ಚಿತ್ರದುರ್ಗ: ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರ ಜನ್ಮದಿನಾಚರಣೆ ಅಂಗವಾಗಿ ರಾಷ್ಟ್ರನಾಯಕ ಎಸ್. ನಿಜಲಿಂಗಪ್ಪ ಸ್ಮಾರಕದ ಆವರಣದಲ್ಲಿ ನೂರು ತೇಗದ ಸಸಿಗಳನ್ನು ನೆಡಲಾಯಿತು. ಸಸಿ ನೆಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯಸಭೆ ಮಾಜಿ ಸದಸ್ಯ ಹಾಗೂ ಎಸ್.ಎನ್. ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ಎಚ್. ಹನುಮಂತಪ್ಪ ಮಾತನಾಡಿ, ಮಾದಾರ ಚನ್ನಯ್ಯ ಸ್ವಾಮೀಜಿಯವರು ತಮ್ಮ ಸರಳ ಹಾಗೂ ಮಾನವೀಯ ನಡವಳಿಕೆಯಿಂದಾಗಿ ಅಪಾರ ಭಕ್ತ ಸಮೂಹ ಹಾಗೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ನಾಡಿನ ಸಾಕ್ಷಿಪ್ರಜ್ಞೆಯಾಗಿ ಸಮಾಜಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಶ್ರೀಗಳ ಜನ್ಮದಿನವನ್ನು ಅರ್ಥಪೂರ್ಣವಾಗಿಸಲು ಎಸ್.ಎನ್. ಸ್ಮಾರಕದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಶ್ರೀ ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಮಾದಾರ ಚನ್ನಯ್ಯ ಶ್ರೀಗಳು ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವದವರು.
ಸದಾ ಹೊಸ ಸಾಹಸಗಳಿಗೆ ಒಡ್ಡಿಕೊಳ್ಳುವ ಅವರ ಗುಣದಿಂದಾಗಿ ವಿಶಿಷ್ಟ ಶ್ರೀಗಳಾಗಿ ಗುರುತಿಸಿಕೊಂಡಿದ್ದಾರೆ. ಅವರ ಜನ್ಮದಿನಾಚಾರಣೆ ಸಂದರ್ಭದಲ್ಲಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಿರುವುದು ಔಚಿತ್ಯಪೂರ್ಣ ಎಂದು ಶ್ಲಾಘಿಸಿದರು.
ನಂತರ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಭಕ್ತ ಸಮೂಹ ಏರ್ಪಡಿಸಿದ್ದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಡಾ| ಶಾಂತವೀರ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ರೇಣುಕಾನಂದ ಸ್ವಾಮೀಜಿ, ಶ್ರೀ ಷಡಕ್ಷರಮುನಿ ಸ್ವಾಮೀಜಿ, ಶ್ರೀ ಬಸವ ಹರಳಯ್ಯ ಸ್ವಾಮೀಜಿ, ಮಾಜಿ ಶಾಸಕ ಎಸ್.ಕೆ. ಬಸವರಾಜನ್, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಕಾಂಗ್ರೆಸ್ ಮುಖಂಡರಾದ ಜಿ.ಎಸ್. ಮಂಜುನಾಥ್, ಕೆ.ಎಂ. ಹಾಲೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್. ನವೀನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಬದರಿನಾಥ್ ಸೇರಿದಂತೆ ಅನೇಕ ಮುಖಂಡರು, ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.