ಚಿತ್ರದುರ್ಗ: ಅಂತರ್ಜಲ ಚೇತನ ಮತ್ತು ನರೇಗಾ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು ಪಿಡಿಒ, ತಾಪಂ, ಗ್ರಾಪಂ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಕೈಯಲ್ಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಆರ್ಟ್ ಆಫ್ ಲಿವಿಂಗ್ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿರುವ “ಅಂತರ್ಜಲ ಚೇತನ’ ಯೋಜನೆಗೆ ನಗರದ ಕಮ್ಮಾರೆಡ್ಡಿ ಸಮುದಾಯ ಭವನದಲ್ಲಿ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ಅಂತರ್ಜಲ ಮಟ್ಟ ಹೆಚ್ಚಿಸಲು ಯಾವುದೇ ಪ್ರಯತ್ನ ಮಾಡದೆ ಕೇವಲ ಕೊಳವೆಬಾವಿಗಳನ್ನು ಕೊರೆದು ಭೂಮಿಗೆ ಇಷ್ಟು ವರ್ಷಗಳ ಕಾಲ ಅನ್ಯಾಯ ಮಾಡಿದ್ದೇವೆ. ಆ ತಪ್ಪನ್ನು ಸರಿಪಡಿಸಲು ಇದು ಸಕಾಲ. ಹಳ್ಳಿಗಳಲ್ಲಿ ನರೇಗಾದಡಿ ಅಂತರ್ಜಲ ಕಾರ್ಯಕ್ರಮಗಳನ್ನು ಯಶಸ್ವಿ ಮಾಡಬೇಕಿದೆ ಎಂದರು. ಕೂಲಿ ಕಾರ್ಮಿಕರಿಗೆ ನರೇಗಾದಡಿ ದಿನಕ್ಕೆ 275 ರೂ. ಕೂಲಿ ಹಣ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರು ಸ್ಥಳೀಯವಾಗಿಯೇ ಹೆಚ್ಚೆಚ್ಚು ಕೂಲಿ ಕೆಲಸ ಮಾಡಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಸಂಸದ ಎ. ನಾರಾಯಣಸ್ವಾಮಿ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದಿದೆ. ಇದರಿಂದಾಗಿ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ ತಾಲೂಕುಗಳಲ್ಲಿ ಫ್ಲೋರೈಡ್‌ಯುಕ್ತ ನೀರು ಸಿಗುತ್ತಿದೆ. ಫ್ಲೋರೈಡ್ ಅಂಶ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ. ಇಂತಹ ಸನ್ನಿವೇಶದಲ್ಲಿ ಅಂತರ್ಜಲ ಚೇತನ ಯೋಜನೆಯಿಂದ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಸುಧಾರಣೆಯಾಗಿ ಫ್ಲೋರೈಡ್‌ನಿಂದ ಜಿಲ್ಲೆ ಮುಕ್ತಿ ಹೊಂದಲು ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಡ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವ ನರೇಗಾ ಯೋಜನೆಗೆ ಈ ವರ್ಷ 1 ಲಕ್ಷ ಕೋಟಿ ರೂ. ಅನುದಾನವನ್ನು ದೇಶದಲ್ಲಿ ಮೀಸಲಿಡಲಾಗಿದೆ. ಈ ಯೋಜನೆಯಡಿ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಯೋಜನೆಯಲ್ಲಿ ಇರುವ ಅವಕಾಶಗಳ ಬಗ್ಗೆ ಪಿಡಿಒಗಳು, ಕಂದಾಯ ಅ ಧಿಕಾರಿಗಳು, ಎನ್‌ಜಿಒ, ಸಂಘ ಸಂಸ್ಥೆಗಳು ವ್ಯಾಪಕ ಪ್ರಚಾರ ನೀಡಬೇಕು ಎಂದು ತಿಳಿಸಿದರು.
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ನಗರಾಭಿವೃದ್ಧಿ ಇಲಾಖೆ ಸಚಿವ ಬೈರತಿ ಬಸವರಾಜ್, ಶಾಸಕರಾದ ಎಂ. ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್, ಟಿ. ರಘುಮೂರ್ತಿ, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ತಾಪಂ ಅಧ್ಯಕ್ಷ ಲಿಂಗರಾಜು ಉಪಸ್ಥಿತರಿದ್ದರು. ಜಿಪಂ ಸಿಇಒ ಟಿ. ಯೋಗೇಶ್ ಸ್ವಾಗತಿಸಿದರು.