Advertisement

ಕೆರೆ ನೀರು ಭರ್ತಿಗೆ ಸರ್ವೆ ನಡೆಸಿ

03:26 PM Dec 29, 2019 | Team Udayavani |

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ಬಿಟ್ಟು ಹೋಗಿರುವ ಕೆರೆಗಳಿಗೆ ನೀರು ತುಂಬಿಸಲು ಸರ್ವೆ ನಡೆಸಿ ಹೆಚ್ಚುವರಿ ಡಿಪಿಆರ್‌ ಸಲ್ಲಿಸಿದರೆ ಅನುಮೋದನೆ ಕೊಡಿಸುವುದಾಗಿ ಸಂಸದ ಎ.ನಾರಾಯಣಸ್ವಾಮಿ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಭದ್ರಾ ಮೇಲ್ದಂಡೆ ಹಾಗೂ ತುಮಕೂರು-ಚಿತ್ರದುರ್ಗ- ದಾವಣಗೆರೆ ನೇರ ರೈಲು ಮಾರ್ಗ ಯೋಜನೆಗಳ ಕುರಿತ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಭದ್ರಾ ಮೇಲ್ದಂಡೆ ಯೋಜನೆಯಡಿ ನಮ್ಮ ಗ್ರಾಮದ ಕೆರೆಗೆ ನೀರು ತುಂಬಿಸಿ ಎಂದು ರೈತರು ಪದೇ ಪದೇ ಜಿಲ್ಲಾಧಿಕಾರಿ ಕಚೇರಿ, ವಿಧಾನಸೌಧಕ್ಕೆ ಅಲೆಯಬಾರದು. ಈ ನಿಟ್ಟಿನಲ್ಲಿ ಈಗಲೇ ಸರ್ವೆ ನಡೆಸಿ ಡಿಪಿಆರ್‌ ತಯಾರಿಸಿದರೆ ಅನುಮೋದನೆ ಕೊಡಿಸುತ್ತೇನೆ ಎಂದರು.

ಹೊಸದುರ್ಗ ತಾಲೂಕಿನಲ್ಲಿ ಭದ್ರಾ ಕಾಮಗಾರಿ ನಡೆಯುತ್ತಿದೆ. ಆದರೆ, ಭೂಸ್ವಾ ಧೀನ ಪ್ರಕ್ರಿಯೆ ಚುರುಕಾಗಬೇಕು. ಪ್ರಾಥಮಿಕ ಹಂತದ ಅಧಿಸೂಚನೆಗೆ ಮೂರು ತಿಂಗಳು, ಪರಿಹಾರ ವಿತರಣೆಗೆ ಮೂರು, ಆನಂತರ ಅಂತಿಮ ಸರ್ವೆಗೆ ಆರು ತಿಂಗಳು ಎಂದು ಕಾಲಹರಣ ಮಾಡಿದರೆ ಒಪ್ಪಲಾಗದು ಎಂದು ತಾಕೀತು ಮಾಡಿದರು.

ಹೊಸದುರ್ಗ ತಾಲೂಕಿನಲ್ಲಿ ಭೂಸ್ವಾಧಿಧೀನ ವಿಳಂಬದ ಬಗ್ಗೆ ನಡೆದ ಚರ್ಚೆ ವೇಳೆ, ಕಡತಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳಿಸಲಾಗಿದೆ. ಅಲ್ಲಿಂದ ಅನುಮೋದನೆ ದೊರೆಯಬೇಕಿದೆ ಎಂದು ಅಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿ ಕಾರಿ ವಿನೋತ್‌ ಪ್ರಿಯಾ, ಭದ್ರಾ ಮೇಲ್ದಂಡೆ ಯೋಜನೆ ಕಚೇರಿಯಿಂದ ಬರುವ ಕಡತಗಳನ್ನು ಅನುಮಾನದಿಂದ ನೋಡುವಂತಾಗಿದೆ. ಏಕೆಂದರೆ ಯಾವ ರೈತರಿಗೆ ಎಷ್ಟು ಪರಿಹಾರ ಎನ್ನುವ ಮಾಹಿತಿಯೇ ಇಲ್ಲದೆ ಅನುಮೋದನೆ ನೀಡುವಂತೆ ಪ್ರಸ್ತಾವನೆ ಬರುತ್ತಿವೆ ಎಂದು ಹೇಳಿದರು. ಈ ವೇಳೆ ಸಂಸದರು, ಜಿಲ್ಲಾಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಿ ಅನುಮೋದನೆ ಪಡೆದುಕೊಳ್ಳುವಂತೆ ಸೂಚಿಸಿದರು.

ಜಿಲ್ಲೆಯ ಲಕ್ಷಾಂತರ ರೈತರು ಭದ್ರೆ ಹರಿಯುತ್ತಾಳೆ ಎಂದು ಆಸೆಗಣ್ಣಿನಿಂದ ನೋಡುತ್ತಿದ್ದಾರೆ. ಜನಪ್ರತಿನಿ ಧಿಗಳು ಕೂಡ ನೀರು ಈಗ ಬರುತ್ತೆ, ಆಗ ಬರುತ್ತೆ ಎನ್ನುತ್ತಿದ್ದೇವೆ. ಆದರೆ ಅಧಿಕಾರಿಗಳು ಭೂಸ್ವಾ ಧೀನವನ್ನೇ ಮಾಡದಿದ್ದರೆ ಹೇಗೆ, ಇಲ್ಲಿನ ಜನ ಯಾಕೆ ಇನ್ನೂ ಸುಮ್ಮನಿದ್ದಾರೆಯೋ ಗೊತ್ತಿಲ್ಲ ಎಂದು ಸಂಸದ ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.

Advertisement

ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗಕ್ಕೆ ಅಗತ್ಯ ಭೂಮಿ ಸ್ವಾಧೀನ ಮಾಡಿಕೊಡಬೇಕು. ಯಾವ ಅಡೆತಡೆ ಇದ್ದರೂ ಗಮನಕ್ಕೆ ತನ್ನಿ. ಭೂಸ್ವಾ ಧೀನ ಪ್ರಕ್ರಿಯೆಗೆ ವೇಗ ನೀಡಿ. ರೈತರಿಗೆ ಹೆಚ್ಚಿನ ಪರಿಹಾರ ನೀಡಿ ಎಂದು ತಿಳಿಸಿದರು.

ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್‌ ಶಿವಕುಮಾರ್‌, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿ ಕಾರಿ ಪ್ರಸನ್ನ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next