Advertisement

ವಾಯುಮಾಲಿನ್ಯ ನಿಯಂತ್ರಣಕ್ಕೆ ಸಹಕರಿಸಿ

04:56 PM Nov 08, 2019 | Naveen |

ಚಿತ್ರದುರ್ಗ: ಪ್ರತಿ ಜೀವಿಗೂ ಉಸಿರಾಡಲು ಶುದ್ಧ ಗಾಳಿಯ ಅಗತ್ಯವಿದ್ದು, ಗಾಳಿಯೇ ಮಲೀನವಾದರೆ ಮನುಕುಲಕ್ಕೆ ಉಳಿಗಾಲವಿಲ್ಲ. ಹೀಗಾಗಿ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಜಿಲ್ಲಾ ಪರಿಸರ ಅಧಿಕಾರಿ ಬಿ.ಎಸ್‌. ಮುರಳೀಧರ್‌ ಹೇಳಿದರು.

Advertisement

ಸಾರಿಗೆ ಇಲಾಖೆ ವತಿಯಿಂದ ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮಕ್ಕೆ ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಕ್ಕೆ ಚಾಲನೆ ನೀಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಗ್ರಾಮೀಣ ಪ್ರದೇಶಗಳನ್ನು ಹೊರತುಪಡಿಸಿ, ನಗರ ಮತ್ತು ಪಟ್ಟಣಗಳಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಾರ್ಖಾನೆ ಹಾಗೂ ವಾಹನಗಳು ವಾಯು ಮಾಲಿನ್ಯಕ್ಕೆ ಹೆಚ್ಚು ಕಾರಣವಾಗುತ್ತಿವೆ. ನಗರಗಳಲ್ಲಿ ಅತಿಹೆಚ್ಚು ವಾಹನಗಳು ಬಳಕೆಯಾಗುತ್ತಿದ್ದು, ಇದರಿಂದ ಹೊರಬರುವ ಮಲೀನ ಗಾಳಿ ಜನರ ಆರೋಗ್ಯದ ಮೇಲೆ ಭೀಕರ ಪರಿಣಾಮ ಬೀರುತ್ತಿದೆ ಎಂದರು.

ಆರೋಗ್ಯ ಉಸಿರಾಡುವ ಗಾಳಿ ಮತ್ತು ಆಹಾರದ ಗುಣಮಟ್ಟವನ್ನು ಅವಲಂಬಿಸಿದೆ. ಮನುಕುಲದ ಭವಿಷ್ಯದ ದೃಷ್ಟಿಯಲ್ಲಿ ವಾಯು ಮಾಲಿನ್ಯವನ್ನು ತಡೆಗಟ್ಟುವುದು ಅತ್ಯಗತ್ಯವಾಗಿದೆ. ವಾಹನಗಳನ್ನು ಹೈಡ್ರೋಕಾರ್ಬನ್‌ ಆಧಾರಿತ ಪೆಟ್ರೋಲ್‌ ಹಾಗೂ ಡೀಸೆಲ್‌ ಇಂಧನವನ್ನು ದಹಿಸಿಯೇ ಚಾಲನೆ ಮಾಡುವ ಕಾರಂ ಪರಿಸರದಲ್ಲಿ ಹೆಚ್ಚು ಮಾಲಿನ್ಯ ಉಂಟಾಗುತ್ತಿದೆ ಎಂದು ಹೇಳಿದರು.

ಪೆಟ್ರೋಲ್‌ ಹಾಗೂ ಡೀಸೆಲ್‌ ಇಂಧನಗಳು ಭವಿಷ್ಯದಲ್ಲಿ ಒಂದಲ್ಲ ಒಂದು ದಿನ ಬರಿದಾಗುವ ಇಂಧನ ಮೂಲಗಳಾಗಿವೆ. ಪರಿಸರ ಹಾಗೂ ಶಬ್ದ ಮಾಲಿನ್ಯ ರಹಿತವಾಗಿರುವ ವಿದ್ಯುತ್‌ ಚಾಲಿತ ವಾಹನಗಳ ಬಳಕೆಗೆ ಸರ್ಕಾರ ಉತ್ತೇಜನ ನೀಡುತ್ತಿದೆ. ಹೀಗಾಗಿ ಇದರ ಬಳಕೆ ದಿನದಿಂದ ದಿನಕ್ಕೆ ಪ್ರಚಾರ ಪಡೆಯುತ್ತಿವೆ. ಜಿಲ್ಲೆಯಲ್ಲಿಯೂ ಮುಂದಿನ ದಿನಗಳಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಬಳಕೆ ಹೆಚ್ಚಲಿದ್ದು, ಸಾರ್ವಜನಿಕರೂ ಪರಿಸರ ಉಳಿಸುವ ನಿಟ್ಟಿನಲ್ಲಿ ಸರ್ಕಾರದ ನೀತಿಗಳಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

Advertisement

ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್‌. ಹೆಗಡೆ ಅವರು ಮಾತನಾಡಿ, ಪೆಟ್ರೋಲ್‌ ಹಾಗೂ ಡೀಸೆಲ್‌ ಇಂಧನ ಬಳಕೆಯ ವಾಹನಗಳಿಂದಾಗುವ ಕೆಟ್ಟ ಪರಿಣಾಮ ಗಮನಿಸಿ ಕಡಿಮೆ ಪ್ರಮಾಣದ ಮಾಲಿನ್ಯ ಮಾಡುವ ವಾಹನಗಳನ್ನು ತಯಾರಿಸಲು ಸರ್ಕಾರ ವಾಹನ ಕಂಪನಿಗಳಿಗೆ ಮಾನದಂಡ ನಿಗದಿಪಡಿಸಿದೆ. ಈ ದಿಸೆಯಲ್ಲಿ ಮುಂಬರುವ 2020ರ ಏಪ್ರಿಲ್‌ 01ರಿಂದ ಬಿಎಸ್‌ 06 ವಾಹನಗಳಿಗೆ ಮಾತ್ರ ನೋಂದಣಿಗೆ ಅವಕಾಶವಾಗುವಂತೆ ನಿಯಮಗಳನ್ನು ಸರ್ಕಾರ ಪ್ರಕಟಿಸಿದೆ. ಕೇವಲ ಕಾನೂನಿನಿಂದ ಮಾತ್ರ ಪರಿಸರ ಉಳಿಸಲು ಸಾಧ್ಯವಿಲ್ಲ. ಸಾರ್ವಜನಿಕರೂ ಕೂಡ ಸ್ವಯಂ ಪ್ರೇರಣೆಯಿಂದ ಪರಿಸರ ಉಳಿಸಲು ಮುಂದಾಗಬೇಕು ಎಂದರು.

ತಮ್ಮ ವಾಹನಗಳನ್ನು ಆದಷ್ಟು ಸುಸ್ಥಿತಿಯಲ್ಲಿಟ್ಟು ಕೊಳ್ಳಬೇಕು. ಎಲ್‌ಪಿಜಿ ಹಾಗೂ ಸಿಎನ್‌ಜಿ ಕೂಡ ಪರಿಸರ ಸ್ನೇಹಿ ವಾಹನ ಬಳಕೆ ಇಂಧನವಾಗಿದೆ. ದೇಶದಲ್ಲಿ ಶೇ.70ರಷ್ಟು ಪರಿಸರ ಮಾಲಿನ್ಯ ವಾಹನಗಳಿಂದ ಹೊರಸೂಸುವ ಹೊಗೆಯಿಂದಲೇ ಆಗುತ್ತಿದೆ. ಹೀಗಾಗಿ ವಿಷಯುಕ್ತ ಗಾಳಿ ಉಸಿರಾಡುವ ಸ್ಥಿತಿ ಬರುತ್ತಿದೆ. ರಾಜ್ಯದಲ್ಲಿ ಬೇರೆ ಜಿಲ್ಲೆಗಳಿಗೆ ಹೋಲಿಸಿದಾಗ ಚಿತ್ರದುರ್ಗ ಜಿಲ್ಲೆಯಲ್ಲಿ ವಾಹನಗಳ ಸಂಖ್ಯೆ ಕಡಿಮೆ ಇದೆ. ಇಲ್ಲಿ ಕೇವಲ ಸುಮಾರು 20 ಸಾವಿರ ಕಾರುಗಳು ಮಾತ್ರ ಇದ್ದು, ಟ್ರ್ಯಾಕ್ಟರ್‌ಗಳ ಸಂಖ್ಯೆ ಹೆಚ್ಚಿದೆ. ಮಾಲಿನ್ಯ ರಹಿತ ವಿದ್ಯುತ್‌ ಚಾಲಿತ ವಾಹನಗಳ ಬಳಕೆಗೆ ಸರ್ಕಾರ ಉತ್ತೇಜನ ನೀಡುತ್ತಿದ್ದು, ಈ ವಾಹನಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಜಿಲ್ಲೆಯಲ್ಲಿ ಸದ್ಯ ಮೊಳಕಾಲ್ಮೂರು ಮತ್ತು ಹೊಳಲ್ಕೆರೆಯಲ್ಲಿ ಮಾತ್ರ ವಾಯುಮಾಲಿನ್ಯ ತಪಾಸಣೆ ಕೇಂದ್ರಗಳಿಲ್ಲ. ಯಾರಾದರೂ ಸ್ಥಾಪಿಸಲು ಮುಂದಾದರೆ ಸಹಕಾರ ನೀಡಲಾಗುವುದು ಎಂದರು.

ಹಿರಿಯ ಮೋಟಾರು ವಾಹನ ನಿರೀಕ್ಷಕ ಕರುಣಾಕರ್‌ ಮಾತನಾಡಿ, ವಾಯುಮಾಲಿನ್ಯ ಹೆಚ್ಚಳದಿಂದ ಅಸ್ತಮಾ, ಚರ್ಮರೋಗಗಳು ಬರುತ್ತವೆ. ಪರಿಸರ ಮಾಲಿನ್ಯ ನಿಯಂತ್ರಣ ಎಲ್ಲರ ಕರ್ತವ್ಯವಾಗಿದೆ. ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮ ಅಂಗವಾಗಿ ನವೆಂಬರ್‌ ತಿಂಗಳಿನಲ್ಲಿ ವಾಹನಗಳ ವಿಶೇಷ ತಪಾಸಣೆ ನಡೆಸಲಾಗುವುದು. ವಾಹನಗಳ ಮಾಲೀಕರು ಮತ್ತು ಚಾಲಕರು ವಾಹನಗಳ ತಪಾಸಣೆ ಸಮಯದಲ್ಲಿ ವಾಹನದ ದಾಖಲಾತಿಗಳು ಅಲ್ಲದೆ ವಾಯುಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಹಾಜರುಪಡಿಸಿ, ತನಿಖೆಗೆ ಸಹಕರಿಸಬೇಕು ಎಂದರು.

ಜಿಲ್ಲೆಯ ಖಾಸಗಿ ಬಸ್‌ ಮಾಲೀಕರ ಸಂಘದ ಕಾರ್ಯದರ್ಶಿ ಜಿ.ವಿ. ಶೇಖರ್‌ ಮಾತನಾಡಿ, ಈಗಾಗಲೆ ದೆಹಲಿಯಲ್ಲಿ ಮಾಲಿನ್ಯ ಹೆಚ್ಚಳದಿಂದ ಜನರು ಉಸಿರಾಡಲು ಕಷ್ಟಪಡುವ ಸ್ಥಿತಿ ಇದೆ. ಇದನ್ನು ನಿಯಂತ್ರಿಸದಿದ್ದರೆ ಹೋದರೆ, ಇಡೀ ದೇಶಕ್ಕೆ ಈ ಪರಿಸ್ಥಿತಿ ಬರುವ ದಿನಗಳು ದೂರವಿಲ್ಲ ಎಂದರು.

ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಗಳ ಪ್ರದರ್ಶನ ಏರ್ಪಡಿಸಲಾಗಿತ್ತು. “ವಿದ್ಯುತ್‌ ವಾಹನ ಬಳಸಿ-ಪರಿಸರ ಉಳಿಸಿ’ ಕುರಿತ ಕರ ಪತ್ರವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ವಾರ್ತಾ ಇಲಾಖೆಯ ತುಕಾರಾಂರಾವ್‌, ಮೋಟಾರು ವಾಹನ ನಿರೀಕ್ಷಕ ರಾಕೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next