲ್ಲಿರುವುದರಿಂದ ಸುಸಜ್ಜಿತವಾದ ಕಾಂಪೌಂಡ್‌ನ ಅಗತ್ಯವಿದೆ. ಕಾಂಪೌಂಡ್ ನಿರ್ಮಾಣ ಮಾಡಿದರೆ ಇಲ್ಲಿನ ಹಳೆಯ ವಿದ್ಯಾರ್ಥಿಗಳು ಗೇಟ್ ಹಾಕಿಸಿಕೊಡಲು ತಯಾರಿದ್ದಾರೆ. ಜತೆಗೆ 50 ಲಕ್ಷ ರೂ. ವೆಚ್ಚದಲ್ಲಿ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು ಸಭಾಭವನ ನಿರ್ಮಾಣಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಚಿಕ್ಕಗೊಂಡನಹಳ್ಳಿ ಪ್ರೌಢಶಾಲೆಯಲ್ಲಿ ಓದಿದ ಸುಮಾರು 120 ಹಳೆಯ ವಿದ್ಯಾರ್ಥಿಗಳು ಒಟ್ಟಾಗಿದ್ದು, ಆ. 10 ಹಾಗೂ 11 ರಂದು ಅದ್ದೂರಿಯಾಗಿ ‘ಸುವರ್ಣ ಸಂಭ್ರಮ’ ಆಚರಿಸುತ್ತಿದ್ದಾರೆ. ಇದೇ ವೇಳೆ ಶಾಲೆಯಲ್ಲಿ ಪಾಠ ಮಾಡಿ ಹೋಗಿರುವ 89 ಅಧ್ಯಾಪಕರ ಪೈಕಿ 60 ಜನರನ್ನು ಸಂಪರ್ಕಿಸಿದ್ದು ಎಲ್ಲರಿಗೂ ಗುರುವಂದನೆ ಮೂಲಕ ಗೌರವ ಸಲ್ಲಿಸಲಾಗುತ್ತದೆ.
ಗಣ್ಯರ ಶುಭಾಶಯ: ಕಾರ್ಯಕ್ರಮಕ್ಕೆ ಶುಭ ಕೋರಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಸಿದ್ದಗಂಗಾ ಮಠದ ಮಠಾಧೀಶರಾದ ಶ್ರೀ ಸಿದ್ಧಲಿಂಗ ಶ್ರೀಗಳು, ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಪತ್ರ ಬರೆದಿದ್ದಾರೆ. ಎರಡು ದಿನಗಳ ಕಾಲ ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ಆ. 10 ರಂದು ಬೆಳಿಗ್ಗೆ 10:30ಕ್ಕೆ ‘ನೆನಪಿನಂಗಳ’ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಗುರುವಂದನೆ ಕಾರ್ಯಕ್ರಮ ನಡೆಯಲಿದೆ. ಡಾ| ಶಿವಮೂರ್ತಿ ಮುರುಘಾ ಶರಣರು ಸಾನ್ನಿಧ್ಯ ವಹಿಸಲಿದ್ದು, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಸಂಸದರಾದ ಎ. ನಾರಾಯಣಸ್ವಾಮಿ, ಜಿ.ಎಂ. ಸಿದ್ದೇಶ್ವರ್, ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಜಿಪಂ ಅಧ್ಯಕ್ಷೆ ವಿಶಾಲಕ್ಷಿ ನಟರಾಜ್, ತಾಪಂ ಅಧ್ಯಕ್ಷ ಡಿ.ಎಂ. ಲಿಂಗರಾಜ್, ಗ್ರಾಪಂ ಅಧ್ಯಕ್ಷೆ ಕೋಮಲಾ ಮತ್ತಿತರರು ಭಾಗವಹಿಸುವರು.