ಚಿತ್ರದುರ್ಗ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬೀದರ್ ನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಪಶುಮೇಳದ ಜಾನುವಾರು ಪ್ರದರ್ಶನದಲ್ಲಿ ಚಿತ್ರದುರ್ಗ ತಾಲೂಕು ಗೊಲ್ಲನಕಟ್ಟೆ ತಿಮ್ಮಣ್ಣ ಸಿದ್ದಪ್ಪ ಅವರ ನಂದಿದುರ್ಗ ಮೇಕೆ ತಳಿಗೆ ದ್ವಿತೀಯ ಬಹುಮಾನ ಲಭಿಸಿದೆ.
ಬೀದರ್‌ನಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಪಶುಮೇಳದಲ್ಲಿ ಭಾಗವಹಿಸಲು ಜಿಲ್ಲೆಯ ಆರು ತಾಲೂಕುಗಳಿಂದ ತಲಾ 10 ರೈತರಂತೆ ಒಟ್ಟು 50 ರೈತರು ಭಾಗವಹಿಸಿದ್ದರು.
ಜಾನುವಾರು ಪ್ರದರ್ಶನ ಸ್ಪರ್ಧೆಗೆ ಜಿಲ್ಲೆಯಿಂದ ನಂದಿದುರ್ಗ ಮೇಕೆ ತಳಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದಕ್ಕೆ ರಾಜ್ಯ ಮಟ್ಟದಲ್ಲಿ ದ್ವಿತೀಯ ಬಹುಮಾನ ಬಂದಿದೆ. ಮೇಕೆಯ ಮಾಲೀಕ ಗೊಲ್ಲನಕಟ್ಟೆ ತಿಮ್ಮಣ್ಣ ಸಿದ್ದಪ್ಪ ಅವರಿಗೆ ಪಶು ಮೇಳದಲ್ಲಿ ಪ್ರಶಸ್ತಿ ಪತ್ರವನ್ನು ವಿತರಣೆ ಮಾಡಲಾಯಿತು. ನಂದಿದುರ್ಗ ಮೇಕೆ ತಳಿಯ ಮೂಲಸ್ಥಾನ ಚಿತ್ರದುರ್ಗ ಜಿಲ್ಲೆಯೇ ಆಗಿದೆ. ಈ ತಳಿ ಬಿಳಿ ಬಣ್ಣದ್ದಾಗಿದ್ದು, ಸರಾಸರಿ ದೇಹದ ತೂಕ ಗಂಡು 26 ರಿಂದ 56 ಕೆಜಿ, ಹೆಣ್ಣು 24 ರಿಂದ 41 ಕೆಜಿ ತೂಗುತ್ತದೆ. ಮೇಕೆಗಳ ಕೊಂಬುಗಳು ಹಿಮ್ಮುಖವಾಗಿರುತ್ತವೆ, ಕಿವಿಗಳು ನೇತಾಡುತ್ತಿರುತ್ತವೆ. ಇದು ಮಾಂಸದ ತಳಿಯಾಗಿದ್ದು, ಸಾಮಾನ್ಯವಾಗಿ ಅವಳಿ ಮರಿಗಳಿಗೆ ಜನ್ಮ ನೀಡುತ್ತವೆ.
ಇತ್ತೀಚೆಗಷ್ಟೇ ಇದಕ್ಕೆ ನಂದಿದುರ್ಗ ತಳಿಯ ಸ್ಥಾನ ನೀಡಲಾಗಿದೆ. ಜಿಲ್ಲೆಯಿಂದ ಪಶುಮೇಳದಲ್ಲಿ ಭಾಗವಹಿಸಿದ್ದ ಹಿರಿಯೂರು ತಾಲೂಕು ಬೇತೂರಿನ ಪ್ರಗತಿ ಪರ ರೈತ ಚಂದ್ರಶೇಖರ್ ಅವರ ಕುರಿ ಮತ್ತು ಮೇಕೆ ಸಾಕಾಣಿಕೆ ಯಶೋಗಾಥೆಯ ಪ್ರದರ್ಶನಕ್ಕೆ ಮೇಳದಲ್ಲಿ ಅವಕಾಶ ಮಾಡಿಕೊಡಲಾಗಿತ್ತು.
ಚಂದ್ರಶೇಖರ್ ಅವರ ಸಾಧನೆಗೆ ಮುಖ್ಯಮಂತ್ರಿಗಳು ಪ್ರಶಂಸೆ ವ್ಯಕ್ತಪಡಿಸಿ ಮೇಳದಲ್ಲಿ ಸನ್ಮಾನಿಸಿದರು. ಜಿಲ್ಲೆಯ ಪಾಲಿಗೆ ಇದು ಹೆಮ್ಮೆಯ ಸಂಗತಿ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಟಿ. ಕೃಷ್ಣಪ್ಪ ತಿಳಿಸಿದ್ದಾರೆ.