Advertisement

Yakshagana: ದಂಪತಿಗಳ ಅದ್ಭುತ ಮೋಡಿಯ ಯುಗಳ ಯಕ್ಷ ರೂಪಕ “ಚಿತ್ರ ಫಲ್ಗುಣ”

12:26 PM Oct 18, 2023 | Team Udayavani |

ಯಕ್ಷಗಾನ ಪ್ರದರ್ಶನದಲ್ಲಿ ನಿಜ ಜೀವನದ ಗಂಡ, ಹೆಂಡತಿ ಮತ್ತು ಮಗಳು ಸೇರಿ ಒಂದು ಪ್ರಸಂಗವನ್ನು ವೇದಿಕೆಯ ಮೇಲೆ ನಿರ್ವಹಿಸಿದ್ದು ಇತಿಹಾಸದಲ್ಲೇ ಇದು ಮೊದಲ ಬಾರಿ ಅನ್ನಬಹುದು. ಒಂದೂವರೆ ಗಂಟೆಯ ಯುಗಳ ಯಕ್ಷ ರೂಪಕವದು .

Advertisement

ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಶಶಾಂಕ್ ಪಟೇಲ್, ಬ್ರಹ್ಮಾವರದ ಎಸ್ ಎಂ.ಎಸ್. ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಅವರು ಪತ್ನಿ ಶೃತಿ ಕಾಶಿ ಮತ್ತು ಈ ದಂಪತಿಗಳ ಏಕಮಾತ್ರ ಪುತ್ರಿ ಶ್ರೇಯಾ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಇತ್ತೀಚೆಗೆ ಆಡಿ ತೋರಿಸಿದ ಯಕ್ಷಗಾನ ಕಿರು ಪ್ರಸಂಗ ‘ಚಿತ್ರ ಫಲ್ಗುಣ’.

ಯಕ್ಷಗಾನದ ಹಿನ್ನೆಲೆಯಲ್ಲೇ ಬೆಳೆದ ಕಲಾವಿದರ ಅದ್ಭುತ ಅಭಿನಯದಿಂದ ವೇದಿಕೆ ಕಳೆಗಟ್ಟಿತು.(ಪ್ರಸ್ತುತಿ : ಯಕ್ಷೋನ್ನತಿ ಕಲಾತಂಡ, ಬ್ರಹ್ಮಾವರ. ರಚನೆ  ನಿರ್ದೇಶನ, ಭಾಗವತಿಕೆ :ಪ್ರಸಾದ್ ಕುಮಾರ್ ಮೊಗೆಬೆಟ್ಟು, ಮದ್ದಳೆ : ಎನ್.ಜಿ.ಹೆಗಡೆ. ಚೆಂಡೆ : ಕೃಷ್ಣ ಕೆ.ಜೆ.)’ಚಿತ್ರ ಫಲ್ಗುಣ’ ದ ಕಥೆ ಮಣಿಪುರಿಯ ರಾಜಕುಮಾರಿ ಮತ್ತು ಮಧ್ಯಮ ಪಾಂಡವ ಅರ್ಜುನರ ಪರಿಣಯ. ದ್ರೌಪದಿ ಪಂಚಪಾಡವರ ಮಡದಿಯಾದಾಗ ಆಕೆಯ ಜೊತೆಗೆ ಪ್ರತಿಯೊಬ್ಬ ಪಾಂಡವನೂ ಒಂದೊಂದು ವರ್ಷ ಕಳೆಯುವುದು ಮತ್ತು ಒಬ್ಬರು ಅವಧಿ ನಡೆಯುತ್ತಿರುವಾಗ ಇನ್ನೊಬ್ಬರು ನಡುವೆ ಪ್ರವೇಶಿಸಿದರೆ ಒಂದು ವರ್ಷ ಕಾಲ ಸಂನ್ಯಾಸಿಯಾಗಿದ್ದು ತೀರ್ಥಯಾತ್ರೆ ನಡೆಸಬೇಕು ಎಂಬ ಷರತ್ತು. ಹಾಗೆ ಧರ್ಮರಾಯನ ಸರದಿ ನಡೆಯುತ್ತಿದ್ದಾಗ ಒಮ್ಮೆ ಅರ್ಜುನ ವಿಧಿಯಿಲ್ಲದೆ ಅಣ್ಣನನ್ನು ಕಾಣಬೇಕಾಗಿದೆ ಎನ್ನುತ್ತಾರೆ.

ಪರಿಣಾಮವಾಗಿ ಮನೆಬಿಟ್ಟು ಸಂನ್ಯಾಸಿಯಾಗಿ ತೀರ್ಥಯಾತ್ರೆಗೆ ಹೊರಡುತ್ತಾನೆ. ತೀರ್ಥಯಾತ್ರೆಯ ಕೊನೆಯಲ್ಲಿ ಮಣಿಪುರಿಯ ಅರಣ್ಯ ಪ್ರದೇಶದಲ್ಲಿ ಧನುರ್ಧಾರಿಣಿಯಾಗಿ ಬೇಟೆಯಾಡುತ್ತಿದ್ದ ರಾಜಕುಮಾರಿ ಚಿತ್ರಾಂಗದೆಯನ್ನು ನೋಡಿ ಅವಳ ಸೌಂದರ್ಯಕ್ಕೆ ಮರುಳಾಗುತ್ತಾನೆ.

Advertisement

ಸಂನ್ಯಾಸಿಯಾಗಿದ್ದ ಅವನನ್ನು ಚಿತ್ರಾಂಗದೆ ನಿರ್ಲಕ್ಷ್ಯದಿಂದ ನೋಡುತ್ತಾಳೆ. ‘ನಿನಗೆ ಬೇಕಾದ ಸಾರಂಗವನ್ನು ನಾನೇ ಹೊಡೆದು ಕೊಡುವೆ, ನಿನ್ನ ಕೈಯಲ್ಲಿ ಇರುವ ಬಿಲ್ಲು ಬಾಣಗಳನ್ನು ಇಲ್ಲಿ ಕೊಡು’ಎಂದು ಫಾಲ್ಗುಣ ಹೇಳಿದಾಗ ಚಿತ್ರಾಂಗದೆ ಪಕ್ಕನೆ ನಕ್ಕು ತಾತ್ಸಾರ ಭಾವನೆ ತೋರಿಸುತ್ತಾಳೆ. ಇಡೀ ಜಗತ್ತಿನಲ್ಲಿ ಪಾರ್ಥನೊಬ್ಬನಿಂದ ಮಾತ್ರ ಅದು ಸಾಧ್ಯ ಅನ್ನುತ್ತಾಳೆ. ಆದರೆ ಅರ್ಜುನ ತನ್ನ ಶೌರ್ಯವನ್ನು ಸಾಬೀತು ಪಡಿಸಿದಾಗ ಅವಳಿಗೆ ತನ್ನ ತಪ್ಪಿನ ಅರಿವಾಗುತ್ತದೆ.ಅಷ್ಟರಲ್ಲಿ ಅವನು ಅಲ್ಲಿಂದ ಮುಂದೆ ಹೋಗಿರುತ್ತಾನೆ. ಪರಿತಪಿಸುತ್ತ ಅವನಿಗಾಗಿ ಕಾದು ಕುಳಿತ ಅವಳಿಗೆ ಮತ್ತೆ ಅವನ ದರ್ಶನವಾಗುತ್ತದೆ. ಪರಸ್ಪರ ಅನುರಾಗ ಹುಟ್ಟಿ ಆನಂದದ ಕ್ಷಣಗಳನ್ನು ಕಳೆದು ಅವರು ಗಾಂಧರ್ವ ವಿವಾಹವಾಗುವುದು ಎಂದು ನಿರ್ಧಾರ ಮಾಡುವಲ್ಲಿಗೆ ಪ್ರಸಂಗ ಕೊನೆಯಾಗುತ್ತದೆ.

ಇದು ಪುರಾಣದಲ್ಲಿ ಹೇಳಿರುವ ಯಥಾವತ್ತಾಗಿರುವ ಕಥೆ. ರವೀಂದ್ರನಾಥ ಟಾಗೋರ್ ಅವರ ನಾಟಕ ‘ಚಿತ್ರಾ’ದಲ್ಲಿರುವಂತೆ ಇಲ್ಲಿ ಕಥೆಗೆ ಯಾವ ಟ್ವಿಸ್ಟೂ ಇಲ್ಲ. ಯಕ್ಷಗಾನದ ಧಾಟಿಯಲ್ಲಿ ನೇರವಾದ ನಿರೂಪಣೆಯೇ ಇದೆ.

ಪುಟ್ಟಿ ಶ್ರೇಯಾಳದ್ದು ಆರಂಭದ ಬಾಲಗೋಪಾಲ ಪಾತ್ರ. ಯಕ್ಷಗಾನದ ಸರಳ ಹೆಜ್ಜೆಗಳನ್ನೂ ಭಾವ ಭಂಗಿಗಳನ್ನೂ ಅವಳು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿ ಬೆಳೆಯುವ ಸಿರಿಯನ್ನು ಎಳವೆಯಲ್ಲೇ ತೋರಿಸಿದಳು. ಅತ್ಯಂತ ರಸವತ್ತಾದ ಸನ್ನಿವೇಶಗಳು ಬಂದಿದ್ದು ಚಿತ್ರ  ಫಲ್ಗುಣರ ನಿರ್ವಹಣೆಯಲ್ಲಿ. ಉದ್ದಕ್ಕೂ ಸ್ಫುರಿಸಿದ ಅದ್ಭುತ  ಶೃಂಗಾರ ವೀರ ಕರುಣ ರಸಗಳು ವೇದಿಕೆಯ ಮೇಲೆ ಒಂದು ಹೊಸ ಲೋಕವೇ ಸೃಷ್ಟಿಸಿದವು.

ಸಂನ್ಯಾಸಿಯಾಗಿದ್ದ ಅರ್ಜುನನ ಬಗ್ಗೆ ತಾತ್ಸಾರ ತೋರಿಸುವಾಗ ಚಿತ್ರಾ ಬೇರೆ ಬೇರೆ ಸಂಚಾರಿ ಭಾವ ಭಂಗಿಗಳಲ್ಲಿ ಪದ್ಯದ ಆವರ್ತನೆಗೆ ತಕ್ಕಂತೆ ನಗುವುದು( ಬರುತಿದೆ ನಗೆಯುಕ್ಕಿ..), ಅವಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಫಲ್ಗುಣ ‘ಚಂದ್ರವದನೆಯೆ ಮಂಗಳಾಂಗಿಯೆ ಬಾರೇ’ ಮತ್ತು ಚಿತ್ರಾ ‘ಹೃದಯವೀಣೆಯಾ ವೈಣಿಕಾ’ಎಂದು ಹಲವು ಸಂಗತಿಗಳಲ್ಲಿ ಕುಣಿಯುವುದು, ಇಬ್ಬರೂ ಒಂದಾದ ಮೇಲೆ ಜತೆಯಾಗಿ ಹೆಜ್ಜೆ ಹಾಕುವಾಗ ಇಬ್ಬರಲ್ಲಿ ಕಾಣುವ ಶೃಂಗಾರ ಭಾವ ಎಲ್ಲವೂ ಆಕರ್ಷಕವೂ ಚೇತೋಹಾರಿಯೂ ಆಗಿದ್ದವು. ಪದ್ಯಗಳು ಸಾಹಿತ್ಯವೂ ಚೆನ್ನಾಗಿತ್ತು. ಸಂದರ್ಭೋಚಿತವಾಗಿ ಬದಲಾಯಿಸುತ್ತ ಭಾಗವತರು ಬಳಸುತ್ತಿದ್ದ ಮೋಹನ, ಶಿವರಂಜಿನಿ, ಕಲ್ಯಾಣಿ ಮೊದಲಾದ ರಾಗಗಳು ಮತ್ತು ಧ್ವನಿಯ ಏರಿಳಿತಗಳ ಪರಿ ದೃಶ್ಯಗಳ ಮೋಹಕತೆಯನ್ನು ಹೆಚ್ಚಿಸಿದವು. ಒಟ್ಟಿನಲ್ಲಿ ಒಂದು ಅಪೂರ್ವ ಅನುಭವವನ್ನಿತ್ತ ಆಟ ‘ಚಿತ್ರ ಫಲ್ಗುಣ’.

*ಡಾ.ಪಾರ್ವತಿ ಜಿ.ಐತಾಳ್

Advertisement

Udayavani is now on Telegram. Click here to join our channel and stay updated with the latest news.

Next