Advertisement

ಭದ್ರಾ ಮೇಲ್ದಂಡೆ ಕಚೇರಿಗೆ ಮುತ್ತಿಗೆ

03:53 PM Sep 12, 2019 | Team Udayavani |

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ನೀರು ಹರಿಸಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ನೇತೃತ್ವದಲ್ಲಿ ಬುಧವಾರ ಭದ್ರಾ ಮೇಲ್ದಂಡೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

Advertisement

ಜಿಲ್ಲೆಗೆ ಭದ್ರಾ ನೀರು ಹರಿಸಲು ಮೀನಾಮೇಷ ಎಣಿಸಲಾಗುತ್ತಿದೆ. ಕಾಮಗಾರಿ ವೇಗವಾಗಿ ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಭದ್ರಾ ಮೇಲ್ದಂಡೆ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ಅಖಂಡ ಕರ್ನಾಟಕ ರೈತ ಸಂಘದ ಮುಖಂಡರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಭದ್ರಾ ಕಚೇರಿಗೆ ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಪ್ರವಾಸಿಮಂದಿರದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿದ ರೈತರು, ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ರೈತರು ಬರುವ ವೇಳೆಗೆ ಕಚೇರಿಯ ಗೇಟ್ ಹಾಕಿ ಬಂದೋಬಸ್ತ್ ಮಾಡಿದ್ದ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ಸಿಡಿಮಿಡಿಗೊಂಡರು.

ಜಿಲ್ಲೆಯ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲು ಬಂದಿದ್ದೇವೆ. ಅಧಿಕಾರಿಗಳು ಗೇಟ್ ಬಳಿ ಬಂದು ಮಾಹಿತಿ ನೀಡುವುದನ್ನು ಕೇಳಲು ಆಗುತ್ತದೆಯೇ, ಇಂತಹ ಗಂಭೀರವಾದ ಸಮಸ್ಯೆಯ ಬಗ್ಗೆ ರಸ್ತೆಯಲ್ಲಿ ಮಾತಾಡಬೇಕೆ ಎಂದು ರೈತರು ಪ್ರಶ್ನಿಸಿದರು. ನಾವು ಗಲಾಟೆ ಮಾಡುವುದಿಲ್ಲ. ಶಾಂತಿಯುತವಾಗಿ ಪ್ರತಿಭಟಿಸುತ್ತೇವೆ. ಮೊದಲು ನಮ್ಮನ್ನು ಒಳಗೆ ಬಿಡಿ. ಅಲ್ಲಿವರೆಗೆ ನಾವು ಮಾತಾಡುವುದಿಲ್ಲ ಎಂದು ರೈತರು ಪಟ್ಟು ಹಿಡಿದರು. ಈ ವೇಳೆ ರೈತರನ್ನು ಕಚೇರಿ ಮುಂಭಾಗದವರೆಗೆ ಬಿಟ್ಟ ಪೊಲೀಸರು, ಅಲ್ಲಿಗೆ ಭದ್ರಾ ಮೇಲ್ದಂಡೆ ಯೋಜನೆಯ ಇಂಜಿನಿಯರ್‌ಗಳನ್ನು ಕರೆಸಿದರು.

ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ವಾಣಿವಿಲಾಸ ಸಾಗರಕ್ಕೆ ನೀರು ಇಂದು ಬರುತ್ತೆ, ನಾಳೆ ಬರುತ್ತೆ ಎಂದು ಸುಳ್ಳಿನ ಕಂತೆ ಕಟ್ಟುತ್ತಿರುವ ರಾಜಕಾರಣಿಗಳಂತೆ ನೀವು ಕೂಡ ರೈತರಿಗೆ ಸುಳ್ಳು ಹೇಳಿ ವಂಚಿಸಬೇಡಿ. ಬರಪೀಡಿತ ಚಿತ್ರದುರ್ಗ ಜಿಲ್ಲೆಯ ರೈತರು ನೀರಿಗಾಗಿ ಕಾಯುತ್ತಿದ್ದಾರೆ. ವಿವಿ ಸಾಗರಕ್ಕೆ ನೀರು ಹರಿಸಿದರೆ ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ಭಾಗದ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಲಿದೆ ಎನ್ನುವುದನ್ನು ಮೊದಲು ಅಧಿಕಾರಿಗಳು ಅರ್ಥ ಮಾಡಿಕೊಂಡು ರೈತರ ಹಿತ ಕಾಪಾಡಲು ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

Advertisement

ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಮಾತನಾಡಿ, ಅಕ್ಟೋಬರ್‌ 1 ರಂದು ನೀರು ಹರಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಇಷ್ಟು ದಿನ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಆದರೆ ಈಗ ನೀರು ಹರಿಸಲು ಸಿದ್ಧತೆ ನಡೆಯುತ್ತಿದ್ದು, ಅ. 1 ರಂದು ನೀರು ಹರಿಯಲಿದೆ ಎಂದು ತಿಳಿಸಿದರು.

ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಎಲ್. ಬಸವರಾಜ್‌, ಗೌರವಾಧ್ಯಕ್ಷ ಕುರುಬರಹಳ್ಳಿ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಎಂ. ಸಿದ್ದಪ್ಪ, ರಾಜ್ಯ ಗೌರವಾಧ್ಯಕ್ಷ ನಿರ್ಮಲಕಾಂತ ಪಾಟೀಲ್, ಗುರುಸಿದ್ದಪ್ಪ, ನಿರಂಜನಮೂರ್ತಿ, ಶಾಂತಣ್ಣ, ಶಿವಕುಮಾರ್‌, ನಂಜುಂಡಪ್ಪ, ಗಿರೀಶ್‌ ರೆಡ್ಡಿ, ಗಿರಿಧರ ಮೂರ್ತಿ, ಶೇಷಾದ್ರಿ, ಸಿದ್ಧರಾಮ ಪುರಂಜಿಣಿಗಿ, ಕುಲಕರ್ಣಿ, ಉಳ್ಳಪ್ಪ ಒಡೆಯರ್‌, ನಾಗರಾಜ್‌, ಸಿದ್ದನಗೌಡ ಪಾಟೀಲ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next