Advertisement

ನೆರೆ ಸಂತ್ರಸ್ತರಿಗೆ ನೆರವಿನ ಮಹಾಪೂರ

03:02 PM Aug 14, 2019 | Team Udayavani |

ಚಿತ್ರದುರ್ಗ: ಬಿಜೆಪಿ ಮುಖಂಡರ ನೇತೃತ್ವದಲ್ಲಿ ನೆರೆ ಸಂತ್ರಸ್ತರಿಗೆ ಮಂಗಳವಾರ ನಗರದಲ್ಲಿ ಪರಿಹಾರ ಸಾಮಗ್ರಿ ಸಂಗ್ರಹಿಸಲಾಯಿತು. ಚಿತ್ರದುರ್ಗ ನಗರ ಹಾಗೂ ಜಿಲ್ಲೆಯ ಜನತೆ ಸ್ವಯಂ ಪ್ರೇರಣೆಯಿಂದ ಹಣ, ವಸ್ತುಗಳನ್ನು ನೀಡುವ ಮೂಲಕ ನೊಂದವರಿಗೆ ಸಾಂತ್ವನ ಹೇಳುವ ಪ್ರಯತ್ನ ಮಾಡಿದರು.

Advertisement

ಬೆಳಗ್ಗೆ ಹೊಳಲ್ಕೆರೆ ರಸ್ತೆಯ ನೀಲಕಂಠೇಶ್ವರ ದೇವಸ್ಥಾನ ಮುಂಭಾಗದಿಂದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ನೇತೃತ್ವದಲ್ಲಿ ಪರಿಹಾರ ನಿಧಿ ಸಂಗ್ರಹ ಕಾರ್ಯಕ್ಕೆ ಚಾಲನೆ ದೊರೆಯಿತು. ಈ ವೇಳೆ ವಿವಿಧ ಸಮುದಾಯ, ಸಮಾಜ, ಸಂಘ-ಸಂಸ್ಥೆಗಳು ನೆರವು ನೀಡಿದವು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಉತ್ತರ ಕರ್ನಾಟಕ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಂದಿರುವ ಭೀಕರ ಪ್ರವಾಹದ ಪರಿಹಾರ ಕಾರ್ಯದಲ್ಲಿ ಆರೆಸ್ಸೆಸ್‌ ಕಾರ್ಯಕರ್ತರು ಸಮರ್ಥವಾಗಿ ತೊಡಗಿಸಿಕೊಂಡಿದ್ದಾರೆ. ಕೊಡಗಿನಲ್ಲಿ ನೆರೆ ಬಂದಾಗ ಸರ್ಕಾರ ವ್ಯವಸ್ಥಿತವಾಗಿ ಪರಿಹಾರ ಕಾರ್ಯ ಮಾಡದೇ ಇದ್ದಿದ್ದರಿಂದ ಅಲ್ಲಿಗೆ ತಲುಪಿಸಿದ ಅಕ್ಕಿ ಮತ್ತಿತರ ಸಾಮಗ್ರಿಗಳು ವ್ಯರ್ಥವಾಗಿವೆ. ಆದ್ದರಿಂದ ಈಗ ಆರೆಸ್ಸೆಸ್‌ ನೇತೃತ್ವದಲ್ಲೇ ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಅತ್ಯಂತ ವ್ಯವಸ್ಥಿತವಾಗಿ ಸಂಘದ ಹಿರಿಯರು, ಕಾರ್ಯಕರ್ತರು ನೆರೆ ಪರಿಹಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ವಸ್ತುಗಳಿಗಿಂತ ಹಣದ ನೆರವಿನ ಅಗತ್ಯವಿದೆ. ನೆರೆಯಿಂದ ಮನೆ ಕಳೆದುಕೊಂಡವರಿಗೆ ಮನೆ, ಬದುಕು ಕಟ್ಟಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ನಾವು ಸಂಗ್ರಹಿಸುವ ಚೆಕ್‌, ಡಿಡಿಗಳನ್ನು ಬೆಳಗಾವಿ ಮತ್ತು ಹುಬ್ಬಳ್ಳಿಯ ಸಂಘದ ನೆರೆ ಪರಿಹಾರದ ಖಾತೆಗೆ ಹಾಕುತ್ತಿದ್ದೇವೆ. ಇನ್ನೂ ಕೆಲವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೂ ಹಾಕುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ನೆರೆ ಸಂತ್ರಸ್ತರಿಗೆ ನೆರವು ನೀಡಿದವರು: ರೆಡ್ಡಿ ಜನಸಂಘ 3 ಲಕ್ಷ ರೂ., ವೀರಶೈವ ಸಮಾಜ 1 ಲಕ್ಷ ರೂ., ಎಪಿಎಂಸಿ ದಲ್ಲಾಲರ ಸಂಘ 1 ಲಕ್ಷ ರೂ., ಆರ್ಯವೈಶ್ಯ ಸಂಘದಿಂದ ಸುಮಾರು 6.50 ಲಕ್ಷ ರೂ. ಮೌಲ್ಯದ ಸಾಮಗ್ರಿ, ವಿಶ್ವ ಮಾನವ ವಸತಿ ಶಾಲೆಯಿಂದ ಒಂದು ಸಾವಿರ ಮಕ್ಕಳಿಗೆ ಬಟ್ಟೆ ಹಾಗೂ 10 ಸಾವಿರ ರೂ. ನಗದು, ಚಿತ್ರದುರ್ಗ ನಗರಸಭೆ ಸದಸ್ಯರಿಂದ 1 ಲೋಡ್‌ ಅಕ್ಕಿ, ವಿಶ್ವಕರ್ಮ ಸಮಾಜದಿಂದ ಸಾಮಗ್ರಿ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ್‌, ಎಂ.ಆರ್‌. ರಾಜೇಶ್‌ ತಲಾ ಹತ್ತು ಸಾವಿರ ರೂ. ಸೇರಿದಂತೆ ಹಲವರು ನೀಲಕಂಠೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಚೆಕ್‌ ಹಾಗೂ ವಸ್ತುಗಳನ್ನು ಶಾಸಕರಿಗೆ ಹಸ್ತಾಂತರಿಸಿದರು.

Advertisement

ವರ್ತಕರ ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ ರೆಡ್ಡಿ, ದ್ಯಾಮಣ್ಣ, ಆರ್ಯವೈಶ್ಯ ಸಂಘದ ಅಧ್ಯಕ್ಷ ಕಾಶಿ ವಿಶ್ವನಾಥ ಶೆಟ್ಟಿ, ವೀರಶೈವ ಸಮಾಜದ ಅಧ್ಯಕ್ಷ ಜಯಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌. ನವೀನ್‌, ಜಿ.ಎಂ. ಸುರೇಶ್‌, ಮುರಳಿ, ರತ್ನಮ್ಮ, ರೇಖಾ, ಶ್ಯಾಮಲಾ, ಎಂ.ಪಿ. ಗುರುರಾಜ್‌, ಕೆ. ತಿಪ್ಪೇಸ್ವಾಮಿ, ಶಿವಣ್ಣಾಚಾರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next