Advertisement

ನೀರಾವರಿ ಸೌಲಭ್ಯ ಕಲ್ಪಿಸಲು ಒತ್ತು ಕೊಡಿ

11:34 AM Aug 12, 2019 | Team Udayavani |

ಚಿತ್ರದುರ್ಗ: ಕಳೆದ 100 ವರ್ಷದಲ್ಲಿ ಸತತ 70 ವರ್ಷ ಬರಗಾಲವನ್ನೇ ಅನುಭವಿಸಿದ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯೊಂದು ಸುವರ್ಣ ಮಹೋತ್ಸವ ಆಚರಣೆ ಮಾಡಿಕೊಳ್ಳುತ್ತಿರುವುದು ಸಂತೋಷದ ಸಂಗತಿ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.

Advertisement

ತಾಲೂಕಿನ ಚಿಕ್ಕಗೊಂಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಚಿತ್ರದುರ್ಗ, ಚಳ್ಳಕೆರೆ ಭಾಗದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಆರಂಭವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಅನೇಕ ಮಂತ್ರಿಗಳು, ಮುಖ್ಯಮಂತ್ರಿಗಳು ಬಂದು ಕಾಮಗಾರಿ ವೀಕ್ಷಣೆ ಮಾಡಿ ಹೋದರೇ ವಿನಃ ಯಾರೂ ಕೂಡಾ ನೀರು ಹರಿಸಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಹಲವೆಡೆ ಮಳೆ ಬಂದು ಪ್ರವಾಹ ಸೃಷ್ಟಿಯಾಗಿದೆ. ಆದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಅಲ್ಪ ಸ್ವಲ್ಪ ಮಳೆಯಾಗಿದ್ದರೂ ರೈತರು ಬಿತ್ತನೆ ಮಾಡುವ ಸ್ಥಿತಿಯಲ್ಲಿಲ್ಲ. ನಮ್ಮ ರೈತರ ಸ್ಥಿತಿ ಡೋಲಾಯಮಾನವಾಗಿದೆ. ಜಿಲ್ಲೆಯ ರೈತರಿಗೆ ಫಸಲ್ ಭಿಮಾ ಯೋಜನೆಯಿಂದ 52 ಕೋಟಿ ರೂ. ದೊರೆತಿದೆ. ಮುಂದಿನ ದಿನಗಳಲ್ಲಿ ನೀರಾವರಿಗೆ ಹೆಚ್ಚಿನ ಒತ್ತು ನೀಡಿ ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ದೇಶದ 120 ಕೋಟಿ ಜನಸಂಖ್ಯೆಯಲ್ಲಿ ಶೇ. 60 ರಷ್ಟು ಜನ ಕೃಷಿಯನ್ನು ಅವಲಂಬಿಸಿದ್ದಾರೆ. ಜಿಲ್ಲೆಯಲ್ಲಿ ಕೃಷಿಯನ್ನು ನಂಬಿಕೊಂಡು ಬದುಕುತ್ತಿರುವ ಕುಟುಂಬಗಳು ಬರಗಾಲದಲ್ಲಿ ಗುಳೆ ಹೋಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲೆಯ ಯುವ ಸಮುದಾಯ ಕೇವಲ ಸರ್ಕಾರಿ ಕೆಲಸಗಳಿಗೆ ಜೋತು ಬೀಳುವ ಬದಲು ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಲೊÛೕಬೇಕು. ಕೃಷಿಯಲ್ಲಿ ಉದ್ಯೋಗ ಸೃಷ್ಟಿ ಮಾಡುವ ಕೆಲಸಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

Advertisement

ಐಎಎಸ್‌ ಅಧಿಕಾರಿ ಅಶೋಕ್‌ ದಳವಾಯಿ ಮಾತನಾಡಿ, ನಾವು ಹುಟ್ಟಿದ ಊರು ಹಾಗೂ ಮಣ್ಣನ್ನು ಮರೆಯಬಾರದು. ಮಹಾತ್ಮ ಗಾಂಧಿಧೀಜಿ ಹೇಳಿದಂತೆ ಶಿಕ್ಷಣ ಇಲ್ಲದ ಬದುಕು ಬದುಕೇ ಅಲ್ಲ. ಪ್ರಧಾನಿ ನರೇಂದ್ರ ಮೋದಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತರುತ್ತಿದ್ದಾರೆ. ಕೃಷಿಯಲ್ಲಿ ತಂತ್ರಜ್ಞಾನದ ಬಳಕೆಯಾಗಬೇಕು ಎಂದು ತಿಳಿಸಿದರು.

ಹಿಂದೆ ಅಮೇರಿಕಾದಿಂದ ಜೋಳ ತಂದು ಜನರಿಗೆ ಕೊಡಲಾಗುತ್ತಿತ್ತು. ಆದರೆ ಇಂದು ಸಾಕಷ್ಟು ಬದಲಾವಣೆ ಆಗಿದೆ. ಭಾರತದ ಮೂಲೆ ಮೂಲೆಗಳಲ್ಲೂ ಸಾಕಷ್ಟು ಆಹಾರ ಧಾನ್ಯ ಬೆಳೆಯಲಾಗುತ್ತದೆ. ಇದರ ಜತೆಗೆ ತಂತ್ರಜ್ಞಾನ ಸೇರಿದರೆ ದ್ವಿಗುಣ ಆಗುವುದರಲ್ಲಿ ಅನುಮಾನವಿಲ್ಲ. ದೇಶದಲ್ಲಿ ಕೃಷಿ ಅವಲಂಬಿತರ ಸಂಖ್ಯೆ ಸಾಕಷ್ಟಿದೆ. ಒಣ ಬೇಸಾಯದಲ್ಲಿ ಬೆಳೆ ಬೆಳೆಯುವ ಬಗ್ಗೆ ಯುವ ಕೃಷಿಕರು ತಿಳಿದುಕೊಳ್ಳಬೇಕು. ದೇಶದ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ಬೆಳೆ ಬೆಳೆದು ಲಾಭ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬೆಂಗಳೂರಿನ ಹೆಚ್ಚುವರಿ ಅರಣ್ಯ ಸಂರಕ್ಷಣಾಧಿಕಾರಿ ಬಿ.ಜೆ. ಹೊಸಮಠ, ನಬಾರ್ಡ್‌ ಮುಖ್ಯ ಪ್ರಬಂಧಕ ಆರ್‌.ಎಂ. ಕುಮ್ಮೂರ್‌, ರೈತ ಮುಖಂಡರಾದ ಬಸ್ತಿಹಳ್ಳಿ ಸುರೇಶ್‌ಬಾಬು, ಕೆ.ಪಿ. ಭೂತಯ್ಯ, ರಮಾ ನಾಗರಾಜ್‌, ಕೃಷಿ ಇಲಾಖೆಯ ತಿಮ್ಮಯ್ಯ, ಸುಧಾಕರ್‌, ಗ್ರಾಮದ ಮುಖಂಡರಾದ ರೇವಣ್ಣ ಗೌಡ, ಬಸವರಾಜ್‌, ಪಾಲಯ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next