Advertisement

ಕಿರು ಮೃಗಾಲಯ ಅಭಿವೃದ್ಧಿಗೆ 3 ಕೋಟಿ ವೆಚ್ಚ

11:56 AM Sep 01, 2019 | Naveen |

ಚಿತ್ರದುರ್ಗ: ಆಡುಮಲ್ಲೇಶ್ವರ ಕಿರು ಮೃಗಾಲಯವನ್ನು ಉನ್ನತೀಕರಿಸಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವಂತೆ ಮಾಡಲು 3 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ತಿಳಿಸಿದರು.

Advertisement

ಶನಿವಾರ ನಡೆದ ಆಡುಮಲ್ಲೇಶ್ವರ ಕಿರು ಮೃಗಾಲಯದ ನೂತನ ಆವರಣಗಳ ಉದ್ಘಾಟನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆಡುಮಲ್ಲೇಶ್ವರ ಕಿರು ಮೃಗಾಲಯದ ಹೊಸ ಆವರಣಗಳ ಕಾಮಗಾರಿ ಶೇ. 80 ರಷ್ಟು ಪೂರ್ಣಗೊಂಡಿದೆ. ಮೈಸೂರು ಮೃಗಾಲಯದ ಮಾದರಿಯಲ್ಲಿ ಇಲ್ಲಿಯೂ ಸಹ ಅಭಿವೃದ್ಧಿಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಪ್ರಾಣಿ, ಪಕ್ಷಿಗಳನ್ನು ತಂದು ಇಲ್ಲಿಡಲಾಗುವುದು. ಬರದ ಜಿಲ್ಲೆಯಾಗಿರುವುದರಿಂದ ಇಲ್ಲಿನ ಜನರಿಗೆ ಜಿಲ್ಲೆಯಲ್ಲಿಯೇ ಆಕರ್ಷಕ ತಾಣಗಳು, ಪ್ರಕೃತಿಯನ್ನು ಸವಿಯುವ ಪ್ರದೇಶಗಳನ್ನು ಇನ್ನಷ್ಟು ಆಕರ್ಷಣೀಯವಾಗುವಂತೆ ಮಾಡಲಾಗುವುದು ಎಂದರು.

ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ನಗರದಿಂದ ಬರಲು, ಸಾರಿಗೆ ವ್ಯವಸ್ಥೆ ಹಾಗೂ ಪಾದಚಾರಿ ಮಾರ್ಗ, ದ್ವಿಚಕ್ರ ವಾಹನಗಳಿಗೆ ಅನುಕೂಲವಾಗುವಂತೆ ಸೂಕ್ತ ರಸ್ತೆ ನಿರ್ಮಾಣ ಮಾಡಲಾಗುವುದು. ಆಡುಮಲ್ಲೇಶ್ವರ ಕಿರು ಮೃಗಾಲಯವನ್ನು ಇನ್ನಷ್ಟು ಸುಂದರ ತಾಣವಾಗಿಸಲು, ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಭಿವೃದ್ಧಿಗಾಗಿ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ, ಶಾಸಕರು, ಸಂಸದರು, ವಿಧಾನ ಪರಿಷತ್‌ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಡಿ ಅನುದಾನ ಒದಗಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ ಮಾತನಾಡಿ, ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ವಯ ಮೃಗಾಲಯದಲ್ಲಿ ಸ್ಥಳೀಯ ಪ್ರಾಣಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಸ್ಥಳೀಯ ಪ್ರಾಣಿಗಳಾದ ಚಿರತೆ, ಜಿಂಕೆ, ಕರಡಿ, ಕತ್ತೆಕಿರುಬಗಳ ಜತೆಗೆ ಅಭಿವೃದ್ಧಿಪಡಿಸಿದ ನಂತರ ಹುಲಿಗಳನ್ನು ಕರೆತರಲಾಗುವುದು ಎಂದು ತಿಳಿಸಿದರು.

ಕಿರು ಮೃಗಾಲಯದಲ್ಲಿ ಸದ್ಯ 5 ಆವರಣಗಳನ್ನು ನಿರ್ಮಿಸಿದ್ದು, ಮುಂದಿನ ದಿನಗಳಲ್ಲಿ ಆವರಣಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಇಲ್ಲಿನ ಕೋಟೆ ಸಾಂಸ್ಕೃತಿಕ ಪರಂಪರೆಯ ತಾಣವಾಗಿದ್ದು, ಇದರ ಜೊತೆಗೆ ಪ್ರವಾಸಿಗರನ್ನು ಆಕರ್ಷಿಸುವಂತೆ ಹಾಗೂ ಪ್ರಾಣಿ-ಪಕ್ಷಿಗಳ ಬಗ್ಗೆ ಅರಿವು ಮೂಡಿಸಲು ಶೈಕ್ಷಣಿಕ ವಾತಾವರಣವನ್ನು ಕಿರು ಮೃಗಾಲಯದಲ್ಲಿ ಕಲ್ಪಿಸಲಾಗುವುದು. ಹೆಚ್ಚಿನ ಅನುದಾನ ಸಂಗ್ರಹವಾಗುವ ಮೃಗಾಲಯದಿಂದ ಅನುದಾನ ಹಂಚಿಕೆಗೆ ಅವಕಾಶವಿದ್ದು, ಬನ್ನೇರುಘಟ್ಟ ವನ್ಯಧಾಮದ ಅನುದಾನದಲ್ಲಿ ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ 3 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಶೌಚಾಲಯ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್‌, ವಿಧಾನ ಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌, ಜಿಪಂ ಸಿಇಒ ಸತ್ಯಭಾಮ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಎಸ್‌. ರಾಘವೇಂದ್ರ ರಾವ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next