Advertisement

ಬ್ರಹ್ಮಶ್ರೀ ನಾರಾಯಣ ಗುರು ಸೇವೆ ಸ್ಫೂರ್ತಿದಾಯಕ

06:20 PM Sep 14, 2019 | Naveen |

ಚಿತ್ರದುರ್ಗ: ಬ್ರಹ್ಮಶ್ರೀ ನಾರಾಯಣ ಗುರು ಅವರ ಸ್ವಾರ್ಥ ರಹಿತ ಸಮಾಜ ಸೇವೆ ಎಲ್ಲರಿಗೂ ಸ್ಪೂರ್ತಿದಾಯಕ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾರಾಯಣ ಗುರುಗಳು ಸೇರಿದಂತೆ ಸಮಾಜ ಸುಧಾರಕರ ಮೌಲ್ಯಗಳನ್ನು ಯುವಪೀಳಿಗೆ ಅಳವಡಿಸಿಕೊಂಡು, ಉತ್ತಮ ಸಮಾಜ ನಿರ್ಮಿಸಬೇಕು. ಸಮಾಜ ಸುಧಾಕರ ಮೌಲ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸರ್ಕಾರ ಇಂತಹ ಜಯಂತಿಗಳನ್ನು ಆಚರಿಸುತ್ತಿದೆ ಎಂದರು.

ಎಸ್‌ಆರ್‌ಎಸ್‌ ಪಿಯು ಕಾಲೇಜಿನ ಪ್ರಾಚಾರ್ಯ ಇ.ಗಂಗಾಧರ ಉಪನ್ಯಾಸ ನೀಡಿ, ಸಮಾಜ ಸುಧಾರಿಸುವ ಶಕ್ತಿ ಇರುವುದು ಮಹಾನ್‌ ವ್ಯಕ್ತಿಗಳಿಗೆ. ಅಂತಹ ಮಹಾನ್‌ ವ್ಯಕ್ತಿಗಳ ಸಾಲಿನಲ್ಲಿ ನಾರಾಯಣ ಗುರೂಜಿ ಪ್ರಥಮರು. ಜಾತಿಯಲ್ಲಿ ಮೇಲು ಕೀಳು ಭಾವನೆಯನ್ನು ತೊಲಗಿಸುವಲ್ಲಿ ಅವರು ಮಾಡಿದ ಹೋರಾಟ ಅವಿಸ್ಮರಣೀಯ ಎಂದರು.

ಕೇರಳದಲ್ಲಿ ಹಿಂದೆ ಕೆಳವರ್ಗದವರ ಮೇಲಿನ ಶೋಷಣೆ, ಜಾತಿ ವ್ಯವಸ್ಥೆ ಹೆಚ್ಚಾಗಿ ಕಂಡು ಬರುತ್ತಿತ್ತು. ಅಲ್ಲಿನ ಈಡಿಗ, ದಲಿತ ಸಮಾಜದಂತಹ ಹಿಂದುಳಿದ ಸಮಾಜದವರಿಗೆ ದಾಸ್ಯ ಪದ್ಧತಿ, ಹೆಚ್ಚು ತೆರಿಗೆ ವಿಧಿಸುವುದು, ಶಿಕ್ಷಣದಿಂದ ದೂರವಿಟ್ಟು ಶೋಷಿಸುತ್ತಿದ್ದರು. ಈ ವೇಳೆ ಶಿಕ್ಷಣದಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲವಾಗಿ, ಉದ್ಯೋಗ ಮಾಡಿ ಸಶಸ್ತ್ರರಾಗಿ ಎಂಬುದಾಗಿ ನಾರಾಯಣ ಗುರು ಕೇರಳದ ಜನತೆಗೆ ಕರೆ ನೀಡಿದರು ಎಂದು ತಿಳಿಸಿದರು.

Advertisement

ಶಿಕ್ಷಣದ ಕುರಿತಾಗಿಯೂ ಒತ್ತು ನೀಡಿದ್ದರು. ರಾಜ್ಯಾದ್ಯಂತ 22 ಶಾಲೆಗಳನ್ನು ನಿರ್ಮಿಸಿದ್ದಾರೆ. ದೇವಸ್ಥಾನಗಳಲ್ಲಾಗುವ ಧೋರಣೆ ಕಂಡು ಶೋಷಿತರಿಗಾಗಿಯೇ ಸುಮಾರು 64 ದೇವಸ್ಥಾನಗಳನ್ನು ನಿರ್ಮಿಸಿ, ಮುಕ್ತ ಅವಕಾಶ ಕಲ್ಪಿಸಿದ್ದಾರೆ. ಜನಜಾಗೃತಿ ಆಂದೋಲನಕ್ಕೆ ಅಡಿಪಾಯ ಹಾಕಿದ ನಾರಾಯಣರು ಸಮಾಜಕ್ಕೇ ಗುರುವಾದರು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ಪ್ರಸನ್ನಕುಮಾರ್‌, ನಗರಸಭೆ ಪೌರಾಯುಕ್ತ ಚಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಜಿಪಂ ಉಪ ಕಾರ್ಯದರ್ಶಿ ಮಹಮ್ಮದ್‌ ಮುಬಿನ್‌ ಹಾಗೂ ಈಡಿಗ ಸಮಾಜದ ಮುಖಂಡ ಜೀವನ್‌ ಸೇರಿದಂತೆ ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next