Advertisement

ಬರದ ನಾಡಿನಲ್ಲಿ ಮಳೆಯೋ ಮಳೆ!

01:24 PM Oct 23, 2019 | |

ಚಿತ್ರದುರ್ಗ: ಕಂಡು ಕೇಳರಿಯದ ಮಳೆಗೆ ಹೊಸದುರ್ಗ, ಚಿತ್ರದುರ್ಗ, ಹಿರಿಯೂರು ಮತ್ತು ಹೊಳಲ್ಕೆರೆ ತಾಲೂಕುಗಳು ತತ್ತರಿಸಿವೆ. ಭಾನುವಾರದಿಂದ ಸೋಮವಾರ ರಾತ್ರಿವರೆಗೆ ಜಿಲ್ಲೆಯಲ್ಲಿ 546 ಮನೆಗಳು ಜಖಂಗೊಂಡಿದ್ದು, 80 ಲಕ್ಷ ರೂ. ನಷ್ಟವಾಗಿದೆ. ಹೊಸದುರ್ಗ ತಾಲೂಕಿನ ಕಂಠಾಪುರ ಹಾಗೂ ದೇವಪುರ ಕಾಲೋನಿಗೆ ನೀರು ನುಗ್ಗಿದೆ. ಪೀಲಾಪುರ, ನೀರಗುಂದ, ಮಳಲಿ ಗ್ರಾಮಗಳು ಜಲಾವೃತವಾಗಿವೆ.

Advertisement

ಕಳೆದ ಎರಡು ದಿನಗಳಿಂದ ರಾತ್ರಿಯಾಗುತ್ತಿದ್ದಂತೆ ಆರಂಭವಾಗುವ ಮಳೆರಾಯ ಬೆಳಗಾಗುವ ಹೊತ್ತಿಗೆ ಎಲ್ಲಿ ಯಾವ ಅನಾಹುತ ಸೃಷ್ಟಿ ಮಾಡುತ್ತಾನೋ ಎಂಬ ಆತಂಕದಲ್ಲೇ ನಿದ್ದೆಗೆ ಜಾರುವ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. 1933 ರಲ್ಲಿ ವಾಣಿವಿಲಾಸ ಸಾಗರ ತುಂಬಿ ಕೋಡಿ ಹರಿದಿತ್ತು. ಅಲ್ಲಿಂದ ಈಚೆಗೆ ಆಗಾಗ ಒಂದಿಷ್ಟು ನೀರು ಹರಿದಿದೆ. ಈಗ ಮತ್ತೆ ಅಂಥದ್ದೇ ದಿನಗಳು ನಮ್ಮ ಕಣ್ಣ ಮುಂದಿವೆ. ಎರಡೇ ದಿನದಲ್ಲಿ ವಿವಿ ಸಾಗರ ನೀರಿನ ಮಟ್ಟ ಬರೋಬ್ಬರಿ 14 ಅಡಿ ಹೆಚ್ಚಾಗಿದೆ. ಮಂಗಳವಾರ ಸಂಜೆ 6 ಗಂಟೆ ಹೊತ್ತಿಗೆ 84.50 ಅಡಿಗೆ ನೀರು ಬಂದಿತ್ತು. ಇನ್ನೂ ದೊಡ್ಡಮಟ್ಟದಲ್ಲಿ ನೀರಿನ ಹರಿವು ಇರುವುದರಿಂದ 90ಕ್ಕೆ ಮುಟ್ಟುವುದರಲ್ಲಿ ಅನುಮಾನವಿಲ್ಲ.

ಮಳೆ ಹೆಚ್ಚಾದರೆ 100 ಅಡಿಯೂ ಆಗಬಹುದು. ಇನ್ನು ವೇದಾವತಿ ನದಿ ಸದಾ ನೀರಿಲ್ಲದ ನದಿ. ಮರಳು ತೆಗೆಯಲು ಮಾತ್ರ ಇರುವಂಥದ್ದು ಎನ್ನುವ ಮಾತಿತ್ತು. ಈಗ ಮಲೆನಾಡುಗಳಲ್ಲಿ ಹರಿಯುವ ನದಿಯಂತೆ ವೇದಾವತಿಗೆ ಜೀವಕಳೆ ಬಂದಿದೆ. ಮೈದುಂಬಿ ಹರಿಯುತ್ತಾ ಅಕ್ಕಪಕ್ಕದ ರೈತರಿಗೂ ಕೆಣಕುತ್ತಾ ಸಾಗುತ್ತಿದ್ದಾಳೆ ತಾಯಿ ವೇದಾವತಿ. ವಾಣಿ ವಿಲಾಸ ಸಾಗರ ಒಮ್ಮೆ 100 ಅಡಿ ತಲುಪಿದರೆ ಮೂರ್‍ನಾಲ್ಕು ವರ್ಷ ಹಿರಿಯೂರು, ಹೊಸದುರ್ಗ, ಚಿತ್ರದುರ್ಗ ಹಾಗೂ ಹೊಳಲ್ಕೆರೆಯ ಕೆಲ ಭಾಗದ ರೈತರಿಗೆ ಅನುಕೂಲವಾಗಲಿದೆ.

ಅಂತರ್ಜಲ ವೃದ್ಧಿಯಾಗಲಿದೆ. ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ವೇದಾವತಿ ಹರಿಯುವ ಮಾರ್ಗದಲ್ಲೂ ಇದೇ ರೀತಿಯಲ್ಲಿ ರೈತರಿಗೆ ಅನುಕೂಲ ಆಗಲಿದೆ.

ಬದುಕಿಗೆ ಬರೆ ಎಳೆದ ಮಳೆ: ಎಂದೆಂದೂ ನೋಡದಂಥ ಮಳೆ ಬಂತು. ಕೆರೆ, ಕಟ್ಟೆ ತುಂಬಿದವು. ಇನ್ನು ನಮ್ಮ ಬದುಕು ಹಚ್ಚ ಹಸಿರಾಗಲಿದೆ ಎಂದು ಖುಷಿಯಾಗಿದ್ದ ರೈತರಿಗೆ ವಿಪರೀತವಾದ ಮಳೆಯ ಹೊಡೆತ ಕೆರೆ, ಕಟ್ಟೆಗಳನ್ನು ಒಡೆದು ಹಾಕಿ ಬದುಕಿಗೆ ಬರೆ ಎಳೆದಂತಾಗಿದೆ.

Advertisement

ಬರೋಬ್ಬರಿ 546 ಹೆಕ್ಟೇರ್‌ ಪ್ರದೇಶದ ಹೊಸದುರ್ಗ ತಾಲೂಕಿನ ನೀರಗುಂದ ಕೆರೆ ಅಪರೂಪಕ್ಕೆ ಭರ್ತಿಯಾಗಿ ಕೋಡಿ ಬಿದ್ದಿತ್ತು. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಮಂಗಳವಾರ ಬೆಳಗ್ಗೆ ಕೆರೆಯ ಏರಿ ಒಡೆದು ಅಪಾರ ಪ್ರಮಾಣದ ನೀರು ಹರಿದು ಹಳ್ಳ ಸೇರಿತು. ಸುಮಾರು 20ಕ್ಕಿಂತ ಹೆಚ್ಚು ಹಳ್ಳಿಯ ಅಂತರ್ಜಲ ಮೂಲವಾಗಿದ್ದ ಕೆರೆಯ ನೀರು ಹರಿಯುವುದನ್ನು ನೋಡಿ ರೈತರು ಕಂಗಾಲಾಗಿದ್ದಾರೆ.

ಭಾರೀ ಪ್ರಮಾಣದಲ್ಲಿ ಕೆರೆಯ ನೀರು ಹೊರಗೆ ಪರಿಣಾಮ ತೆಂಗಿನ ತೋಟದ ಮಣ್ಣು ಕೊಚ್ಚಿ ಹೋಗಿದೆ. ಮುಂದಿನ ಜೋಳ, ಈರುಳ್ಳಿ, ಹತ್ತಿ ಸೇರಿದಂತೆ ಸಾಕಷ್ಟು ಬೆಳಗಳಿಗೆ ಹಾನಿಯಾಗಿದೆ. ಇದರ ಜತೆಗೆ ಕಡದಿನಕೆರೆ, ಆದ್ರಿಕಟ್ಟೆ ಕೆರೆಗಳು ಕೂಡ ಒಡೆದಿದ್ದರಿಂದ ಬೆಳೆ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next