ಚಿತ್ರದುರ್ಗ: ತಾಯಿಯಾಗಿ, ಹೆಂಡತಿಯಾಗಿ, ಸಹೋದರಿಯಾಗಿ ಹೆಣ್ಣು ಬೇಕು. ಆದರೆ, ಮಗಳಾಗಿ ಯಾಕೆ ಬೇಡ..?
Advertisement
ಇಂಥದ್ದೊಂದು ಸಕಾಲಿಕ ಹಾಗೂ ವಿಶಿಷ್ಟ ಪರಿಕಲ್ಪನೆಯಡಿ ಮೈಸೂರು ದಸರಾ ಉತ್ಸವಕ್ಕೆಚಿತ್ರದುರ್ಗ ಜಿಲ್ಲೆಯಿಂದ ಟ್ಯಾಬ್ಲೋ ತಯಾರಾಗುತ್ತಿದೆ. ನಾಡಹಬ್ಬ ಮೈಸೂರು ದಸರೆಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಸ್ತಬ್ದ ಚಿತ್ರಗಳನ್ನು ಕಳುಹಿಸುವುದು ವಾಡಿಕೆ. ಪ್ರತಿ ವರ್ಷವೂ ಒಂದೊಂದು ಭಿನ್ನ ಕಲ್ಪನೆಗಳಡಿ, ಸಮಾಜಕ್ಕೆ ಸಂದೇಶ ಸಾರುವ, ಜಿಲ್ಲೆಯ ಸಂಸ್ಕೃತಿ ಬಿಂಬಿಸುವ ಟ್ಯಾಬ್ಲೋಗಳು ದಸರಾದಲ್ಲಿ ಅರಮನೆ ಮುಂದೆ ಸಾಗುವ ದೃಶ್ಯಗಳನ್ನು ನಾವು ಗಮನಿಸುತ್ತೇವೆ.
ಕುಸಿಯುತ್ತಿರುವ ಲಿಂಗಾನುಪಾತದ ಆಧಾರದಲ್ಲಿ ಟ್ಯಾಬ್ಲೋ ಮಾಡಲು ದಸರಾ ಉತ್ಸವ ಸಮಿತಿಗೆ ಪರಿಕಲ್ಪನೆ ಕಳುಹಿಸಿದ್ದರು. ಇದಕ್ಕೆ ಸಮಿತಿ ಒಪ್ಪಿಗೆ ಸೂಚಿಸಿದ್ದು, ಈಗಾಗಲೇ ತಯಾರಿ ಕೆಲಸ ಶುರುವಾಗಿದೆ. ಹೀಗಿರಲಿದೆ ಟ್ಯಾಬ್ಲೋ: ಹೆಣ್ಣು ಭ್ರೂಣಹತ್ಯೆಯಿಂದ ಆಗುವ ಸಾಮಾಜಿಕ ದುಷ್ಪರಿಣಾಮಗಳ ಕುರಿತಾಗಿ ಇಡೀ ಸ್ತಬ್ದಚಿತ್ರ ಗಮನ ಸೆಳೆಯಲಿದೆ. ವೈದ್ಯರು ಹಾಗೂ ಲ್ಯಾಬ್‌ಗಳಲ್ಲಿ ಹೆಣ್ಣು ಭ್ರೂಣ ಪರೀಕ್ಷೆ ಮಾಡುವುದು. ಅಲ್ಲಿಗೆ ಪೊಲೀಸರು ದಾಳಿ ಮಾಡುವುದು ನಂತರ ವೈದ್ಯರು ಹಾಗೂ ಪರೀಕ್ಷೆ ಮಾಡಿಸಿದ ಪೋಷಕರಿಗೆ ದಂಡ ವಿಧಿಸಿ ಶಿಕ್ಷೆ ವಿಧಿಸುವುದು ಟ್ಯಾಬ್ಲೋ
ಪರಿಕಲ್ಪನೆ. ಹೆಣ್ಣು ಅಡುಗೆ ಮನೆಗೆ ಸೀಮಿತಳಲ್ಲ. ಜಾಗತಿಕ ಮಟ್ಟದಲ್ಲಿ ಮಹಿಳೆ ಪುರುಷನಿಗಿಂತ ಒಂದು ಹೆಜ್ಜೆ ಮುಂದೆ ಎನ್ನುವಂತೆ ಸಾಧನೆ ಮಾಡುತ್ತಿದ್ದಾಳೆ. ಈ ನಿಟ್ಟಿನಲ್ಲಿ ಸಾಧನೆ ಮಾಡಿರುವ ಮಹಿಳೆಯರ ಭಾವಚಿತ್ರಗಳೂ ಟ್ಯಾಬ್ಲೋ ಮೇಲಿರಲಿವೆ. ಚಿತ್ರದುರ್ಗದ ವೀರವನಿತೆ ಒನಕೆ ಓಬವ್ವ, ಸುಧಾಮೂರ್ತಿ, ಸಾಲುಮರದ ತಿಮ್ಮಕ್ಕ, ಪಿ.ವಿ. ಸಿಂಧು, ಕಲ್ಪನಾ ಚಾವ್ಲಾ ಸೇರಿದಂತೆ ವಿವಿಧ ಸಾಧಕಿಯರು ಟ್ಯಾಬ್ಲೋದಲ್ಲಿ ಸ್ಥಾನ ಪಡೆಯಲಿದ್ದಾರೆ. ಜಿಪಂ ವ್ಯಾಪ್ತಿಯ ವಿವಿಧ ಇಲಾಖೆಗಳು ಇದಕ್ಕಾಗಿ ಅನುದಾನ ಒದಗಿಸಲಿದ್ದು, ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಸ್ತಬ್ದಚಿತ್ರ ತಯಾರಾಗಲಿದೆ ಎಂದು ಸಿಇಒ ಸತ್ಯಭಾಮಾ ಮಾಹಿತಿ ನೀಡಿದ್ದಾರೆ.