ಚಿತ್ತಾಪುರ: ರವಿವಾರ ತಡರಾತ್ರಿ ಅಕ್ರಮ ಗೋವುಗಳ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ದಂತೆ ಸೋಮವಾರ ರಾತ್ರಿ ಕೆಲ ಕಿಡಿಗೇಡಿಗಳು ಜೀಪ್ ಒಂದಕ್ಕೆ ಬೆಂಕಿ ಹಚ್ಚಿ ಸುಟ್ಟಿದ್ದರಿಂದ ವಾತಾವರಣ ಮತ್ತಷ್ಟು ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಪಟ್ಟಣದಲ್ಲಿಯೇ ಬಿಡಾರ ಹೂಡಿದ್ದು, ಶಾಂತಿ ಕಾಪಾಡಲು ಸಹಕರಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ತಾಪುರ ಪಟ್ಟಣದಲ್ಲಿ ಇಲ್ಲಿವರೆಗೆ ಇಂತಹ ಘಟನೆಗಳು ನಡೆದಿಲ್ಲ ಮತ್ತು ಯಾವತ್ತೂ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದಿರುವ ಉದಾಹರಣೆಗಳಿಲ್ಲ. ಇಲ್ಲಿ ಎಲ್ಲ ಧರ್ಮದವರು ಸಹೋದರತೆ ಮತ್ತು ಸಮನ್ವಯತೆಯಿಂದ ಜೀವನ ಮಾಡುತ್ತಾರೆ ಎನ್ನುವ ಮಾಹಿತಿ ಇದೆ. ಹೀಗಾಗಿ ಚಿತ್ತಾಪುರಕ್ಕೆ ಒಳ್ಳೆ ಹೆಸರು ತರುವ ನಿಟ್ಟಿನಲ್ಲಿ ಸಾರ್ವಜನಿಕರು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು.
ಪಟ್ಟಣದಲ್ಲಿ ವಾತಾವರಣ ತೀವ್ರ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬೀಗಿ ಬಂದೋಬಸ್ತ್ ಮಾಡಲಾಗಿದೆ. ಭದ್ರತಾ ದೃಷ್ಠಿಯಿಂದ ಕೆಎಸ್‌ಆರ್‌ಪಿ 2, ಡಿಎಆರ್ 6, ಡಿಎಸ್‌ಪಿ 2, ಸಿಪಿಐ 9, ಪಿಎಸ್‌ಐ 13 ಸೇರಿದಂತೆ ಒಟ್ಟು 120 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.
ಪಟ್ಟಣದಲ್ಲಿ ಕಳೆದ ರವಿವಾರ ತಡರಾತ್ರಿ ನಡೆದ ಅಕ್ರಮ ಗೋವುಗಳ ಸಾಗಾಟಕ್ಕೆ ಸಂಬಂಧಿಸಿದಂತೆ ಎರಡು ಕೋಮುಗಳ ನಡುವೆ ಆದ ಘರ್ಷಣೆ ಪ್ರಕರಣ ಮತ್ತು ಸೋಮವಾರ ಮಧ್ಯರಾತ್ರಿ 3:30ಕ್ಕೆ ಸ್ಟೇಷನ್ ರಸ್ತೆಯಲ್ಲಿ ಇಸ್ಮಾಯಿಲ್ ಅವರಿಗೆಸೇರಿದ ಜೀಪ್‌ಗೆ ಬೆಂಕಿ ಹಚ್ಚಿ ಸುಟ್ಟ ಪ್ರಕರಣಗಳಲ್ಲಿ ಅನುಮಾನಸ್ಪದ ಕೆಲವರನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ವಷ್ಟ ಮಾಹಿತಿ ಮತ್ತು ಸಾಕ್ಷಿ ಕಲೆ ಹಾಕಲಾಗುತ್ತಿದೆ. ಹೀಗಾಗಿ ಯಾರನ್ನೂ ಇನ್ನೂ ಬಂಧಿಸಿಲ್ಲ ಎಂದು ತಿಳಿಸಿದರು.
ಈ ಘಟನೆಗಳು ಸೂಕ್ಷ್ಮವಾಗಿದೆ. ಇದರಲ್ಲಿ ಅಮಾಯಕರು ಇರಬಹುದು. ಹೀಗಾಗಿ ಸತ್ಯಾಸತ್ಯೆ ಪತ್ತೆ ಹಚ್ಚಿ ಇದರಲ್ಲಿ ಯಾರೂಭಾಗಿಯಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡು ಎಫ್‌ಐಆರ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ತಿಳಿಸಿದರು. ಚಿಂಚೋಳಿ ಡಿವೈಎಸ್‌ಪಿ ಅಕ್ಷಯ ಹಾಕೆ, ಶಹಾಬಾದ್ ಡಿವೈಎಸ್‌ಪಿ ಕೆ.ಬಸವರಾಜ, ಸೇಡಂ ಸಿಪಿಐ ಶಂಕರಗೌಡ ಪಾಟೀಲ ಇದ್ದರು.