ಹೊಸದುರ್ಗ: ಕಲ್ಲಿನ ಕೋಟೆಗೆ ಹೆಸರಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚು ಗಿಡ ಮರಗಳನ್ನು ಬೆಳಸುವ ಮೂಲಕ ಹಸಿರು ಕೋಟೆಯನ್ನಾಗಿ ಪರಿವರ್ತಿಸಲು ಮುಂದಾಗಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾ ಧೀಶೆ ಎಂ.ಎಸ್. ಶಶಿಕಲಾ ಕರೆ ನೀಡಿದರು. ಪಟ್ಟಣದ ಎನ್‌ಇಎಸ್ ಬಡಾವಣೆ ಹಿಂಭಾಗದಲ್ಲಿರುವ ಹನುಮನ ಗುಡ್ಡದಲ್ಲಿ ದಳವಾಯಿ ಗ್ರೂಪ್ಸ್, ಮುರಗೇಶ್ ಫಾರ್ಮ್, ಲಯನ್ಸ್ ಕ್ಲಬ್ ಹಾಗೂ ಪತಂಜಲಿ ಯೋಗ ಶಿಕ್ಷಣ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಬೀಜದ ಉಂಡೆ ಬಿತ್ತನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮನುಷ್ಯನ ಸ್ವಾರ್ಥಕ್ಕೆ ಪರಿಸರ ನಾಶವಾಗುತ್ತಿದೆ.
ಪರಿಸರ ನಾಶ ಮಾಡಿದಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆಯೆಂದು ಈಗಾಗಲೇ ಪ್ರಕೃತಿ ಮನುಷ್ಯನಿಗೆ ಪಾಠ ಕಲಿಸಿದೆ. ಮಾನವರು ಇನ್ನಾದರೂ ಬುದ್ದಿ ಕಲಿತುಕೊಂಡು ಪರಿಸರ ಉಳಿವಿಗೆ ಶ್ರಮಿಸಬೇಕು. ವಿವಿಧ ಬೀಜದ ಉಂಡೆಗಳನ್ನು ಬಿತ್ತನೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ಸಂಘ-ಸಂಸ್ಥೆಗಳು ನಿರಂತರವಾಗಿ ಆಯೋಜನೆ ಮಾಡುವ ಮೂಲಕ ಇಂದಿನ ಪೀಳಿಗೆಯಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಅಗತ್ಯವಿದೆ ಎಂದರು.
ಹೈಕೋರ್ಟ್ ನಿವೃತ್ತ ನ್ಯಾಯಾ ಧೀಶ ಎಚ್. ಬಿಲ್ಲಪ್ಪ ಮಾತನಾಡಿ, ಒಳ್ಳೆಯ ಗಾಳಿ, ಬೆಳಕು, ನೀರು ಪೂರೈಸುವ ಉತ್ತಮ ಪರಿಸರ ಮನುಷ್ಯನಿಗೆ ಸಂತೋಷದ ಮೂಲ. ಇಂತಹ ಪರಿಸರದಲ್ಲಿ ಮನುಷ್ಯ ನೆಮ್ಮದಿಯಾಗಿ ಜೀವಿಸಬಹುದು. ಆದರೆ ಅತಿಯಾದ ಸ್ವಾರ್ಥದಿಂದ ಪರಿಸರ ವಿನಾಶಕ್ಕೆ ಮುಂದಾಗಿದ್ದಾನೆ. ಮನುಷ್ಯರ ಬದುಕು ಇಲ್ಲಿಗೆ ಕೊನೆಯಾಗುವುದಿಲ್ಲ.
ಅದು ಮುಂದಿನ ಪೀಳಿಗೆಗೆ ವರ್ಗಾವಣೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಜೀವಿತಾವ ಧಿಯಲ್ಲಿ ಪರಿಸರವನ್ನು ಬೆಳೆಸುವ ಕೆಲಸವಾಗಬೇಕು. ಇಲ್ಲದಿದ್ದಲ್ಲಿ ಮಾನವ ಕುಲದ ವಿನಾಶಕ್ಕೆ ಒಂದು ಬಗೆಯ ವೈರಸ್ ಸಾಕಾಗುತ್ತದೆ. ಈಗಲಾದರೂ ಮನುಷ್ಯ ಜೀವಿ ಎಚ್ಚರಗೊಳ್ಳಬೇಕು ಎಂದು ತಿಳಿಸಿದರು. ನೇರಳ, ಹೊಂಗೆ, ಹೊಳೆಮತ್ತಿ, ಸಿಮರುಬಾ, ಕಮರ, ತಬಸಿ, ಹೊನ್ನೆ, ಬೀಟೆ, ಬಾಗೆ, ಗುಲ್ ಮೊಹರ್ ಸೇರಿದಂತೆ ವಿವಿಧ ತಳಿಯ 20 ಸಾವಿರಕ್ಕೂ ಹೆಚ್ಚು ಬೀಜದುಂಡೆಗಳನ್ನು ಬಿತ್ತನೆ ಮಾಡಲಾಯಿತು.
ಈ ವೇಳೆ ಜೆಎಂಎಫ್‌ಸಿ ನ್ಯಾಯಾ ಧೀಶ ಗಂಗಾಧರ ಬಡಿಗೇರ, ಮಾಜಿ ಶಾಸಕ ಟಿ.ಎಚ್. ಬಸವರಾಜಪ್ಪ, ಸಹಕಾರ ಇಲಾಖೆ ಜಂಟಿ ನಿಬಂಧಕ ಪಾಂಡುರಂಗ ಗರಗ, ಜಿಪಂ ಮಾಜಿ ಸದಸ್ಯ ಕೆ. ಅನಂತ್, ಡಾ| ಮುರುಗೇಶ್, ಪುರಸಭೆ ಮಾಜಿ ಸದಸ್ಯ ವೆಂಕಟೇಶ್ ದಳವಾಯಿ, ಗಾಳಿರಂಗಯ್ಯನಹಟ್ಟಿ ಶ್ರೀನಿವಾಸ್, ಎಂಆರ್‌ಸಿ ಮೂರ್ತಿ, ನಾಗೇನಹಳ್ಳಿ ಮಂಜುನಾಥ್, ಕೋಡಿಹಳ್ಳಿ ತಮ್ಮಣ್ಣ, ಗೋಪಾಲ್, ವಕೀಲರ ಸಂಘದ ಅಧ್ಯಕ್ಷ ಗಂಗಾಧರ, ವಕೀಲ ಗುರುಬಸಪ್ಪ, ಉದ್ಯಮಿ ಮಠ ಶಿವು, ಬೋಕಿಕೆರೆ ಸತೀಶ್, ಅಶೋಕ್, ಬಾಗೂರು ಯತೀಶ್, ಪಿಡಿಓ ಜಯಣ್ಣ, ಶಾಂತಕುಮಾರ್ ಮತ್ತಿತರರು ಇದ್ದರು.