Advertisement

ಜಾತಿ ಬದಿಗಿಟ್ಟು ಪ್ರೀತಿಯಿಂದ ಬದುಕಿ

01:42 PM Nov 16, 2019 | Naveen |

ಚಿತ್ರದುರ್ಗ: ರಾಮಲಲ್ಲಾ ಎಂದರೆ ರಾಮ ಮತ್ತು ಅಲ್ಲಾ ಎಂದರ್ಥ. ಹಾಗಾಗಿ ಜಾತಿ ಬದಿಗಿಟ್ಟು ಪ್ರೀತಿಯಿಂದ ಬದುಕಬೇಕು ಎಂದು ಖ್ಯಾತ ಕಾದಂಬರಿಕಾರ ಡಾ| ಬಿ.ಎಲ್‌. ವೇಣು ಹೇಳಿದರು.

Advertisement

ಆರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿನಿರತರ ಸಂಘದ ವತಿಯಿಂದ ನಗರದ ವಾಸವಿ ಶಾಲೆ ಆವರಣದಲ್ಲಿ ನಡೆದ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಭಾವಚಿತ್ರ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನಾವು ನವೆಂಬರ್‌ ಕನ್ನಡಿಗರಾಗಬಾರದು. ವರ್ಷ ಪೂರ್ತಿ ಕನ್ನಡದ ಅಭಿಮಾನ ಇರಬೇಕು. ಕನ್ನಡವೇ ನಮ್ಮ ಪ್ರಥಮ ಆದ್ಯತೆಯಾಗಬೇಕು. ಇಂಗ್ಲಿಷ್‌ ಸಂಪರ್ಕ ಭಾಷೆಯಾಗಿ ಮಾತ್ರ ಇರಬೇಕು. ಬೇರೆ ಯಾವ ಭಾಷೆ ಕಲಿತರೂ ನಷ್ಟವಿಲ್ಲ. ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ಕನ್ನಡದ ಶಕ್ತಿ ಎಂಥದ್ದು ಎಂಬುದಕ್ಕೆ ಸಾಕ್ಷಿ ಎಂದರು.

ಇಂದು ಮೊಬೈಲ್‌, ಟಿವಿ, ಇಂಟರ್‌ನೆಟ್‌ ಹಾವಳಿ ಅತಿಯಾಗಿ ಡಿಜಿಟಲ್‌ ವಸ್ತುಗಳ ಕಡೆ ಮಕ್ಕಳು ಆಕರ್ಷಿತರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಹರಿದು ಹಂಚಿ ಹೋಗಿದ್ದ ದೇಶವನ್ನು ಒಗ್ಗೂಡಿಸಿದ ಕಾರಣಕ್ಕೆ ವಲ್ಲಭಬಾಯ್‌ ಪಟೇಲರಿಗೆ “ಸರ್ದಾರ್‌’ ಎಂಬ ಹೆಸರು ಬಂದಿದೆ. ದೇಶದ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಮಹನೀಯರ ವಿಚಾರ, ಇತಿಹಾಸವನ್ನು ಇಂದಿನ ಯುವ ಸಮೂಹಕ್ಕೆ ತಿಳಿಸಿಕೊಡಬೇಕಿದೆ ಎಂದರು.

ಟಿಪ್ಪುಸುಲ್ತಾನ್‌ ಕೂಡ ಹೀರೋ. ಶೃಂಗೇರಿ ಮಠದ ಮೇಲೆ ದಾಳಿ ನಡೆದಾಗ ಉಳಿಸಿದ್ದು ಟಿಪ್ಪು ಎನ್ನುವುದನ್ನು ಟಿಪ್ಪು ವಿರೋಧಿ ಗಳು ಮರೆಯಬಾರದು. ಜಾತಿ- ಮತಕ್ಕಿಂತಲೂ ಪ್ರೀತಿ, ಸೌಹಾರ್ದತೆ ಮುಖ್ಯ. ಮಸೀದಿ, ಮಂದಿರ, ಚರ್ಚ್‌ಗಳನ್ನು ಕೆಡಹುವ ಬದಲು ಅಸಹಿಷ್ಣತೆಯನ್ನು ಮೊದಲು ಅಳಿಸಬೇಕು ಎಂದು ಪ್ರತಿಪಾದಿಸಿದರು.

Advertisement

ಸಾರ್ವಜನಿಕರೊಂದಿಗೆ ಸಂವಾದದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ. ಅರುಣ್‌, ಗಾಂಧಿ  ವೃತ್ತ ಸೇರಿದಂತೆ ನಗರ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಸಂಚಾರ ದಟ್ಟಣೆ ಹೆಚ್ಚಿದೆಯೋ ಅಂತಹ ಕಡೆಗಳಲ್ಲಿ ಸಮಸ್ಯೆ ಬಗೆಹರಿಸಲು ಶ್ರಮಿಸಿದ್ದೇವೆ. ಶಾಲೆಗಳ ಮುಂಭಾಗದಲ್ಲಿ ಟ್ರಾಫಿಕ್‌
ಸಮಸ್ಯೆ ಉಂಟಾಗದಂತೆ ಜಾಗ್ರತೆ ವಹಿಸುತ್ತೇವೆ. ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಯದಂತೆ ಪೊಲೀಸರು ಗಸ್ತು ತಿರುಗಿ ನಿಗಾ ವಹಿಸಲಿದ್ದಾರೆ ಎಂದರು.

ಆಟೊಗಳು, ದ್ವಿಚಕ್ರ ವಾಹನಗಳು ಹೆಚ್ಚು ಹೊಗೆ ಬರುವ ಸೈಲೆನ್ಸರ್‌ ಬಳಸುತ್ತಿವೆ. ಇದರಿಂದ ಪರಿಸರ ಮಾಲಿನ್ಯ ಹಾಗೂ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ.

ಈ ಕುರಿತು ಸಂಚಾರ ಪೊಲೀಸರಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಗರದೊಳಗೆ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದು, ಗಾಂಧಿ ವೃತ್ತ ಸೇರಿದಂತೆ ವಿವಿಧೆಡೆಗಳಲ್ಲಿ ದ್ವಿಚಕ್ರ ವಾಹನ ಸವಾರರಿಗೆ ವಾಹನ ತಿರುಗಿಸುವ ಸಂದರ್ಭದಲ್ಲಿ ತೊಂದರೆ ಆಗುತ್ತಿದೆ. ಹೊಳಲ್ಕೆರೆ ರಸ್ತೆ ಮಾರ್ಗದಿಂದ ಪ್ರಧಾನ ಅಂಚೆ ಕಚೇರಿ ಬಳಿ ತಿರುವು ಪಡೆಯುವ ವೇಳೆ ಜೋರಾಗಿ ಬರುವ ಕಾರಣ ಅನೇಕರು ಗಾಬರಿಗೆ ಒಳಗಾಗುತ್ತಾರೆ. ಆದ್ದರಿಂದ ವೇಗಕ್ಕೆ ಮಿತಿ ಹಾಕಲು ಕ್ರಮ ಕೈಗೊಳ್ಳಬೇಕು ಎಂದು ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಸುರೇಶ್‌ ರಾಜು ಮನವಿ ಮಾಡಿದರು.

ಆಟೊ ಚಾಲಕರು ಮನಬಂದಂತೆ ವಾಹನ ತಿರುಗಿಸುತ್ತಾರೆ. ಈ ಕುರಿತು ಆಟೋ
ಚಾಲಕರಿಗೆ ಎಚ್ಚರಿಕೆ ನೀಡಬೇಕು ಎಂದು ಮಹಿಳೆಯೊಬ್ಬರು ಎಸ್ಪಿಯವರ ಗಮನಕ್ಕೆ ತಂದರು. ಬಗೆಹರಿಸಬಹುದಾದ ಯಾವುದೇ ಸಮಸ್ಯೆಗಳಿದ್ದರೂ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಕೊಲೆ ಯತ್ನ, ಬೆದರಿಕೆ ಕರೆ ಸೇರಿ ಯಾವುದೇ ರೀತಿಯ ದೂರುಗಳಿದ್ದರೆ ಹತ್ತಿರದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಎಸ್‌ಪಿ ಡಾ| ಅರುಣ್‌ ಸೂಚಿಸಿದರು.

ಪಿ.ಎನ್‌. ಮೋಹನ್‌ ಕುಮಾರ್‌ ಗುಪ್ತ ಅಧ್ಯಕ್ಷತೆ ವಹಿಸಿದ್ದರು. ಆರ್ಯವೈಶ್ಯ ಸಂಘದ ಅಧ್ಯಕ್ಷ ಕಾಶಿ ವಿಶ್ವನಾಥ ಶೆಟ್ಟಿ, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ಎಲ್‌. ಸುರೇಶ್‌ರಾಜು, ಆರ್ಯವೈಶ್ಯ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಸುಜಾತಾ ಪ್ರಾಣೇಶ್‌, ವಾಸವಿ ಕ್ಲಬ್‌ ಅಧ್ಯಕ್ಷ ರಾಮಲಿಂಗ ಶೆಟ್ಟಿ ಇದ್ದರು. ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಭಾವಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next