ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ವ್ಯಾಪ್ತಿಗೆ ತರಲು ಅಗತ್ಯ ಕ್ರಮ ಕೈಗೊಂಡಿದ್ದು, ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಘೋಷಣೆಯಾಗುವ ನಿರೀಕ್ಷೆಯಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಮಂಗಳವಾರ ಹೊಳಲ್ಕೆರೆ ತಾಲೂಕಿನ ಗೂಳಿಹೊಸಹಳ್ಳಿ ಬಳಿ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆಯ ಸುರಂಗ ಮಾರ್ಗ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು. ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾದರೆ ಕೇಂದ್ರದಿಂದ ಅನುದಾನ ಬರಲಿದ್ದು, ಕಾಮಗಾರಿ ತ್ವರಿತವಾಗಿ ಮುಗಿಯಲಿದೆ. ಅಗತ್ಯ ಹಣಕಾಸಿನ ವ್ಯವಸ್ಥೆಯೂ ಆಗಲಿದೆ ಎಂದರು.
2008 ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿತ್ತು. 6 ಸಾವಿರ ಕೋಟಿ ಯೋಜನೆ ಇದಾಗಿತ್ತು. ಭೂಸ್ವಾಧಿಧೀನ, ಅರಣ್ಯ ಭೂಮಿ ಮತ್ತಿತರೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಎಲ್ಲಾ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಿ ಕಾಮಗಾರಿ ವೇಗ ಹೆಚ್ಚಿಸಲಾಗಿದೆ. ಪ್ಯಾಕೇಜ್ 8, 9 ರಲ್ಲಿ 7.5 ಕಿಮೀ ಟನಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, 300 ಮೀಟರ್ ಮಾತ್ರ ಬಾಕಿ ಇದೆ. ಅದನ್ನೂ ಜುಲೈ 15ರೊಳಗೆ ಮುಗಿಸುವಂತೆ ಗುತ್ತಿಗೆದಾರರಿಗೆ ಗಡುವು ನೀಡಲಾಗಿದೆ ಎಂದು ತಿಳಿಸಿದರು.
ಮುಂದಿನ ಜೂನ್ ಒಳಗಾಗಿ ಜಿಲ್ಲೆಯ 48 ಕೆರೆಗಳಿಗೆ ನೀರು ತುಂಬಿಸುವ ಉದ್ದೇಶವಿದೆ. ಎಲ್ಲಾ ರೈತರಿಗೂ ನೀರಾವರಿ ಸೌಲಭ್ಯ ಸಿಗಬೇಕೆನ್ನುವುದು ನಮ್ಮ ಗುರಿ. ಚಿತ್ರದುರ್ಗ ಶಾಖಾ ಕಾಲುವೆಯ 61.230 ಕಿಮೀದಿಂದ 90.000 ವರೆಗೆ ಪಂಕ್ತೀಕರಣಕ್ಕೆ ಅನುಮೋದನೆ ನೀಡಲಾಗಿದೆ. ಹೊಸದುರ್ಗ ತಾಲೂಕು ವ್ಯಾಪ್ತಿಯ ಕಿಮೀ 61.230 ಕಿಮೀಯಿಂದ 67.230 ರಿಂದ 67.416 ಕಿಮೀ ವರೆಗೆ ದೊಡ್ಡಕಿಟ್ಟದಹಳ್ಳಿ, ಕೆಂಚಿಹಳ್ಳಿ, ನಾಕೀಕೆರೆ ಗ್ರಾಮಗಳ ಮೂಲಕ 67.419 ಕಿಮೀಯಿಂದ 73.3ದ75 ವರೆಗೆ ಬೂದಿಪುರ, ಮಾಳಗೇರನಹಳ್ಳಿ, ಗೂಳಿಹೊಸಹಳ್ಳಿ, ಶಂಕರನಹಳ್ಳಿ, 73.375 ಕಿಮೀಯಿಂದ 81.820 ಕಿಮೀವರೆಗ,ೆ ಲಕ್ಕಿಹಳ್ಳಿ ಕಾಯ್ದಿರಿಸಿದ ಅರಣ್ಯ ಪ್ರದೇಶ ಹಾಗೂ ಹಿರಿಯೂರು ತಾಲೂಕಿನ 81.920 ಕಿಮೀ 90.00 ಕಿಮೀ ವರೆಗೆ ಗೋಗುದ್ದು, ಕೊಳಾಳು ಮತ್ತು ಭರಂಪುರ ಗ್ರಾಮಗಳ ಜಮೀನುಗಳಲ್ಲಿ ಕಾಲುವೆ ಹಾದು ಹೋಗುತ್ತದೆ ಎಂದು ಮಾಹಿತಿ ನೀಡಿದರು.
ಪ್ಯಾಕೇಜ್-9ರ ಅಡಿ ಚಿತ್ರದುರ್ಗ ಶಾಖಾ ಕಾಲುವೆ 73 ರಿಂದ 90 ಕಿಮೀವರೆಗೆ ಇದ್ದು ಇದರ ಟೆಂಡರ್ ಮೊತ್ತ 368.81 ಕೋಟಿ ರೂ. ಆಗಿದೆ. ಈಗಾಗಲೇ 279.60 ಕೋಟಿ ರೂ. ವೆಚ್ಚ ಮಾಡಿದ್ದು 146.01 ಕೋಟಿಯಷ್ಟು ಬಾಕಿ ಇದೆ. ಇದರಡಿ ಮೂರು ಟನಲ್‌ಗಳು ಹಾಗೂ ತೆರೆದ ಕಾಲುವೆ ಬರಲಿದ್ದು ಟನಲ್ ಕಾಮಗಾರಿ ವೇಗವಾಗಿ ನಡೆಯುತ್ತಿದೆ ಎಂದರು. ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣರಾವ್ ಪೇಶ್ವೆ, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ರಾಘವನ್, ಅಧೀಕ್ಷಕ ಇಂಜಿನಿಯರ್ ವೇಣುಗೋಪಾಲ್, ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಹಾಸ್, ಶ್ರೀಧರ್, ಟಾಟಾ ಶಿವನ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.