ಚಳ್ಳಕೆರೆ: ಕಳೆದ ಎರಡು ವರ್ಷಗಳಿಂದ ದೇಶದ ಜನತೆಗೆ ಗಂಡಾಂತರ ರೂಪದಲ್ಲಿ ಒದಗಿದ ಕೊರೊನಾವನ್ನು ನಿಯಂತ್ರಿಸಿ ಲಕ್ಷಾಂತರ ಜನರ ಪ್ರಾಣ ರಕ್ಷಿಸಿದ ಕೀರ್ತಿ ಆರೋಗ್ಯ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಸೇರುತ್ತದೆ. ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಎಲ್ಲರ ಪ್ರಾಣ ರಕ್ಷಣೆಗೆ ಶ್ರಮಿಸಿದ ಇವರ ಸೇವೆ ಅನನ್ಯ ಎಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಶಾಸಕರ ಭವನದ ಮುಂಭಾಗದಲ್ಲಿ ಕಸಬಾ ಹೋಬಳಿ ಮಟ್ಟದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಜಾಡಮಾಲಿಗಳಿಗೆ ಶಾಸಕರು ಕೊಡುಗೆಯಾಗಿ ನೀಡಿದ ಆಹಾರ ಕಿಟ್ ವಿತರಿಸಿ ಶ್ರೀಗಳು ಮಾತನಾಡಿದರು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮೀಣ ಭಾಗದ ಜಾಡಮಾಲಿಗಳಿಗೆ ಶಾಸಕ ಟಿ. ರಘುಮೂರ್ತಿಯವರು ಆಹಾರ ಕಿಟ್ ನೀಡುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ ಎಂದರು.
ಬೇರೆ ದೇಶಗಳಲ್ಲಿ ಕೊರೊನಾ ತಾಂಡವಾಡುತ್ತಿದ್ದರೂ ಅಲ್ಲಿನ ಜನಸಂಖ್ಯೆ ಕಡಿಮೆ ಇದೆ. ಹಾಗಾಗಿ ಹೆಚ್ಚು ಅಪಾಯ ಉಂಟಾಗಲಿಲ್ಲ. ಆದರೆ ಭಾರತದಲ್ಲಿ ಸುಮಾರು 140 ಕೋಟಿ ಜನರಿದ್ದು, ಹೆಚ್ಚು ಜನರು ಕೊರೊನಾ ಸೋಂಕಿಗೆ ತುತ್ತಾಗದಂತೆ ಸರ್ಕಾರ ಎಲ್ಲಾ ರೀತಿಯ ಜಾಗ್ರತೆ ವಹಿಸಿದೆ. ವೈದ್ಯರು ಮತ್ತು ಸಿಬ್ಬಂದಿ ವರ್ಗದ ಸೇವೆಯೂ ಅತ್ಯಮೂಲ್ಯ ಎಂದು ಶ್ಲಾಘಿಸಿದರು.
ಚಿತ್ರದುರ್ಗದ ಯಾದವ ಪೀಠದ ಜಗದ್ಗುರು ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಜನರು ಆತಂಕದಲ್ಲಿಯೇ ಬದುಕುವ ಸ್ಥಿತಿ ಉಂಟಾಗಿತ್ತು. ಇಂತಹ ಸಂದರ್ಭದಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮನೆಗಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಕೊರೊನಾ ಸೋಂಕು ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಪ್ರಾಮಾಣಿಕ ಸೇವೆಗೆ ನಾವೆಲ್ಲರೂ ತಲೆಬಾಗಬೇಕಿದೆ. ಇಂದು ನಾವೆಲ್ಲರೂ ನಮ್ಮ ಪ್ರಾಣವನ್ನು ರಕ್ಷಿಸಿಕೊಂಡಿದ್ದೇವೆಂದರೆ ಅದಕ್ಕೆ ಕಾರಣ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಪೌರ ಕಾರ್ಮಿಕರು ಎಂದು ಬಣ್ಣಿಸಿದರು.