Advertisement

ಬಿಂದುಮಾಧವರಲ್ಲಿತ್ತು ಸಮತ್ವ ಮನೋಭಾವ

06:18 PM Jul 27, 2021 | Team Udayavani |

ಚಿತ್ರದುರ್ಗ: ಎಲ್ಲವನ್ನೂ ಪರರಿಗಾಗಿ ತ್ಯಾಗ ಮಾಡಿದ, ಸರ್ವಸಂಗ ಪರತ್ಯಾಗಿ ಬೆಲಗೂರು ಬಿಂದು ಮಾಧವ ಶರ್ಮಾ ಗುರುಗಳು ಎಂದು ಹಿರಿಯ ಸಾಹಿತಿ ಡಾ| ಲೋಕೇಶ್‌ ಅಗಸನಕಟ್ಟೆ ಅಭಿಪ್ರಾಯಪಟ್ಟರು. ಅಖೀಲ ಭಾರತೀಯ ಸಾಹಿತ್ಯ ಪರಿಷತ್ತಿನ ಚಿತ್ರದುರ್ಗ ಜಿಲ್ಲಾ ಘಟಕದಿಂದ ಭಾನುವಾರ ರಾತ್ರಿ ಆನ್‌ಲೈನ್‌ ಮೂಲಕ ಆಯೋಜಿಸಿದ್ದ ಅವಧೂತ ಪರಂಪರೆ-ಸರಣಿ ಉಪನ್ಯಾಸ ಮಾಲಿಕೆಯ ಎರಡನೇ ಕಂತಿನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

Advertisement

ಮನುಷ್ಯನ ಆತ್ಮವಿಕಾಸದ ಹಾದಿಯಲ್ಲಿ ಸಿದ್ದ ಪರಂಪರೆ, ನಾಥ ಪರಂಪರೆ, ಅವಧೂತ ಪರಂಪರೆಗಳು ಹೇಗೆ ಕೆಲಸ ಮಾಡಿವೆ ಎನ್ನುವುದನ್ನು ಒಳ ಹೊಕ್ಕು ನೋಡಿದಾಗ ಮಾತ್ರ ಗೊತ್ತಾಗುತ್ತದೆ. ಹೊರಗಿನಿಂದ ನೋಡಿದಾಗ ಇದೊಂದು ವಿಲಕ್ಷಣ ಜಗತ್ತು ಅನ್ನಿಸುತ್ತದೆ. ಹೀಗೆ ಭಾವಿಸುವವರ ಅಜ್ಞಾನದ ಬಗ್ಗೆ ಮರುಕವಿದೆ. ಸಿದ್ಧ, ಸಾಧಕರು, ಅವಧೂತರ ನೆಲೆ ಚಿತ್ರದುರ್ಗ. ಹಿರಿಯ ಸಾಹಿತಿ ಕಣಜನಹಳ್ಳಿ ನಾಗರಾಜ್‌ ಜಿಲ್ಲೆಯ ಅವಧೂತರ ಬಗ್ಗೆ ಮೊದಲ ಬಾರಿಗೆ ಕೃತಿ ರಚಿಸಿದ್ದಾರೆ ಎಂದರು.

ಸಾಧನೆ ಮಾಡಲು ಹಿಮಾಲಯಕ್ಕೆ ಹೋಗಬೇಕಿಲ್ಲ. ಇಲ್ಲಿಯೇ ಇದ್ದು ಸಾಧನೆ ಮಾಡಬಹುದು ಎನ್ನುವ ನಿಲುವು ಬಿಂದುಮಾಧವರಲ್ಲಿತ್ತು. ಅಧ್ಯಾತ್ಮ ಲೋಕದ ವಿಸ್ಮಯಗಳನ್ನು ತರ್ಕದ ಮೂಲಕ ವಿಮರ್ಶೆ ಮಾಡಲು ಆಗುವುದಿಲ್ಲ. ಹಠಯೋಗಿಗಳು, ಅವಧೂತರಿಗೆ ದೂರದರ್ಶಿತ್ವ ಇರುತ್ತದೆ ಎನ್ನುವುದು ಬಿಂದುಮಾಧವರ ವಿಚಾರದಲ್ಲಿ ನನಗೆ ಅನುಭವಕ್ಕೆ ಬಂದಿದೆ ಎಂದರು. ಯೋಗ, ಧ್ಯಾನದ ಮೂಲಕ ನಮ್ಮೊಳಗಿರುವ ನಾನು ಎಂಬ ಅಹಂಕಾರ ತೊರೆದು, ನಾನು ಎಲ್ಲರಿಗಾಗಿ ಇದ್ದೇನೆ ಎನ್ನುವ ವಿಶ್ವಪ್ರಜ್ಞೆ ಉಳ್ಳವರು ಅಷ್ಟ ಶಕ್ತಿಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ. ಬಿಂದುಮಾಧವ ಗುರುಗಳು ಸಾಕಷ್ಟು ಸಾಧನೆಗಳನ್ನು ಮಾಡುತ್ತಿದ್ದರೂ ಸಾಮಾನ್ಯ ಜೀವನ ನಡೆಸುತ್ತಿದ್ದರು. ಬೆಳಗ್ಗೆ ಎದ್ದು ಬೈಕಿನಲ್ಲಿ ತೋಟಕ್ಕೆ ಹೋಗಿ ಹಾಲು ತರುತ್ತಿದ್ದರು.

ಭಕ್ತರ ಜೊತೆ ಮಾತನಾಡುತ್ತಿದ್ದರು. ಬೆಲಗೂರಿಗೆ ಬರುವ ಭಕ್ತರಿಗೆ ಸಂತೃಪ್ತಿಯಾಗುವಷ್ಟು ಊಟ ಬಡಿಸುವುದು ಅವರಿಗೆ ಪ್ರೀತಿಯ ಕೆಲಸವಾಗಿತ್ತು. ಭಕ್ತರ ಸಂಕಟವನ್ನು ತಮ್ಮದು ಎಂದು ಭಾವಿಸಿದವರು ಎಂದು ಸ್ಮರಿಸಿದರು. ಅವಧೂತರ ಪವಾಡಗಳು ಲೌಕಿಕದ ಜನರಿಗೆ ಕಾಗಕ್ಕ, ಗುಬ್ಬಕ್ಕನ ಕಥೆಗಳಂತೆ ಕಾಣಿಸುತ್ತವೆ. ಅಷ್ಟ ಸಿದ್ಧಿ ಪಡೆದುಕೊಂಡಿದ್ದ ಗುರುಗಳು ಆಂಜನೇಯನನ್ನು ಒಲಿಸಿಕೊಂಡಿದ್ದರು. ಹನುಮನೇ ನಿಜವಾದ ಮೊತ್ತ ಮೊದಲ ಅವಧೂತ ಎನ್ನಬಹುದು ಎಂದು ಅಗಸನಕಟ್ಟೆ ಹೇಳಿದರು.

ನಮ್ಮ ಪೂರ್ವಾಗ್ರಹದ ಕಾರಣಕ್ಕೆ ಅವರ ಒಡನಾಟ ಸಿಗಲು ತಡವಾಯಿತು. ಒಂದಿಷ್ಟು ವರ್ಷ ಮೊದಲು ಅವರ ಸಂಪರ್ಕ ಸಿಕ್ಕಿದ್ದರೆ ಇನ್ನೂ ಒಂದಿಷ್ಟು ಕೃತಿಗಳನ್ನು ರಚನೆ ಮಾಡಬಹುದಿತ್ತು. ಸಮತ್ವದ ಮನೋಭಾವ ಬಿಂದುಮಾಧವರಲ್ಲಿತ್ತು. ಅವರು ಬೋಧಕರಲ್ಲ, ಸಾಧಕರು. ಬಾಳಿ ತೋರಿಸಿದವರು ಎಂದು ತಿಳಿಸಿದರು.

Advertisement

ಅಭಾಸಾಪ ಜಿಲ್ಲಾಧ್ಯಕ್ಷ ಯೋಗೀಶ್‌ ಸಹ್ಯಾದ್ರಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಡಾ| ರವಿಕಿರಣ್‌ ನಿರ್ವಹಣೆ ಮಾಡಿದರು. ಉಪನ್ಯಾಸಕ ದೊಡ್ಡಯ್ಯ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕ ಕೆಂಚವೀರಪ್ಪ ವಂದಿಸಿದರು. ಅಭಾಸಾಪ ಜಿಲ್ಲಾ ಗೌರವಾಧ್ಯಕ್ಷ ಕಣಜನಹಳ್ಳಿ ನಾಗರಾಜ್‌, ಶಿವಮೊಗ್ಗ ವಿಭಾಗ ಸಂಯೋಜಕ ಶ್ರೀಹರ್ಷ ಹೊಸಳ್ಳಿ, ಕೊಳಾಳು ಕೆಂಚಪ್ಪ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next