Advertisement

ಬಿಜೆಪಿಯಿಂದಷ್ಟೇ ಸರ್ವರ ಅಭ್ಯುದಯ

11:21 AM Jul 07, 2019 | Naveen |

ಚಿತ್ರದುರ್ಗ: ಬಿಜೆಪಿ ಎದುರಾಳಿಗಳನ್ನು ಎದುರಿಸಬೇಕಾದರೆ ಕಾರ್ಯಕರ್ತರು ಸದಸ್ಯತ್ವ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ಕರೆ ನೀಡಿದರು.

Advertisement

ನಗರದ ನೀಲಕಂಠೇಶ್ವರ ದೇವಸ್ಥಾನದಲ್ಲಿ ಶನಿವಾರ ಬಿಜೆಪಿಯ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶ್ಯಾಂಪ್ರಸಾದ್‌ ಮುಖರ್ಜಿಯವರ ಜನ್ಮದಿನದ ಅಂಗವಾಗಿ 45 ದಿನಗಳ ಕಾಲ ನಡೆಯುವ ಸದಸ್ಯತ್ವ ಅಭಿಯಾನದಲ್ಲಿ ಜಿಲ್ಲೆಯಲ್ಲಿ ಒಂದು ಲಕ್ಷ ಸದಸ್ಯತ್ವ ಮಾಡಿಸುವ ಗುರಿಯಿದೆ. ರಾಜ್ಯದಲ್ಲಿ ಐವತ್ತು ಲಕ್ಷ ಸದಸ್ಯರನ್ನು ನೋಂದಣಿ ಮಾಡಬೇಕೆಂದು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ನೋಂದಣಿ ಮಾಡಿಕೊಂಡಿದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಲ್ಲಿ ಪಕ್ಷಕ್ಕೆ ಶೇ. 51 ರಷ್ಟು ಮತ ಸಿಕ್ಕಿದೆ ಎಂದರು.

ಬೇರೆ ಪಕ್ಷಗಳಿಗೆ ರಾಜಕಾರಣವೇ ಮುಖ್ಯ. ಆದರೆ ನಮಗೆ ಹಿಂದುತ್ವ, ದೇಶ, ರಾಷ್ಟ್ರ ಮುಖ್ಯವಾಗಿರುವುದರಿಂದ ಸದಸ್ಯತ್ವ ಅಭಿಯಾನದಲ್ಲಿ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿಸಿ ಪಕ್ಷ ಬಲಪಡಿಸಿ ಎಂದು ಮನವಿ ಮಾಡಿದರು.

ಸರ್ವ ವರ್ಗದ ಅಭ್ಯುದಯ ಬಿಜೆಪಿಯಿಂದ ಮಾತ್ರ ಸಾಧ್ಯ. ಮೋದಿ ಅಲೆ, ಕಾರ್ಯಕರ್ತರ ಶಕ್ತಿ, ಸದಸ್ಯತ್ವ ಅಭಿಯಾನದಿಂದ ಪಕ್ಷಕ್ಕೆ ಬಲ ಬರುವುದರಿಂದ ನರೇಂದ್ರ ಮೋದಿ ಇನ್ನೂ ಮೂವತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿರಬೇಕು. ಅದಕ್ಕಾಗಿ ಎಲ್ಲ ಸಮುದಾಯದವರನ್ನೂ ಒಂದುಗೂಡಿಸಿಕೊಂಡು ಪಕ್ಷ ಹೋರಾಡುತ್ತಿದೆ ಎಂದು ಹೇಳಿದರು.

ಸಂಸದ ಎ. ನಾರಾಯಣಸ್ವಾಮಿ ಮಾತನಾಡಿ, ವಿಶ್ವದಲ್ಲಿ ಅತಿ ಹೆಚ್ಚು ಸದಸ್ಯರುಗಳನ್ನು ಹೊಂದಿರುವ ಪಕ್ಷ ಯಾವುದಾದರೂ ಇದೆ ಎನ್ನುವುದಾದರೆ ಅದು ಬಿಜೆಪಿ. ಅದಕ್ಕಾಗಿ ಈ ಬಾರಿಯ ಸದಸ್ಯತ್ವ ಅಭಿಯಾನದಲ್ಲಿ ಮಹಿಳೆಯರು, ಪುರುಷ ಕಾರ್ಯಕರ್ತರಿಗಿಂತ ಹೆಚ್ಚು ಸದಸ್ಯತ್ವ ನೋಂದಣಿ ಮಾಡಿಸಬೇಕು. ಸದಸ್ಯತ್ವ ಅಭಿಯಾನದಲ್ಲಿ ಮಿಸ್ಡ್ ಕಾಲ್ ಜೊತೆಗೆ ವಿಳಾಸ, ಪಿನ್‌ಕೋಡ್‌ ನಮೂದಿಸಬೇಕು ಎಂದು ಮನವಿ ಮಾಡಿದರು.

Advertisement

ಬಿಜೆಪಿ ಪಕ್ಷ ಸಿದ್ಧಾಂತ, ಕಾರ್ಯವೈಖರಿ, ದೇಶಭಕ್ತಿಗೆ ಹಿಂದಿನಿಂದಲೂ ಒತ್ತು ನೀಡುತ್ತ ಬರುತ್ತಿದೆ. ಪಕ್ಷಕ್ಕೆ ಹಾನಿಯಾಗದ ರೀತಿಯಲ್ಲಿ ನಿಷ್ಠೆ, ಪ್ರಾಮಾಣಿಕತೆಯಿಂದ ನಡೆದುಕೊಂಡರೆ ಒಂದಲ್ಲ ಒಂದು ದಿನ ಅಧಿಕಾರ ಮನೆಬಾಗಿಲಿಗೆ ಬರುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌. ನವೀನ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಬಿಜೆಪಿ ಸರ್ವವ್ಯಾಪಿ, ಸರ್ವ ಪಕ್ಷವಾಗಬೇಕೆಂಬುದು ಪ್ರಧಾನಿ ಮೋದಿಯವರ ಆಸೆಯಂತೆ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿದೆ. ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌ ಎನ್ನುವುದರ ಜೊತೆಗೆ ಸಬ್‌ಕಾ ವಿಶ್ವಾಸ್‌ ಎನ್ನುವುದು ಪಕ್ಷದ ಮೂಲಮಂತ್ರವಾಗಿದೆ. ಅದಕ್ಕಾಗಿ ಸದಸ್ಯತ್ವ ಅಭಿಯಾನದಲ್ಲಿ ಜಿಲ್ಲೆಯಲ್ಲಿ ಮೂರು ಲಕ್ಷ ಗುರಿ ಮುಟ್ಟಬೇಕಾಗಿದೆ ಎಂದು ತಿಳಿಸಿದರು.

ವಿಭಾಗೀಯ ಸಹ ಪ್ರಭಾರಿ ಜಿ.ಎಂ. ಸುರೇಶ್‌, ಸ್ಲಂ ಮೋರ್ಚಾದ ಸಿದ್ದೇಶ್‌ ಯಾದವ್‌, ಪ್ರಧಾನ ಕಾರ್ಯದರ್ಶಿಗಳಾದ ಮುರಳಿ, ರತ್ನಮ್ಮ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್‌, ವಕ್ತಾರ ನಾಗರಾಜ ಬೇದ್ರೆ, ಖಜಾಂಚಿ ನರೇಂದ್ರ, ಶಿವಣ್ಣಾಚಾರ್‌, ಸುರೇಶ್‌ ಸಿದ್ದಾಪುರ, ಟೈಗರ್‌ ತಿಪ್ಪೇಸ್ವಾಮಿ, ಜಿ.ಎಚ್. ಮೋಹನ್‌, ಡಿ. ರಮೇಶ್‌, ರಾಜು ಶಿವನಕೆರೆ, ಚಂದ್ರಿಕಾ ಲೋಕನಾಥ್‌, ನೆಲ್ಲಿಕಟ್ಟೆ ಜಗದೀಶ್‌, ನಂದಿ ನಾಗರಾಜ್‌, ವಿಕಾಸ್‌, ಸಾಗರ್‌, ಸತ್ಯನಾರಾಯಣ, ನಗರಸಭೆ ಸದಸ್ಯರುಗಳಾದ ಶಶಿ, ಹರೀಶ್‌, ಬಸಮ್ಮ, ವಿಜಯಲಕ್ಷ್ಮೀ, ನಿವೃತ್ತ ಯೋಧರು, ಪೌರಸೇವಾ ನೌಕರರು, ರೈತರು, ವಿದ್ಯಾರ್ಥಿಗಳು, ಅಸಂಘಟಿತ ಆಟೋ ಚಾಲಕರು, ಶಿಕ್ಷಕರು ಇದ್ದರು.

ಪೌರ ಕಾರ್ಮಿಕರು, ಆಟೋ ಚಾಲಕರು, ನಿವೃತ್ತ ಯೋಧರು, ಬೀದಿ ಬದಿ ವ್ಯಾಪಾರಿಗಳನ್ನು ಸನ್ಮಾನಿಸಲಾಯಿತು. ಸದಸ್ಯತ್ವ ಅಭಿಯಾನದ ನಂತರ ಆನೆಬಾಗಿಲು ಬಳಿ ಇರುವ ದೇವಸ್ಥಾನದ ಎದುರಿನ ಖಾಲಿ ಜಾಗದಲ್ಲಿ ಸಸಿಗಳನ್ನು ನೆಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next