Advertisement

ಕೋಟೆನಾಡಿಗೆ ಬೇವು-ಬೆಲ್ಲ!

01:01 PM Mar 06, 2020 | Naveen |

ಚಿತ್ರದುರ್ಗ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಂಡಿಸಿದ ಬಜೆಟ್‌ನಲ್ಲಿ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ಜನತೆಗೆ ಯುಗಾದಿಗೆ ಮೊದಲೇ ಬೇವು-ಬೆಲ್ಲ ಎರಡನ್ನೂ ನೀಡಿದಂತಾಗಿದೆ.

Advertisement

ಜಿಲ್ಲೆಯ ಮಟ್ಟಿಗೆ ಬಜೆಟ್‌ನಲ್ಲಿ ಬೇವೂ-ಬೆಲ್ಲ ಎರಡೂ ಇದೆ. ಕಳೆದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಅವರ ಮನೆ “ವಿನಯ’ವನ್ನು ಸ್ಮಾರಕ ಮಾಡುವ ಪ್ರಸ್ತಾಪಕ್ಕೆ ಬಜೆಟ್‌ನಲ್ಲಿ 5 ಕೋಟಿ ರೂ. ಮೀಸಲಿಡಲಾಗಿದೆ.

ಮುರುಘಾ ಮಠದಿಂದ ನಿರ್ಮಾಣ ಮಾಡುತ್ತಿರುವ ಭವ್ಯವಾದ ಬಸವಣ್ಣನ ಕಂಚಿನ ಪುತ್ಥಳಿ ಕಾಮಗಾರಿಗೆ 20 ಕೋಟಿ ರೂ. ನೀಡಲಾಗಿದೆ. ಸುಮಾರು 100 ಕೋಟಿಗಿಂತಲೂ ಹೆಚ್ಚು ವೆಚ್ಚದಲ್ಲಿ ಪುತ್ಥಳಿ ನಿರ್ಮಾಣವಾಗುತ್ತಿದ್ದು, ಇದಕ್ಕೆ ರಾಜ್ಯ ಸರ್ಕಾರ ನೆರವು ನೀಡಬೇಕು ಎಂದು ಕಳೆದ ವರ್ಷದ ಶರಣ ಸಂಸ್ಕೃತಿ ಉತ್ಸವದ ವೇಳೆ ಡಾ| ಶಿವಮೂರ್ತಿ ಮುರುಘಾ ಶರಣರು ಬಿಎಸ್‌ವೈಗೆ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿರುವ ಯಡಿಯೂರಪ್ಪ ಈಗ 20 ಕೋಟಿ ರೂ. ಘೋಷಣೆ ಮಾಡಿದ್ದು, ಪುತ್ಥಳಿ ಕಾಮಗಾರಿ ವೇಗ ಪಡೆದುಕೊಳ್ಳಲಿದೆ. ಈ ಮೂಲಕ ಚಿತ್ರದುರ್ಗ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸದೊಂದು ಮೈಲುಗಲ್ಲು ಸೃಷ್ಟಿಯಾಗುವುದರಲ್ಲಿ ಸಂದೇಹವಿಲ್ಲ.

ವೀರ ಮದಕರಿ ನಾಯಕ ಹಾಗೂ ಒನಕೆ ಓಬವ್ವ ಅವರನ್ನು ನೆನಪಿಸುವ ಮುಖ್ಯ ಪ್ರವಾಸಿ ತಾಣ ಚಿತ್ರದುರ್ಗವಾಗಿದ್ದು ಇದರ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದಷ್ಟೇ ಹೇಳಲಾಗಿದೆ. ಅನುದಾನ ಘೋಷಣೆ ಮಾಡಬೇಕಾಗಿತ್ತು ಎನ್ನುವುದು ಜಿಲ್ಲೆಯ ಜನರ ಒತ್ತಾಸೆಯಾಗಿತ್ತು.

ಶುದ್ಧೀಕರಿಸಿದ ನೀರನ್ನು ಗೃಹೇತರ ಉದ್ದೇಶಕ್ಕೆ ಮರುಬಳಕೆ ಮಾಡಲು ರೂಪಿಸಿರುವ ಯೋಜನೆಯಲ್ಲಿ ಚಿತ್ರದುರ್ಗವನ್ನೂ ಸೇರಿಸಲಾಗಿದೆ. ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿ 10 ಕೋಟಿ ರೂ. ನಿಗದಿ ಮಾಡಿರುವುದು ಜಿಲ್ಲೆಯಲ್ಲಿ ಹೆಚ್ಚಾಗಿರುವ ಗೊಲ್ಲ ಸಮುದಾಯಕ್ಕೆ ಅನುಕೂಲವನ್ನುಂಟು ಮಾಡಬಹುದು.

Advertisement

ವೈದ್ಯಕೀಯ ಕಾಲೇಜು-ನೇರ ರೈಲು ಮಾರ್ಗ ಪ್ರಸ್ತಾಪವೇ ಇಲ್ಲ: ಬಿಎಸ್‌ವೈ ಬಜೆಟ್‌ನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಣೆಯಾಗಲಿದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಜಿಲ್ಲೆಯಿಂದ ಐದು ಜನ ಶಾಸಕರು, ಓರ್ವ ಸಂಸದರನ್ನು ಬಿಜೆಪಿಯಿಂದ ಆಯ್ಕೆ ಮಾಡಿ ಕಳುಹಿಸಿದ ಜಿಲ್ಲೆಗೆ ಯಡಿಯೂರಪ್ಪ ಭರ್ಜರಿ ಗಿಫ್ಟ್‌ ಕೊಟ್ಟೇ ಕೊಡುತ್ತಾರೆ ಎಂಬ ನಂಬಿಕೆ ಇತ್ತು. ಆದರೆ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ನೇರ ರೈಲು ಮಾರ್ಗಕ್ಕೆ ಸ್ಪಷ್ಟ ದಿಕ್ಕು ತೋರದ ಕಾರಣ ಅಸಮಾಧಾನ ವ್ಯಕ್ತವಾಗುತ್ತಿದೆ.

ಮುರುಘಾ ಶರಣರಿಂದ ಅಭಿನಂದನೆ: ಬಸವಣ್ಣನವರು ಸಮಾಜ ಸುಧಾರಣೆ ಮಾಡಿದ ಶ್ರೇಷ್ಠ ದಾರ್ಶನಿಕರು. ಕ್ರಾಂತಿಯ ಮೂಲಕ ಸಮಾನತೆ ತಂದುಕೊಟ್ಟ ಮಹಾ ಮಾನವತಾವಾದಿ. ವಿಶ್ವಗುರು ಬಸವಣ್ಣನ ಭವ್ಯ ಪುತ್ಥಳಿ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಜೆಟ್‌ನಲ್ಲಿ 20 ಕೋಟಿ ರೂ.ಗಳನ್ನು
ನೀಡಿರುವುದು ಸಂತಸ ತಂದಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹರ್ಷ ವ್ಯಕ್ತಪಡಿಸಿದ್ದಾರೆ. ಬಸವ ಪುತ್ಥಳಿ ಯೋಜನೆ ನೂರಾರು ಕೋಟಿ ರೂ. ಗಳ ಯೋಜನೆಯಾಗಿದೆ.

ಸರ್ಕಾರ ಕೊಟ್ಟಿರುವ ಹಣವನ್ನು ಸೂಕ್ತವಾಗಿ ಬಳಸಿ ಕೊಳ್ಳಲಾಗುವುದು. ಇನ್ನೂ ಹಣದ ಅವಶ್ಯಕತೆ ಇದ್ದು ಮುಂದೆಯೂ ಸರ್ಕಾರದಿಂದ ನಿರೀಕ್ಷೆ ಮಾಡುತ್ತೇವೆ ಎಂದಿದ್ದಾರೆ.
ಮಾಜಿಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪನವರ ನಿವಾಸವನ್ನು ಪ್ರವಾಸ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಬಜೆಟ್‌ನಲ್ಲಿ 5 ಕೋಟಿ ರೂ. ಘೋಷಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿರುವ ಶ್ರೀ ಗಳು, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಯಡಿಯೂರಪ್ಪ ಸ್ಪಂದಿಸಿದ್ದಾರೆ.

ಅದೊಂದು ಪ್ರವಾಸಿ ಕೇಂದ್ರವಾಗುವುದು ನಮಗೆ ಹೆಮ್ಮೆಯ
ಸಂಗತಿ. ಅದಕ್ಕಾಗಿ ಮುಖ್ಯಮಂತ್ರಿಗಳಿಗೆ ಅಭಿನಂದನೆ
ಸಲ್ಲಿಸುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next