Advertisement

ಸಿಇಟಿ ಪರೀಕ್ಷೆ ಯಶಸ್ವಿಗೊಳಿಸಿ: ವಿನೋತ್‌ ಪ್ರಿಯಾ

05:44 PM Apr 26, 2019 | Team Udayavani |

ಚಿತ್ರದುರ್ಗ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆ ಏ. 29 ಮತ್ತು 30 ರಂದು ಜಿಲ್ಲೆಯ 8 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, 3849 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪರೀಕ್ಷೆಯನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಸೂಚನೆ ನೀಡಿದರು.

Advertisement

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ಅತ್ಯಂತ ಪ್ರಮುಖ ಘಟ್ಟವಾಗಿದೆ. ಸಿಇಟಿ ಪರೀಕ್ಷೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದವರು, ಅರ್ಜಿ ಪ್ರಕ್ರಿಯೆ ಆನ್‌ಲೈನ್‌ನಲ್ಲಿ ಪೂರ್ಣಗೊಂಡಿದೆಯೇ ಇಲ್ಲವೇ ಎಂಬುದನ್ನು ಮೊದಲೇ ವಿದ್ಯಾರ್ಥಿಗಳು ಖಚಿತಪಡಿಸಿಕೊಳ್ಳಬೇಕು. ಈ ಕುರಿತು ಆಯಾ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ತಿಳಿಸಬೇಕು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಮರ್ಪಕ ಆಸನದ ವ್ಯವಸ್ಥೆ, ಗಾಳಿ, ಬೆಳಕಿನ ವ್ಯವಸ್ಥೆ ಇರಬೇಕು. ಬೇಸಿಗೆಯ ಕಾಲವಾಗಿರುವುದರಿಂದ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದರು.

ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಅವಧಿಯೊಳಗೆ ಪ್ರಶ್ನೆಪತ್ರಿಕೆ ತಲುಪಿಸಿ ಪರೀಕ್ಷೆಯ ನಂತರ ಉತ್ತರಪತ್ರಿಕೆಗಳನ್ನು ಪುನಃ ಖಜಾನೆಗೆ ಠೇವಣಿ ಮಾಡುವ ಜವಾಬ್ದಾರಿಯನ್ನು ಹಿರಿಯ ಅಧಿಕಾರಿಗಳಿಗೆ ವಹಿಸಲಾಗಿದೆ. ಈ ಸಂದರ್ಭದಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್ ಮಾಡಲಾಗುವುದು. ಜಿಲ್ಲಾಡಳಿತದ ವತಿಯಿಂದ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರನ್ನು ನೇಮಿಸಲಾಗಿದೆ. ಸಿಇಟಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಅದಲು ಬದಲು ಆಗದಂತೆ ಇಲಾಖೆ ನಿಗದಿಪಡಿಸಿದ ಶ್ರೇಣಿ ಪ್ರಕಾರವೇ ವಿದ್ಯಾರ್ಥಿಗಳಿಗೆ ನೀಡಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗಳಿಗೆ 10 ನಿಮಿಷ ಮುಂಚಿತವಾಗಿ ಆಗಮಿಸಬೇಕು. ಪರೀಕ್ಷಾ ಕೇಂದ್ರದೊಳಗೆ ಯಾವುದೇ ಬಗೆಯ ಲಾಗ್‌ ಟೇಬ;್ಸ, ಮೊಬೈಲ್, ಸ್ಮಾರ್ಟ್‌ ವಾಚ್, ವೈರ್‌ಲೆಸ್‌, ಕ್ಯಾಲ್ಕುಲೇಟರ್‌ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರದ 200 ಮೀಟರ್‌ ವ್ಯಾಪ್ತಿ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು. ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಶೋಭಾ ಮಾತನಾಡಿ, ಏ. 29 ರಂದು ಬೆಳಿಗ್ಗೆ 10:30 ರಿಂದ 11:50 ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2:30 ರಿಂದ 3:50 ರವರೆಗೆ ಗಣಿತ ವಿಷಯದ ಪರೀಕ್ಷೆ ನಡೆಯಲಿದೆ. ಏ. 30 ರಂದು ಬೆಳಿಗ್ಗೆ 10:30 ರಿಂದ 11:50 ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2:30 ರಿಂದ 3-50 ರವರೆಗೆ ರಸಾಯನಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ. ಪ್ರತಿ ವಿಷಯಕ್ಕೂ 60 ಅಂಕಗಳಿರುತ್ತವೆ. ಜಿಲ್ಲಾ ಖಜಾನೆಯಲ್ಲಿ ಸಿಇಟಿ ಪರೀಕ್ಷಾ ಪ್ರಶ್ನೆಪತ್ರಿಕೆ ಮತ್ತು ಉತ್ತರಪತ್ರಿಕೆಗಳನ್ನು ಖಜಾನೆಯಲ್ಲಿಡಲು ‘ಎ’ ಗುಂಪಿನ ಅಧಿಕಾರಿ ಹಾಗೂ ಖಜಾನೆಯಿಂದ ಪ್ರಶ್ನೆಪತ್ರಿಕೆ ವಿತರಿಸಲು ಮತ್ತು ಉತ್ತರಪತ್ರಿಕೆ ವಾಪಸ್‌ ತರಲು ಪ್ರತಿ ನಾಲ್ಕು ಕೇಂದ್ರಗಳಿಗೆ ಒಬ್ಬರಂತೆ ‘ಬಿ’ ಗುಂಪಿನ ಇಬ್ಬರು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್‌, ತಹಶೀಲ್ದಾರ್‌ ನಜೀದಾ, ಪ್ರೊಬೆಷನರಿ ಐಎಎಸ್‌ ಅಧಿಕಾರಿ ಡಾ| ನಂದಿನಿ, ಡಿಡಿಪಿಐ ಅಂಥೋನಿ, ಡಯಟ್ ಹಿರಿಯ ಉಪನ್ಯಾಸಕ ರಮೇಶ್‌, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಹಾಗೂ ಇತರೆ ಅಧಿಕಾರಿಗಳು ಇದ್ದರು.

ಪರೀಕ್ಷಾ ಕೇಂದ್ರಗಳಿವು
ಚಿತ್ರದುರ್ಗದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 600 ವಿದ್ಯಾರ್ಥಿಗಳು, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 609 ವಿದ್ಯಾರ್ಥಿಗಳು, ಎಸ್‌.ಜೆ.ಎಂ ಪದವಿಪೂರ್ವ ಕಾಲೇಜು-500, ಬೃಹನ್ಮಠ ಪದವಿಪೂರ್ವ ಕಾಲೇಜು-480, ಡಾನ್‌ ಬಾಸ್ಕೋ ಪದವಿಪೂರ್ವ ಕಾಲೇಜು-400, ಮಹಾರಾಣಿ ಪದವಿಪೂರ್ವ ಕಾಲೇಜು-400, ಕೆ.ಎಂ.ಎಸ್‌ ಪದವಿಪೂರ್ವ ಕಾಲೇಜು-340 ಹಾಗೂ ಎಸ್‌.ಆರ್‌.ಎಸ್‌ ಪದವಿಪೂರ್ವ ಕಾಲೇಜಿನಲ್ಲಿ 520 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಶೋಭಾ ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next